ಸಿದ್ದರಾಮಯ್ಯ ಈ ಬಾರಿ ಮೂರು ಅಸ್ತ್ರ ಬಿಟ್ಟಿದ್ದಾರೆ. ಮೊದಲನೆಯದ್ದು ಇದು ನನ್ನ ತವರು ಕ್ಷೇತ್ರ. ನನ್ನ ಹುಟ್ಟೂರು ಇರುವ ಕ್ಷೇತ್ರ. ಇದು ನನ್ನ ಕೊನೆಯ ಚುನಾವಣೆ ಎನ್ನುವ ಅಸ್ತ್ರಗಳ ಪ್ರಯೋಗ ಮಾಡುತ್ತಿದ್ದಾರೆ. ಕೊನೆಯ ಚುನಾವಣೆ ಎನ್ನುವುದು ಸಹಜವಾಗಿಯೇ ಬೇರೆಯದೇ ಮೆಸೇಜ್ ಕಳಿಸುತ್ತದೆ. ನಮ್ಮ ಕ್ಷೇತ್ರದ ಲೀಡರ್. ಸಿಎಂ ಆಗಿದ್ದವರು. ಕೊನೆಯ ಎಲೆಕ್ಷನ್ ಗೆಲ್ಲಿಸಿಬಿಡೋಣ ಎನ್ನುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತದೆ. ಪಾಲಿಟಿಕ್ಸ್ ನಡೆಯುವುದೇ ಎಮೋಷನ್ನುಗಳ ಮೇಲೆ. ಆದರೆ, 2018ರಲ್ಲಿ ಕೂಡಾ ಸಿದ್ದರಾಮಯ್ಯ ಈ ಬಾರಿ ಗೆದ್ದು ಸಿಎಂ ಆಗುತ್ತೇನೆ. ಮತ್ತೆ ಚುನಾವಣೆಗೆ ನಿಲ್ಲಲ್ಲ ಎಂದಿದ್ದರು. ಸಿಎಮ್ಮೂ ಆಗಲಿಲ್ಲ. 2018 ಕೊನೆಯ ಎಲೆಕ್ಷನ್ ಕೂಡಾ ಆಗಲಿಲ್ಲ.
ಆದರೆ ಈ ಬಾರಿಯ ಪರಿಸ್ಥಿತಿ ಬೇರೆ. ಇದುವರೆಗೆ ನಡೆಸಿರುವ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿದೆ. ಸಿಎಂ ಯಾರಾಗಬೇಕು ಎಂದರೆ ಜನ ಉಳಿದವರಿಗಿಂತ ಹೆಚ್ಚು ಸಿದ್ದರಾಮಯ್ಯ ಪರ ಒಲವು ತೋರಿಸುತ್ತಿದ್ದಾರೆ. ಕಳೆದ ಬಾರಿ ಯಡಿಯೂರಪ್ಪ ಪ್ರಬಲ ಪೈಪೋಟಿ ಒಡ್ಡಿದ್ದರು. ಎಲ್ಲರ ಸಮೀಕ್ಷೆಗಳಲ್ಲಿ ಸಿಎಂ ಆಯ್ಕೆಯ ರೇಸಿನಲ್ಲಿ ನಂ.1 ಸ್ಥಾನದಲ್ಲಿಯೇ ಇದ್ದರು. ನಂತರದ ಸ್ಥಾನ ಸಿದ್ದರಾಮಯ್ಯ ಪಾಲಾಗಿತ್ತು. ಆದರೆ ಈ ಬಾರಿ ಯಡಿಯೂರಪ್ಪ ಅಖಾಡದಲ್ಲಿ ಇಲ್ಲ. ಸಿದ್ದರಾಮಯ್ಯ ಅವರಿಗೆ ಹತ್ತಿರದ ಪೈಪೋಟಿ ಒಡ್ಡಿರುವುದು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ.
ಇದೆಲ್ಲದರ ಮಧ್ಯೆ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಚಿಂತನೆ ಬಿಜೆಪಿಯಲ್ಲಿ ನಡೆಯುತ್ತಿದೆ. ವಿಜಯೇಂದ್ರ ಅವರೂ ನಿಲ್ಲಬಹುದು. ಇಲ್ಲದಿದ್ದರೂ ಸಮರ್ಥ ಅಭ್ಯರ್ಥಿ ನಿಲ್ಲಿಸುತ್ತೇವೆ ಎಂದಿದ್ದಾರೆ ಸ್ವತಃ ಯಡಿಯೂರಪ್ಪ. ಶಿಕಾರಿಪುರಕ್ಕೆ ವಿಜಯೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಕೂಡಾ ಯಡಿಯೂರಪ್ಪ. ಆದರೆ ವರುಣಾದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ. ಸಿದ್ದರಾಮಯ್ಯಗೆ ಸರಿಸಮ ಎನಿಸಬಹುದಾದ ಮತ್ತೊಬ್ಬ ಲಿಂಗಾಯತ ನಾಯಕನಿಲ್ಲದ ಕಾರಣಕ್ಕೆ ಕುರುಬ ಸಮುದಾಯದ ಸಿದ್ದರಾಮಯ್ಯ ಗೆಲ್ಲುತ್ತಿದ್ದಾರೆ. ವಿಜಯೇಂದ್ರ ನಿಂತರೆ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಬಿಜೆಪಿ ರಾಜ್ಯ ನಾಯಕರದ್ದು.


