ಸಿದ್ದರಾಮಯ್ಯ ಆಸ್ತಿ ಈ ಬಾರಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಎರಡೂಪವರೆ ಪಟ್ಟು ಏರಿಕೆ ಕಂಡಿದೆ. ಸಿದ್ದರಾಮಯ್ಯ ಅವರು 2013ರ ಚುನಾವಣೆಯಲ್ಲಿ 13.61 ಕೋಟಿ ರೂ., 2018 ಚುನಾವಣೆಯಲ್ಲಿ 20.36 ಕೋಟಿ ರೂ., ಆಸ್ತಿ ಘೋಷಣೆ ಮಾಡಿದ್ದರು. ಆದರೆ, ಕಳೆದ ಐದು ವರ್ಷಗಳಲ್ಲಿ ಅಂದರೆ 2018 ರಿಂದ 2023ರಲ್ಲಿ ಅವರ ಆಸ್ತಿ 30.4 ಕೋಟಿ ರೂ. ಹೆಚ್ಚಾಗಿದೆ.
ಸಂಪತ್ತಿನಲ್ಲೂ ಸಾಲದಲ್ಲೂ ಹೆಂಡತಿಯೇ ಜಾಸ್ತಿ..!
ಸ್ಪೆಷಲ್ಲು ಏನೆಂದರೆ ಆಸ್ತಿ ಲೆಕ್ಕದಲ್ಲಿ ಸಿದ್ದರಾಮಯ್ಯ ಅವರಿಗಿಂತ ಹೆಂಡತಿ ಪಾರ್ವತಿಯವರೇ ಶ್ರೀಮಂತರು. ಸಾಲದ ಲೆಕ್ಕದಲ್ಲಿ ಕೂಡಾ ಪಾರ್ವತಿಯವರದ್ದೇ ಹೆಚ್ಚು. ಸಿದ್ದರಾಮಯ್ಯ ನವರ ಸಾಲ 23.7 ಕೋಟಿ ರೂ. ಇದೆ. ಈ ಪೈಕಿ ಸ್ವತಃ ಸಿದ್ದರಾಮಯ್ಯ ಅವರ ಮೇಲೆ 6.84 ಕೋಟಿ ರೂ. ಸಾಲ, ಪತ್ನಿ ಪಾರ್ವತಿ ಅವರ ಮೇಲೆ 16.24 ಕೋಟಿ ರೂ. ಸಾಲ, ಕುಟುಂಬದ ಮೇಲೆ 67 ಲಕ್ಷ ರೂ. ಸಾಲವಿದೆ.
ಸ್ಥಿರಾಸ್ತಿ ಪೈಕಿ ಸಿದ್ದರಾಮಯ್ಯ ಅವರ ಹೆಸರಲ್ಲಿ 9.58 ಕೋಟಿ ರೂ., ಪತ್ನಿ ಪಾರ್ವತಿ ಬಳಿ 11.26 ಕೋಟಿ ರೂ., ಅವಿಭಕ್ತ ಕುಟುಂಬದ ಆಸ್ತಿ 47.3 ಲಕ್ಷ ರೂ. ಇದೆ. ಚರಾಸ್ತಿ ಪೈಕಿ ಸಿದ್ದರಾಮಯ್ಯನವರ ಬಳಿ 9.43 ಕೋಟಿ ರೂ., ಪತ್ನಿ ಬಳಿ 20.85 ಕೋಟಿ ರೂ., ಅವಿಭಕ್ತ ಕುಟುಂಬದ ಆಸ್ತಿ 32 ಲಕ್ಷ ರೂ. ಇದೆ. ಈ ಮೂಲಕ ಸಿದ್ದರಾಮಯ್ಯ ಅವರಿಗಿಂತ ಅವರ ಪತ್ನಿ ಹೆಚ್ಚು ಸಿರಿವಂತೆಯಾಗಿದ್ದಾರೆ.
ಪತ್ನಿ, ಮಗನಿಗೆ ಸಾಲ.. ಜಾರ್ಜ್ ಅವರಿಗೆ ಸಾಲಗಾರ..!
ಸಿದ್ದರಾಮಯ್ಯ ಅವರು ಪತ್ನಿ ಪಾರ್ವತಿ ಅವರಿಗೆ 6 ಕೋಟಿ ರೂ. ಸಾಲ, ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ 1.83 ಕೋಟಿ ರೂ. ಸಾಲ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಬಳಿ 28 ಲಕ್ಷ ರೂ. ಮೌಲ್ಯದ ಟೊಯೊಟಾ ಕಾರು ಇದೆ. ಶಾಸಕ ಕೆಜೆ ಜಾರ್ಜ್ಯಿಂದ 4 ಕೋಟಿ ರೂ. ಸಾಲ ಪಡೆದಿದ್ದಾರೆ.
ಸಿದ್ದರಾಮಯ್ಯ ಅವರು 22.26 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಹೊಂದಿದ್ದಾರೆ. ಪತ್ನಿ ಬಳಿ 35 ಲಕ್ಷ ರೂ. ಮೌಲ್ಯದ 540 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ ಇದೆ. ಅವಿಭಕ್ತ ಕುಟುಂಬದ ಬಳಿ 40 ಲಕ್ಷ ರೂ ಮೌಲ್ಯದ 610 ಗ್ರಾಂ ಚಿನ್ನ, 5.750 ಕೆಜಿ ಬೆಳ್ಳಿ ಇದೆ.



