ಸಿದ್ದರಾಮಯ್ಯ ಅವರಿಗೆ ಇರುವ ಮತ್ತೊಂದು ಬಿರುದುಗಳಲ್ಲಿ ಇದೂ ಒಂದು. ಸಿದ್ದರಾಮಯ್ಯ ಹಿಂದೂ ವಿರೋಧಿ ಎನ್ನುವುದು. ಏಕೆಂದರೆ ಈ ಹಿಂದೆ ಸಿದ್ದರಾಮಯ್ಯ ಹಣೆಯಲ್ಲಿ ಕುಂಕುಮ, ನಾಮ ಇಟ್ಟುಕೊಂಡವರನ್ನು ಭಯವಾಗುತ್ತದೆ ಎಂದಿದ್ದರು. ಸಿದ್ದರಾಮಯ್ಯ ದೇವರು, ದೇವಸ್ಥಾನಗಳನ್ನು ನಂಬುವವರೇನೂ ಅಲ್ಲ. ನಾಸ್ತಿಕರೂ ಅಲ್ಲ. ಹೆಂಡತಿ ಬಲವಂತ ಮಾಡಿದರೆ ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವ ಸಿದ್ದರಾಮಯ್ಯ, ಚುನಾವಣೆ ಸಂದರ್ಭಗಳಲ್ಲಿ ದೇವಸ್ಥಾನಕ್ಕೂ ಹೋಗುತ್ತಾರೆ. ಪೂಜೆಯನ್ನೂ ಮಾಡಿಸುತ್ತಾರೆ. ತೀರ್ಥ, ಪ್ರಸಾದವನ್ನು ಸ್ವೀಕರಿಸುತ್ತಾರೆ. ಅವೆಲ್ಲವನ್ನೂ ಮಾಡಿಯೇ ನಾನು ಹಿಂದೂ ಅಲ್ಲವಾ ಎನ್ನುತ್ತಾರೆ.
ಇದೀಗ ಚುನಾವಣೆ ಸಂದರ್ಭದಲ್ಲಿಯೂ ಈ ವಿವಾದ ಮತ್ತೊಮ್ಮೆ ಬರುವುದಕ್ಕೆ ಕಾರಣ ಇಷ್ಟೆ, . ಶಿರಾ, ಚಿಕ್ಕನಾಯಕನಹಳ್ಳಿ ಸೇರಿ ಹಲವೆಡೆ ಸಿದ್ದರಾಮಯ್ಯ ಕ್ಯಾಂಪೇನ್ ಮಾಡಿದರು. ಶಿರಾದಲ್ಲಿ ಟಿ.ಬಿ ಜಯಚಂದ್ರ ಪರ ಸಿದ್ರಾಮಯ್ಯ ಮತಯಾಚನೆ ಮಾಡಿದರು. ವೇದಿಕೆ ಮೇಲೆ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಕಂಬಲಿ ಹಾಕಿಸಿಕೊಂಡ ಸಿದ್ದರಾಮಯ್ಯಗೆ ಕೇಸರಿ ಬಿಳಿ ಹಸಿರು ಬಣ್ಣದ ಪೇಟ ತೊಡಿಸಲು ನಾಯಕರು ಮುಂದಾಗಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ತಿರಸ್ಕರಿಸಿದರು. ನಂತರ ಹಾರ ಹಾಕಿಸಿಕೊಂಡರು.
ಸಹಜವಾಗಿಯೇ ಈ ಘಟನೆ ವಿರೋಧಿಗಳಿಗೆ ಆಹಾರವಾಗಿದೆ. ಸಿದ್ದರಾಮಯ್ಯ ಅತಿಯಾಗಿ ಮುಸ್ಲಿಂ ಓಲೈಕೆ ಮಾಡುತ್ತಾರೆ ಎಂಬ ಆರೋಪಕ್ಕೆ ತುತ್ತಾದವರು. ಆ ಕಾರಣಕ್ಕಾಗಿಯೇ ಸಿದ್ರಾಮುಲ್ಲಾಖಾನ್ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಇಷ್ಟೆಲ್ಲ ಇರುವಾಗ ಸಿದ್ದರಾಮಯ್ಯ ಕೇಸರಿ ಪೇಠ ತಿರಸ್ಕರಿಸುವ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ವಿರೋಧಿಗಳಿಗೆ ಆಹಾರವಾಗಿದ್ದಾರೆ.
ಸಿದ್ದರಾಮಯ್ಯ ದರ್ಗಾ, ಮಸೀದಿಗಳಿಗೆ ಮುಸ್ಲಿಂ ಟೋಪಿ ಧರಿಸುತ್ತಾರೆ. ಆದರೆ ಹಿಂದೂಗಳು ಕೇಸರಿ ಪೇಟ ಹಾಕಿದರೆ ಬೇಡ ಎನ್ನುತ್ತಾರೆ ಯಾಕೆ ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಅವರ ಕಟ್ಟರ್ ಬೆಂಬಲಿಗರು ಕೊಡುವ ಉತ್ತರ ಆರ್.ಎಸ್.ಎಸ್ ಎನ್ನುವುದು. ಆದರೆ ಆರ್.ಎಸ್.ಎಸ್.ನವರು ಕೇಸರಿ ಧ್ವಜ ಬಳಸುತ್ತಾರೆಯೇ ಹೊರತು, ಕೇಸರಿ ಪೇಠವನ್ನಲ್ಲ. ಇದೇ ಕೇಸರಿ ಪೇಟವನ್ನು ಮರಾಠಿಗರ ಓಲೈಕೆಗಾಗಿ ಮರಾಠಿ ಸಮಾವೇಶದಲ್ಲಿ ತೊಡುವ ಸಿದ್ದರಾಮಯ್ಯ, ಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳಿಗೆ ಬಂದಾಗ ದಿಢೀರನೆ ಕೇಸರಿ ವಿರೋಧಿಯಾಗುವುದು ಹೇಗೆ..? ಉತ್ತರ ಇಲ್ಲ.



