ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಬಹಿರಂಗವಾಗಿ ಕಾಣಿಸಿಕೊಳ್ಳಲ್ಲ. ಕನ್ನಡಿಗರು ಹಲವು ಸಿಎಂಗಳನ್ನು ನೋಡಿದ್ದಾರೆ. ಅವರ ಪತ್ನಿಯರನ್ನೂ ನೋಡಿದ್ದಾರೆ. ಆದರೆ ಈ ವಿಷಯದಲ್ಲಿ ಸಿದ್ದರಾಮಯ್ಯ ಸ್ವಲ್ಪ ಡಿಫರೆಂಟ್. ಅವರಿಗಿಂತ ಹೆಚ್ಚಾಗಿ ಅವರ ಪತ್ನಿ ಪಾರ್ವತಿ ಅವರಿಗಿಂತ ಡಿಫರೆಂಟ್. ಸಿದ್ದರಾಮಯ್ಯ ಮೊದಲ ಬಾರಿ ಅಧಿಕಾರದಲ್ಲಿದ್ದಾಗಲೂ, ದೂರವೇ ಇದ್ದ ಪಾರ್ವತಿಯವರು, ಎರಡನೇ ಬಾರಿ ಸಿಎಂ ಆದಾಗಲೂ ಅಷ್ಟೆ, ಅಂತರ ಕಾಯ್ದುಕೊಂಡಿದ್ದಾರೆ. ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ, ಮಕ್ಕಳ ಹುಟ್ಟುಹಬ್ಬಕ್ಕೆ ಹಠ ಹಿಡಿದು ತಿರುಪತಿಗೆ ಕರೆದುಕೊಂಡು ಹೋಗುವ ಪಾರ್ವತಮ್ಮ, ಗಂಡನಿಗೊಂದು ವಾಚ್ ಗಿಫ್ಟ್ ಕೊಟ್ಟಿದ್ದಾರೆ. ಅದೂ ರಾಡೋ ವಾಚು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮೊದಲು ಸಿದ್ದರಾಮಯ್ಯ ವಾಚ್ ತೋರಿಸಿದ್ದು ಸಚಿವ ಎಂ.ಬಿ.ಪಾಟೀಲ್ ಅವರಿಗೆ. ಅವರಿಬ್ಬರ ಗುಸುಗುಸು ಎಲ್ಲರ ಗಮನ ಸೆಳೆದಿದ್ದೂ ಹೌದು. ವಾಚ್ ತೋರಿಸಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೈಖರಿ ಏನೋ ನಡೆಯುತ್ತಿದೆ ಎಂಬಂತೆ ಕಾಣಿಸಿದ್ದೂ ಹೌದು. ಆನಂತರ ವಾಚ್`ನ್ನು ಡಿಕೆ ಶಿವಕುಮಾರ್ ಅವರಿಗೂ ತೋರಿಸಿ ವಾಚಿನ ಕಥೆ ಹೇಳಿಕೊಂಡಿದ್ದಾರೆ ಸಿದ್ದರಾಮಯ್ಯ.
ಅಂದಹಾಗೆ ಇನ್ನು ಮುಂದೆ ಸಿದ್ದರಾಮಯ್ಯ ಹೊಸ ವಾಚು ಹಾಕಿಕೊಳ್ಳೋ ಹಾಗಿಲ್ಲ. ಹೆಂಡತಿ ಕೊಟ್ಟ ವಾಚನ್ನೇ ಧರಿಸಿರಬೇಕು. ಅದರ ಹಿಂದೊಂದು ಕಥೆಯೂ ಇದೆ. ಕಳೆದ ಬಾರಿ ಯಾರೋ ಕೊಟ್ಟರು ಎಂದು ಧರಿಸಿದ್ದ ಹ್ಯೂಬ್ಲೋಟ್ ವಾಚು ದೊಡ್ಡ ಹಗರಣವನ್ನೇ ಸೃಷ್ಟಿಸಿತ್ತು. ಅದು ಕದ್ದ ವಾಚು, ಸಿದ್ದರಾಮಯ್ಯ ಕೈಗೆ ಹೇಗೆ ಬಂತು ಎಂದು ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಪ್ರಶ್ನಿಸಿದ್ದರು. ಕೊನೆಗೆ ಅದನ್ನು ಸ್ಪೀಕರ್ ಕಚೇರಿಗೆ ನೀಡಿ ವಿವಾದದಿಂದ ಪಾರಾಗಿದ್ದರು ಸಿದ್ದು. ಈಗ ಪಾರ್ವತಮ್ಮನವರು ಕೊಟ್ಟಿರುವ ಒಲವಿನ ಉಡುಗೊರೆ ರ್ಯಾಡೋ ವಾಚು ಸದ್ದು ಮಾಡುತ್ತಿರುವುದೂ ಆ ಕಾರಣಕ್ಕೆ.



