ನಿರೀಕ್ಷೆಯಂತೆಯೇ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ನಿನ್ನೆಯೇ ಇದು ಹೆಚ್ಚೂ ಕಡಿಮೆ ಫೈನಲ್ ಆಗಿತ್ತಾದರೂ, ಕಡೆಯ ಕ್ಷಣದಲ್ಲಿ ಸುರ್ಜೇವಾಲಾ ಇದೆಲ್ಲ ವದಂತಿ ಕಣ್ರೀ ಎಂದು ಎಡವಟ್ಟು ಮಾಡಿಬಿಟ್ಟರು. ಆ ಒಂದು ಹೇಳಿಕೆಯ ಎಫೆಕ್ಟ್ ಕಂಠೀರವ ಕ್ರೀಡಾಂಗಣದ ಸಿದ್ಧತೆಗೆ ಬ್ರೇಕ್ ಬಿತ್ತು. ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಬಿತ್ತು. ಮಂತ್ರಿ ಕನಸು ಕಾಣುತ್ತಿದ್ದವರಿಗೆ ಕನಸಿಗೂ ಬ್ರೇಕ್ ಬಿತ್ತು. ಪುಷ್ಪಾ ಅಮರನಾಥ್, ಅಶೋಕ್ ಪಟ್ಟಣ್`ರವರಿಗೆ ಶೋಕಾಸ್ ನೋಟಿಸ್ ಬಿತ್ತು. ಅಫ್‍ಕೋರ್ಸ್.. ಆಗ ಸಿಎಂ ಯಾರು ಎಂಬುದು ಅಧಿಕೃತವಾಗಿರಲಿಲ್ಲ. ಹೀಗಾಗಿಯೇ ರಾತ್ರಿ ತಮ್ಮನ್ನು ಭೇಟಿ ಮಾಡಿದ ವರದಿಗಾರರಿಗೆ ಡಿಕೆ ಗರಂ ಆಗಿ ಉತ್ತರಿಸಿದ್ದು. ಸಹಜ ಬಿಡಿ.
ಆದರೆ ಡಿಕೆ ಶಿವಕುಮಾರ್ ಈ ಬಾರಿ ಬಡಪೆಟ್ಟಿಗೆ ಮಣಿದಿಲ್ಲ. ಪಕ್ಷ ಪಕ್ಷ ಎಂದು ಹೋದವರಿಗೆ ಕೊನೆಗೆ ಸಿಗೋದು ಇದೇನಾ..? ಪಕ್ಷಕ್ಕಾಗಿ ಜೈಲಿಗೆ ಹೋಗಿದ್ದಾಯ್ತು. ಇಡೀ ಕುಟುಂಬವನ್ನು ಜೈಲಿನ ಬಾಗಿಲಲ್ಲಿ ಕಾಯಿಸಿದ್ದಾಯ್ತು. ತಾಯಿ, ಮಗಳು, ಹೆಂಡತಿ, ತಮ್ಮ.. ಎಲ್ಲರೂ ನರಕ ಅನುಭವಿಸಿದೆವು. ಅಷ್ಟೆಲ್ಲ ಆದರೂ ಪಟ್ಟು ಬಿಡದೆ ಹೋರಾಡಿ ಸಂಘಟನೆ ಮಾಡಿ ಪಕ್ಷವನ್ನೂ ಅಧಿಕಾರಕ್ಕೆ ತಂದೆ. ಇಷ್ಟೆಲ್ಲ ಅನುಭವಿಸಿ.. ಜೊತೆಯಲ್ಲೇ ಪಕ್ಷವನ್ನು ಅಧಿಕಾರಕ್ಕೆ ತಂದು, ಅಧಿಕಾರವನ್ನು ಮಾತ್ರ ಇನ್ನೊಬ್ಬ ವ್ಯಕ್ತಿಗೆ ಬಿಟ್ಟು ಕೊಡಬೇಕಾ ಎಂಬ ಡಿಕೆ ಪ್ರಶ್ನೆಗೆ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ, ರಾಹುಲ್ ಗಾಂಧಿ ಯಾರಲ್ಲಿಯೂ ಉತ್ತರ ಇರಲಿಲ್ಲ.