ವಿಜಯೇಂದ್ರ ಪ್ರತಿಕ್ರಿಯೆ ಇಂಟ್ರೆಸ್ಟಿಂಗ್ ಆಗಿದೆ. ವರುಣಾದಲ್ಲಿ ಸ್ಪರ್ಧೆಗೆ ವಿಜಯೇಂದ್ರ ಹಿಂದೇಟು ಹಾಕಿಲ್ಲ. ಸುಲಭವಾಗಿ ಗೆಲ್ಲುವುದಕ್ಕಿಂತ ಹೋರಾಟ ಮಾಡಿ ಗೆದ್ದರೆ ಒಳ್ಳೆಯದು ಎಂಬ ಸವಾಲಿನ ಉತ್ತರ ಅವರಿಂದ ಬರುತ್ತಿದೆಯಂತೆ. ಗೆದ್ದರೆ ಸಿದ್ದರಾಮಯ್ಯ ವಿರುದ್ಧ ಗೆದ್ದೆ ಎಂಬ ಕಿರೀಟ, ಸೋತರೆ ಸಿದ್ದರಾಮಯ್ಯ ವಿರುದ್ಧ ಹೋರಾಡಿ ಸೋತೆ ಎಂಬ ಸಮಾಧಾನ. ಎರಡು ಫಲಿತಾಂಶದಲ್ಲಿ ಯಾವುದೇ ರಿಸಲ್ಟ್ ಬಂದರೂ ನಾಯಕತ್ವ ಸಿಗಲಿದೆ ಎಂಬ ಲೆಕ್ಕಾಚಾರ ವಿಜಯೇಂದ್ರ ಅವರದ್ದು.
ವರುಣಾ ಹಿಸ್ಟರಿ : ಎರಡು ಬಾರಿ ಸಿದ್ದರಾಮಯ್ಯ ಹಾಗೂ ಒಂದು ಬಾರಿ ಅವರ ಪುತ್ರ ಡಾ.ಎಸ್. ಯತೀಂದ್ರ ಪ್ರತಿನಿಧಿಸಿರುವ ಕ್ಷೇತ್ರವಿದು. ಇದರಿಂದಾಗಿಯೇ ಇದು ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಸಿದ್ದರಾಮಯ್ಯ ಮೊದಲ ಬಾರಿ ಗೆದ್ದ ಒಂದು ವರ್ಷದ ನಂತರ ಪ್ರತಿಪಕ್ಷನಾಯಕರಾದರೇ, ಎರಡನೇ ಬಾರಿ ಗೆದ್ದಾಗ ಮುಖ್ಯಮಂತ್ರಿಯಾದರು. 2018 ರಲ್ಲಿ ಸಿದ್ದರಾಮಯ್ಯ ಅವರು ಈ ಕ್ಷೇತ್ರವನ್ನು ತಮ್ಮ ಪುತ್ರ ಯತೀಂದ್ರ ಅವರಿಗೆ ಬಿಟ್ಟು ಕೊಟ್ಟು, ತಮ್ಮ ಹಳೆಯ ಕ್ಷೇತ್ರ ಚಾಮುಂಡೇಶ್ವರಿಯಿಂದ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆದ್ದಿದ್ದರು.


ವಿಜಯೇಂದ್ರ ನಿಲ್ಲದೆ ಹೋದರೆ ಇನ್ಯಾರು..?
ಬಿಜೆಪಿಯಲ್ಲಿ ಕಾ.ಪು. ಸಿದ್ದಲಿಂಗಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಕೆ.ಎನ್. ಪುಟ್ಟಬುದ್ದಿ ಅವರ ಪುತ್ರ ಶರತ್, ಜಿಪಂ ಮಾಜಿ ಸದಸ್ಯರಾದ ಬಿ.ಎನ್. ಸದಾನಂದ, ಎ.ಎಂ. ಗುರುಸ್ವಾಮಿ, ಮುಖಂಡರಾದ ತೋಟದಪ್ಪ ಬಸವರಾಜು, ಮಂಡಲ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಡಿ. ಮಹೇಂದ್ರ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಹೆಳವರಹುಂಡಿ ಸಿದ್ದಪ್ಪ- ಹೀಗೆ ಹತ್ತು ಹಲವು ಹೆಸರುಗಳು ಪ್ರಸ್ತಾಪವಾಗುತ್ತಿವೆ. 2018 ರಲ್ಲಿ ವಿಜಯೇಂದ್ರ 22 ದಿನಗಳ ಪ್ರಚಾರದ ನಂತರ ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಸದೇ ಹಿಂದೆ ಸರಿದಿದ್ದರು. ತೋಟದಪ್ಪ ಬಸವರಾಜು ಎಂಬ ಸಾಮಾನ್ಯ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸಿದ್ದರು. ಇಡೀ ಕ್ಷೇತ್ರದಲ್ಲಿ ಪರಿಚಿತರಲ್ಲದೇ ಹೋದರೂ ಬಸವರಾಜು 37 ಸಾವಿರ ಮತಗಳಿಸಿದ್ದರು. ಜೆಡಿಎಸ್`ನಿಂದ ಅಭಿಷೇಕ್ ಎಸ್.ಮಣೇಗಾರ್ ಅಭ್ಯರ್ಥಿಯಾಗಿದ್ದರೂ 3ನೇ ಸ್ಥಾನಕ್ಕೆ ಬಂದಿತ್ತು ಜೆಡಿಎಸ್.



