ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರೂ ಮಾಂಸಾಹಾರ ಪ್ರಿಯರೇ. ಡಿಕೆ ಶಿವಕುಮಾರ್ ಕೂಡಾ. ಸಿದ್ದರಾಮಯ್ಯ ಅವರಂತೂ ನಾಟಿ ಕೋಳಿ ಸಾರು, ಮುದ್ದೆ ಇಷ್ಟ ಎಂದು ಹೇಳಿಕೊಳ್ಳುತ್ತಿದ್ದವರು. ಕುಮಾರಸ್ವಾಮಿಗೂ ನಾಟಿಕೋಳಿ ಸಾರು ಇಷ್ಟ. ಡಿಕೆಯವರಿಗೂ ಕೂಡಾ. ಈ ನಾಯಕರಲ್ಲಿ ಸ್ವಲ್ಪ ಬಿಂದಾಸ್ ಆಗಿದ್ದವರು ಸಿದ್ದರಾಮಯ್ಯ.
ಕೆಲವೊಮ್ಮೆ, ದೇವಸ್ಥಾನಗಳಿಗೆ ಹೋಗುವ ಮುನ್ನ ಮಾಂಸ ತಿಂದು ಹೋಗಿದ್ದರು ಎಂದು ಸುದ್ದಿಯಾದಾಗ ಏನ್ ತಪ್ಪು? ಮಾಂಸ ತಿನ್ನೋದು ತಪ್ಪಾ? ಹೋಗಿದ್ದೆ? ಏನಿವಾಗ..? ಎಂದೂ ಪ್ರಶ್ನಿಸಿದ್ದವರು ಸಿದ್ದರಾಮಯ್ಯ. ಎಷ್ಟೋ ಬಾರಿ ಕಾಂಟ್ರವರ್ಸಿ ಮಾಡಲೆಂದೇ ಸುದ್ದಿ ಮಾಡಿದ್ದರೂ ಏನಿವಾಗ ಅನ್ನೋ ಸ್ಟೈಲಿನ ಉತ್ತರ ಬಿಟ್ಟಿರಲಿಲ್ಲ. ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನಕ್ಕೆ ಮುನ್ನ ಮೀನು ತಿಂದು ಹೋಗಿದ್ದರು ಎನ್ನುವದು ನ್ಯಾಷನಲ್ ಲೆವೆಲ್ಲಿವಲ್ಲಿ ಚರ್ಚೆಯಾಗಿತ್ತು. ಈಗ ನೋಡಿದರೆ ಸಿದ್ದರಾಮಯ್ಯ ಮಾಂಸ ತಿನ್ನೋದು ಬಿಟ್ಟಿದ್ದಾರಂತೆ.
ಮಾಂಸದೂಟ ಬಿಟ್ಟಿದ್ದರ ಹಿಂದಿದೆ ಕಾರಣ :
ಮಾಂಸಾಹಾರ ತ್ಯಜಿಸಿರುವುದರ ಹಿಂದೆ ಲೆಕ್ಕಚಾರವೂ ಇದೆ. ಪ್ರಜಾಧ್ವನಿ ಯಾತ್ರೆ ನಿರಂತರವಾಗಿ ನಡೆಯುತ್ತಿದೆ. ಒಂದು ಕಡೆ ಬಿಸಿಲು, ಬೆಳಗೆದ್ದರೆ ಚಳಿ, ದೂಳು, ನೀರಿನಲ್ಲಿ ಬದಲಾವಣೆ.. ಹೀಗೆ ಹಲವು ಸಮಸ್ಯೆಗಳಿವೆ. ಇವುಗಳಲ್ಲಿ ಯಾವುದೊಂದು ಎಡವಟ್ಟಾದರೂ ಆರೊಗ್ಯ ಕೈಕೊಟ್ಟಂತೆ. ಆರೋಗ್ಯ ಕೈಕೊಟ್ಟು ಮನೆಯಲ್ಲಿ ಕುಳಿತರೆ ಪ್ರಚಾರ ಮಾಡುವುದು ಯಾರು? ಹೇಗೆ? ಜೊತೆಗೆ ಕಾರ್ಯಕರ್ತರು, ಅಭಿಮಾನಿಗಳು ಪ್ರೀತಿಯಿಂದ ತಂದಿರುತ್ತಾರೆ. ಬೇಡ ಎಂದರೆ ಬೇಜಾರು ಮಾಡ್ಕೋತಾರೆ. ತಿನ್ನುತ್ತಾ ಹೋಗಿ ಹೊಟ್ಟೆ ಕೆಟ್ಟರೆ ಮತ್ತದೇ ಆರೋಗ್ಯದ ಸಮಸ್ಯೆ. ಹೀಗಾಗಿ ಊಟ, ತಿಂಡಿಗಳ ಬಗ್ಗೆ ಕಾಳಜಿ ವಹಿಸಿದ್ದಾರೆ.
ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಯಾರು ಕಾಳಜಿ ಮಾಡ್ತಾರೆ :
ಸಿದ್ದರಾಮಯ್ಯನವರ ಊಟ, ತಿಂಡಿಯ ಬಗ್ಗೆ ಜೊತೆಯಲ್ಲಿ ಇಲ್ಲದೇ ಇದ್ದರೂ ಕಾಳಜಿ ತೆಗೆದುಕೊಂಡಿರುವುದು ಯತೀಂದ್ರ ಸಿದ್ದರಾಮಯ್ಯ. ಇತ್ತೀಚೆಗೆ ಸಣ್ಣದೊಂದು ಆಪರೇಷನ್ ಕೂಡಾ ಆಗಿರುವ ಹಿನ್ನೆಲೆಯಲ್ಲಿ ಯತೀಂದ್ರ ಅವರು ದೂರದಲ್ಲಿದ್ದರೂ ಜೊತೆಯಲ್ಲೇ ಇರುವಂತೆ ಅಪ್ಪನ ಆರೋಗ್ಯದ ಬಗ್ಗೆ ಕೇರ್ ತೆಗೆದುಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಊಟ, ತಿಂಡಿ, ನೀರು, ಔಷಧಿ ಎಲ್ಲವನ್ನೂ ಗಮನದಲ್ಲಿಟ್ಟಿದ್ದಾರೆ. ಫೋನಿನಲ್ಲಿಯೇ ಕಂಟ್ರೋಲ್ ಮಾಡುತ್ತಾರೆ. ಎಷ್ಟೋ ಬಾರಿ ಸಿದ್ದರಾಮಯ್ಯ ಗದರಿದರೂ ಯತೀಂದ್ರ ಕೇಳಲ್ಲ.
ಇನ್ನು ಕುಮಾರಸ್ವಾಮಿ ವಿಷಯಕ್ಕೆ ಬಂದ್ರೆ ಎರಡು ಬಾರಿ ಬೈಪಾಸ್ ಸರ್ಜರಿ ಆಗಿರುವವರು. ಎಷ್ಟೋ ಬಾರಿ ಮನಸ್ಸು ಹೇಳುತ್ತಿದ್ದರೂ ದೇಹ ಸಹಕರಿಸುವುದಿಲ್ಲ. ಹೀಗಾಗಿ ಅವರೂ ದಿನದ ಮೂರೂ ಹೊತ್ತು ಟ್ಯಾಬ್ಲಿಟ್ಟುಗಳಲ್ಲೇ ಬದುಕಬೇಕು. ಹೀಗಾಗಿ ಅವರ ಊಟ, ತಿಂಡಿಯೂ ಅಷ್ಟೆ, ಪಥ್ಯದಂತೆ ನಡೆಯುತ್ತಿದೆ.
ಇಬ್ಬರೂ ನಾಯಕರು ಈಗ ಚಿಕನ್, ಮಟನ್ ಮುಟ್ಟುತ್ತಿಲ್ಲ. ಸಿದ್ದರಾಮಯ್ಯ ಮೊಟ್ಟೆ ತಿನ್ನುತ್ತಾರಾದರೂ ಅದೂ ನಿಯಂತ್ರಣದಲ್ಲಿದೆ. ಉಳಿದಂತೆ ನಾಯಕರು ಮುದ್ದೆ, ಸಾರು, ಸೊಪ್ಪಿನ ಪಲ್ಯ, ಕಾಳು ಪಲ್ಯ.. ಹೀಗೆ ವೆಜಿಟೇರಿಯನ್ ಆಗಿದ್ದಾರೆ. ಡಿಕೆ ಶಿವಕುಮಾರ್ ಕೂಡಾ ಭಾಗಶಃ ಸಸ್ಯಾಹಾರಿಯಾಗಿದ್ದಾರೆ. ಅಪರೂಪಕ್ಕೆ ಮಾಂಸಾಹಾರ ತೆಗೆದುಕೊಳ್ಳುತ್ತಿದ್ದರೂ ಅದು ಮನೆಯಲ್ಲಿ ಮಾತ್ರ ಸೀಮಿತವಾಗಿದೆ.
ಇಷ್ಟಕ್ಕೂ ಇವರೆಲ್ಲರ ಗುರಿ ಅಧಿಕಾರ ಮತ್ತು ಸರ್ಕಾರ. ಯುದ್ಧಕ್ಕೆ ಹೊರಟವರು ಆರೋಗ್ಯ ಕೆಡಿಸಿಕೊಳ್ಳಬಾರದೆಂಬ ಕಾಳಜಿ, ಅಷ್ಟೆ. ಸೇನಾಧಿಪತಿಗಳೇ ಆರೋಗ್ಯ ಕೆಡಿಸಿಕೊಂಡು ಮಲಗಿಬಿಟ್ಟರೆ.. ಸೈನಿಕರು ಹಾಸಿಗೆ, ದಿಂಬು ಹಾಸಿಕೊಂಡು ಎರಡೆರಡು ರಗ್ಗು ಹೊದ್ದು ಮಲಗಿಬಿಡುತ್ತಾರೆ. ಹಾಗಾಗಬಾರದೆಂಬ ಕಾಳಜಿ, ಅಷ್ಟೆ.