ಅಡ್ಜಸ್ಟ್‍ಮೆಂಟ್, 50:50 ಸೂತ್ರಕ್ಕೂ ಬಗ್ಗದ ಡಿಕೆ, ಸಿದ್ದರಾಮಯ್ಯ ಸಿಎಂ ಆಗುವುದಾದರೆ ನನಗೆ ಮಂತ್ರಿ ಸ್ಥಾನವೂ ಬೇಡ. ಶಾಸಕನಾಗಿಯೇ ಇರುತ್ತೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ ಎಂದುಬಿಟ್ಟರು. ಆಗ ಪೀಕಲಾಟಕ್ಕಿಟ್ಟುಕೊಂಡಿದ್ದು ಹೈಕಮಾಂಡಿಗೆ. ಕೊನೆಗೆ ಸೋನಿಯಾ ಗಾಂಧಿ ಖುದ್ದು ವಿಡಿಯೋ ಕಾಲ್ ಮೂಲಕ ಮಾತನಾಡಿದ ಬಳಿಕ, ಡಿಕೆ ತಣ್ಣಗಾದರು. ಸೋನಿಯಾ ಮಾತಿಗೆ ಡಿಕೆ, ತಾಯಿಯ ಮಾತಿಗೆ ಕೊಟ್ಟಂತೆಯೇ ಗೌರವ ಕೊಡ್ತಾರೆ.
ಹಾಗಾದರೆ ಸಿದ್ದರಾಮಯ್ಯ ಗೆದ್ದಿದ್ದು ಎಲ್ಲಿ..? ಹಠಮಾರಿತನದಲ್ಲಿ. ಕಡೆಯವರೆಗೂ ಪಟ್ಟು ಬಿಡದ ಜಿಗುಟಿನಲ್ಲಿ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಜೊತೆಯಲ್ಲಿ ನಿಂತ ಶಾಸಕರ ಸಮೂಹದ ಒಗ್ಗಟ್ಟಿನಲ್ಲಿ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ, ತಂತ್ರಗಾರಿಕೆಯನ್ನೂ ಮಾಡಿ, ಸಂಪನ್ಮೂಲವನ್ನೂ ಒದಗಿಸಿ.. ಶಕ್ತಿ-ಯುಕ್ತಿಗಳನ್ನೆಲ್ಲ ತುಂಬಿದ್ದರೂ, ಪಕ್ಷದ ಹೆಚ್ಚು ಶಾಸಕರ ನಿಷ್ಠೆ ಇದ್ದದ್ದು ಸಿದ್ದರಾಮಯ್ಯನವರಿಗೆ. ಹೀಗಾಗಿಯೇ ಕೈಕಮಾಂಡ್ ಅನಿವಾರ್ಯವಾಗಿ ಸಿದ್ದರಾಮಯ್ಯನವರ ಬೆನ್ನು ಬಿತ್ತು.
ಎಲ್ಲಕ್ಕಿಂತ ಹೆಚ್ಚಾಗಿ ಇನ್ನು 10 ತಿಂಗಳಿಗೇ ಇರುವ ಲೋಕಸಭೆ ಚುನಾವಣೆ. ಡಿಕೆಶಿ ಅವರೇನೋ ಪಕ್ಷ ನಿಷ್ಠ. ಆದರೆ ಸಿದ್ದರಾಮಯ್ಯ ಹಾಗಲ್ಲ. ಸಿದ್ದುಗೆ ಸಿಎಂ ಪಟ್ಟ ತಪ್ಪಿದರೆ ಅವರು ತಟಸ್ಥರಾಗುತ್ತಾರೆ. ಅದರ ಎಫೆಕ್ಟ್ ಭಯಂಕರವಾಗಿರುತ್ತದೆ ಎನ್ನುವ ಅರಿವಿದ್ದ ಕಾರಣಕ್ಕೆ ಕೈಕಮಾಂಡ್ ಸಿದ್ದರಾಮಯ್ಯನವರಿಗೇ ಮಣೆ ಹಾಕಿದೆ. ಡಿಕೆ ಒಂದು ರೀತಿಯಲ್ಲಿ ಎಷ್ಟೆಂದರೂ ಪ್ರೀತಿಯ ಬಾಲಕ. ಮಾತು ಕೇಳುತ್ತಾನೆ ಎನ್ನುವ ನಂಬಿಕೆ ಸೋನಿಯಾ ಅವರದ್ದು.
ಒಟ್ಟಿನಲ್ಲಿ ಮುಹೂರ್ತ ಫಿಕ್ಸ್ ಆಗಿದೆ. 20ನೇ ತಾರೀಕು ಮಧ್ಯಾಹ್ನ 2.30ಕ್ಕೆ ರಾಜ್ಯದ 22ನೇ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.



