2018ರ ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧ ಸ್ಪರ್ಧೆ ಮಾಡಿ ಎಂದು ವಿಜಯೇಂದ್ರಗೆ ಪಕ್ಷದ ಕೆಲ ನಾಯಕರು ಹೇಳಿದ್ದರು. ಲಿಂಗಾಯತರೇ ಹೆಚ್ಚಿರುವ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ನಿಂತರೆ ಗೆಲ್ಲಬಹುದು ಎಂಬ ಚಿತ್ರಣ ಸಿಕ್ಕಿತ್ತು. ಆದರೆ, ಯಡಿಯೂರಪ್ಪ ವಿರುದ್ಧ ಬಣದಲ್ಲಿದ್ದ ಕೆಲ ನಾಯಕರು ಅಡ್ಡಿ ಮಾಡಿದರು. ವಿಜಯೇಂದ್ರ ಗೆದ್ದರೆ ತಮಗೇ ಕಷ್ಟ ಎಂಬ ಭವಿಷ್ಯವನ್ನು ಲೆಕ್ಕ ಹಾಕಿ, ವಿಜಯೇಂದ್ರಗೆ ಟಿಕೆಟ್ ಸಿಗದಂತೆ ನೋಡಿಕೊಂಡರು. ಆಗ ಅವರು ಬಳಸಿದ್ದು ಕುಟುಂಬ ರಾಜಕಾರಣದ ವಾದವನ್ನು. ಆಗಿನ ಲೆಕ್ಕಾಚಾರವೇ ಬೇರೆ. ಈಗಿನ ಲೆಕ್ಕವೇ ಬೇರೆ.
ಈ ಬಾರಿಯೂ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲಿ ಎಂಬ ಮಾತು ಕೇಳಿ ಬರುತ್ತಿದೆ. ವರುಣಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಈಗಾಗಲೇ ವಿಜಯೇಂದ್ರ ಅವರನ್ನು ಕಾಂಟ್ಯಾಕ್ಟ್ ಮಾಡುತ್ತಿದ್ದಾರೆ. ಆದರೆ, ಇದು ತಂತ್ರವೋ..? ಕುತಂತ್ರವೋ..? ಖೆಡ್ಡಾನೋ..? ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗುತ್ತಿಲ್ಲ.
ವಿರೋಧಿಗಳ ಲೆಕ್ಕ : ವಿಜಯೇಂದ್ರ ಅವರನ್ನು ಅಮಿತ್ ಶಾ ಬೆನ್ನು ತಟ್ಟಿರಬಹುದು, ಮೋದಿಯವರ ಹಂತದಲ್ಲಿ ಕಾಂಟ್ಯಾಕ್ಟ್ ಇರಬಹುದು, ಯಡಿಯೂರಪ್ಪ ಅವರ ಕಟ್ಟರ್ ಬೆಂಬಲಿಗರು, ಸಮುದಾಯದವರು ವಿಜಯೇಂದ್ರ ಅವರಲ್ಲಿ ಯಡಿಯೂರಪ್ಪ ಅವರನ್ನು ಕಾಣುತ್ತಿರಬಹುದು, ವಿರೋಧಿಗಳ ಲೆಕ್ಕಾಚಾರವೂ ಒಂದಿರುತ್ತದಲ್ಲ. ಆ ಪ್ರಕಾರ ವರುಣಾದಲ್ಲಿ ಟಿಕೆಟ್ ಕೊಡಿಸುವುದು. ಕೊನೆಯ ಹಂತದಲ್ಲಿ ಒಂದಿಷ್ಟು ಗೇಮ್ ಮಾಡಿದರೂ, ಸಿದ್ದರಾಮಯ್ಯ ಗೆಲ್ತಾರೆ. ಅಲ್ಲಿಗೆ ಮೊದಲ ಚುನಾವಣೆಯಲ್ಲೇ ವಿಜಯೇಂದ್ರ ಸೋತರೆ ಖೇಲ್ ಖತಂ. ಇನ್ನೊಂದು ಎಲೆಕ್ಷನ್ನಿಗೆ ಐದು ವರ್ಷ ಕಾಯಬೇಕು. ಅಷ್ಟು ಹೊತ್ತಿಗೆ ವಿಜಯೇಂದ್ರ ಯಾವ ಲೆಕ್ಕ ಎಂದು ಲೆಕ್ಕ ಹಾಕಿದ್ದಾರಂತೆ.
ಯಡಿಯೂರಪ್ಪ ಲೆಕ್ಕ : ಯಡಿಯೂರಪ್ಪ ಅವರಿಗೆ ರಾಜಕೀಯ ಇವತ್ತಿನದಲ್ಲ. ಯಾರೂ ಇಲ್ಲದಿದ್ದಾಗ ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಇಂತಹ ತಂತ್ರಗಳು ಅರ್ಥವಾಗದಂತದ್ದೇನಲ್ಲ. ಇಷ್ಟಕ್ಕೂ ಗೇಮ್ ಆಡುತ್ತಿರುವವರು ಅವರದ್ದೇ ಗರಡಿಯವರು. ಹೀಗಾಗಿ ಇದನ್ನು ಅರ್ಥ ಮಾಡಿಕೊಂಡಿರುವ ಯಡಿಯೂರಪ್ಪ ವಿಜಯೇಂದ್ರ ಎರಡು ಕಡೆ ಸ್ಪರ್ಧಿಸಲ್ಲ. ವರುಣಾದಿಂದಲೂ ಸ್ಪರ್ಧೆ ಮಾಡಲ್ಲ ಎಂದಿದ್ದಾರೆ. ವರುಣದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿತ್ತು. ಕಾರ್ಯಕರ್ತರು ಕೂಡ ವಿಜಯೇಂದ್ರ ಸ್ಪರ್ಧೆಗೆ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಆದರೆ, ನಾನೇ ವರುಣದಿಂದ ಸ್ಪರ್ಧೆ ಬೇಡ ಎಂದು ಹೇಳಿದ್ದೇನೆ. ಈ ವಿಚಾರದಲ್ಲಿ ನಾನು ಹೈಕಮಾಂಡ್ನ ಮನವೊಲಿಸುತ್ತೇನೆ. ಯಾವ ಕಾರಣಕ್ಕೂ ವಿಜಯೇಂದ್ರ ಅವರು ವರುಣದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.




ಕೊನೆ ಮಾತು : ವಿಜಯೇಂದ್ರ, ಯಡಿಯೂರಪ್ಪ ಅವರ ಮಗ ಎಂಬುದನ್ನು ಬಿಟ್ಟರೆ, ಇದುವರೆಗೆ ಒಂದೇ ಒಂದು ಎಲೆಕ್ಷನ್ ಗೆದ್ದಿಲ್ಲ. ಆದರೆ ಈ ಬಾರಿ ಚರ್ಚೆಯಾಗುತ್ತಿರುವ ಹೊಸ ಹೆಸರುಗಳಲ್ಲಿ ವಿಜಯೇಂದ್ರ ಅವರೇ ನಂ.1. ಅದು ವಿಜಯೇಂದ್ರ ಅವರ ಶಕ್ತಿಯೋ.. ಯಡಿಯೂರಪ್ಪ ಅವರ ಕೊಡುಗೆಯೋ.. ಚುನಾವಣೆ ನಿರ್ಧರಿಸಲಿದೆ.



