ಸಿದ್ದರಾಮಯ್ಯ ಅವರು ಈ ಬಾರಿ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅಚ್ಚರಿ ಎಂಬಂತೆ ವರುಣ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಅವರನ್ನು ಘೋಷಿಸಿದೆ ಬಿಜೆಪಿ ಹೈಕಮಾಂಡ್. ಆದರೆ ಗೋವಿಂದರಾಜ ನಗರ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವುದನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದೆ. ಒಂದು ಮೂಲದ ಪ್ರಕಾರ ಸೋಮಣ್ಣ ಅವರಿಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಡುವುದು ಒಂದು ಪ್ಲಾನ್.
ಅತ್ತ ಆರ್. ಅಶೋಕ್ ಅವರಿಗೂ ಅಷ್ಟೆ, ಸತತವಾಗಿ ಗೆಲ್ಲುತ್ತಾ ಬಂದಿರುವ ಅಶೋಕ್ ಅವರಿಗೆ ಕನಕಪುರದಲ್ಲಿಯೂ ಸ್ಪರ್ಧೆ ಮಾಡೋಕೆ ಹೇಳಲಾಗಿದೆ. ಅಲ್ಲಿ ಎದುರಾಳಿಯಾಗಲಿರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಈಗಾಗಲೇ ಡಬಲ್ ಹ್ಯಾಟ್ರಿಕ್ ಸಾಧಿಸಿರುವ (ಸಾತನೂರು ಕ್ಷೇತ್ರದಿಂದ 3 ಬಾರಿ, ಕನಕಪುರವಾಗಿ ಬದಲಾದ ಮೇಲೆ 3 ಬಾರಿ ಗೆದ್ದಿದ್ದಾರೆ) ಡಿಕೆಗೆ ಈ ಬಾರಿ ಗೆದ್ದರೆ 7ನೇ ಗೆಲುವು. ಆ 7ನೇ ಗೆಲುವಿಗೆ ಅಡ್ಡಗಾಲು ಹಾಕುವುದೇ ಆರ್.ಅಶೋಕ್ ಮುಂದೆ ಹೈಕಮಾಂಡ್ ಇಟ್ಟಿರೋ ಟಾಸ್ಕ್.
ಕಳೆದ ಬಾರಿ ಶ್ರೀರಾಮುಲುಗೆ ಎರಡು ಕ್ಷೇತ್ರ ಕೊಡಲಾಗಿತ್ತು. ಅದೇ ತಂತ್ರಗಾರಿಕೆಯಲ್ಲಿ ಈ ಬಾರಿಯೂ ಅಶೋಕ್ ಮತ್ತು ಸೋಮಣ್ಣ ಅವರಿಗೆ ನೀಡಲಾಗಿದೆ. ಈ ಬಾರಿ ನಾವು ಯುವ ಸಮೂಹಕ್ಕೆ ಒತ್ತು ನೀಡಲಾಗಿದೆ. ಸಚಿವ ಆರ್.ಅಶೋಕ್ಗೆ ಪದ್ಮನಾಭನಗರ ಜತೆಗೆ ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಘೋಷಣೆ ಮಾಡಲಾಗಿದೆ. ಸಚಿವ ಸೋಮಣ್ಣ ಅವರಿಗೆ ಚಾಮರಾಜನಗರ ಕ್ಷೇತ್ರದ ಜತೆಗೆ ವರುಣಾ ಕ್ಷೇತ್ರದಿಂದ ಅವಕಾಶ ಕಲ್ಪಿಸಲಾಗಿದೆ. ಕನಕಪುರ ಮತ್ತು ವರುಣ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ ಎನ್ನುತ್ತಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಆದರೆ ಇದು ಕೇವಲ ಟಾಸ್ಕ್ ಅಷ್ಟೇ ಅಲ್ಲ, ಅಗ್ನಿಪರೀಕ್ಷೆಯೂ ಹೌದು. ಅದನ್ನು ಮೀರಿ ಅವರು ಗೆದ್ದು ತೋರಿಸಬೇಕು.


ಈಗ ಡಿಕೆ ವಿರುದ್ಧವೇ ಅಖಾಡಕ್ಕಿಳಿಯುವ ಮೂಲಕ ಹೋರಾಟಗಾರ ಎಂದು ತೋರಿಸಬೇಕು. ಅಶೋಕ್ ಸ್ಪರ್ಧೆಯಿಂದ ಕನಕಪುರ ಹಾಗೂ ಸುತ್ತಮುತ್ತ ಪಕ್ಷಕ್ಕೆ ಲಾಭವಾಗಬೇಕು. ಎರಡೂ ಆಗದೇ ಹೋದರೆ.. ಅದು ಅಶೋಕ್ ಅವರು ಇಷ್ಟು ದಿನ ಬೆಳೆಸಿಕೊಂಡಿದ್ದ ಇಮೇಜ್ ಮತ್ತು ನಾಯಕತ್ವದ ಪಟ್ಟಕ್ಕೆ ಧಕ್ಕೆಯಾದರೂ ಆಶ್ಚರ್ಯವಿಲ್ಲ. ಈಗಾಗಲೇ ನಾನು ಕೇಳಿದ್ದಲ್ಲ, ಹೈಕಮಾಂಡ್ ಹೇಳಿದ್ದಷ್ಟೆ ಎನ್ನುವ ಮೂಲಕ ತಾವು ಅರೆಮನಸ್ಸಿನಿಂದ ಒಪ್ಪಿಕೊಂಡಿರೋದನ್ನು ಪರೋಕ್ಷವಾಗಿ ಹೇಳಿದ್ದಾರೆ. ಕನಕಪುರದಲ್ಲಿ ಪ್ರಾಬಲ್ಯ ಇರುವುದು ಒಕ್ಕಲಿಗರದ್ದೇ. ಇಲ್ಲಿ ಗೆದ್ದರೆ ಅಥವಾ ಸಾಧಿಸಿ ತೋರಿಸಿದರೆ ಅಶೋಕ್ ಅವರ ಸ್ಥಾನಮಾನ ದೊಡ್ಡಮಟ್ಟದಲ್ಲಿ ಏರಲಿದೆ. ಅಕಸ್ಮಾತ್ ಇಂಪ್ಯಾಕ್ಟ್ ಮಾಡದೇ ಹೋದರೆ.. ಬೇರೇನಿಲ್ಲ. ರಾಜ್ಯ ಬಿಜೆಪಿಯಲ್ಲಿ ಬೇರೆ ಒಕ್ಕಲಿಗ ನಾಯಕರನ್ನು ಬೆಳೆಸುವ ಪ್ರಕ್ರಿಯೆ ಶುರುವಾಗಬಹುದು.





