ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಮೊದಲು ಬಾದಾಮಿಯಿಂದಲೇ ಸ್ಪರ್ಧೆ ಎಂದರು. ನಂತರ ಇಲ್ಲ ಎಂದರು. ಅದಾದ ಮೇಲೆ ರಾಜ್ಯದ ಹಲವು ಕ್ಷೇತ್ರಗಳ ಹೆಸರು ಕೇಳಿಬಂತು. ಕೊನೆಗೆ ಕೋಲಾರ ಫೈನಲ್ ಆಯಿತು. ಕೋಲಾರದಲ್ಲಿ ಸಿಟ್ಟಿಗೆದ್ದಿದ್ದವರನ್ನೆಲ್ಲ ಸಮಾಧಾನಗೊಳಿಸಿ, ಎಲ್ಲ ಜಾತಿ, ಸಮುದಾಯ ಮುಖಂಡರನ್ನೆಲ್ಲ ಒಟ್ಟುಗೂಡಿಸಿ, ತಿಂಗಳಿಗೆ ಎರಡು ಬಾರಿ ಭೇಟಿ ಕೊಟ್ಟು ವೇದಿಕೆ ಸಿದ್ಧ ಮಾಡಿಕೊಂಡಿದ್ದರು ಸಿದ್ದರಾಮಯ್ಯ. ಆದರೆ.. ಒಂದು ಮಾತನ್ನು ತಪ್ಪದೇ ಹೇಳುತ್ತಿದ್ದರು. ಹೈಕಮಾಂಡ್ ಒಪ್ಪಿದರೆ ಮಾತ್ರ ಎನ್ನುವುದೇ ಆ ಡೈಲಾಗ್.
ಅದರಂತೆಯೇ ಈಗ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ವರುಣಾದಿಂದಲೇ ಸ್ಪರ್ಧೆ ಮಾಡಿ ಎಂದು ಸಲಹೆ ನೀಡಿದ್ದಾರಂತೆ. ಖುದ್ದು ಮುನಿಯಪ್ಪ ಅವರ ಎದುರು ಸಿದ್ದರಾಮಯ್ಯ ಈ ಮಾತು ಹೇಳಿದ್ದಾರಂತೆ. ನವದೆಹಲಿಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸಿದ್ದರಾಮಯ್ಯ, ಡಿಕೆಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಭಾಗವಹಿಸಿದ್ದರು. ಆಗ ಸಹಜವಾಗಿಯೇ ಸಿದ್ದರಾಮಯ್ಯ ಅವರ ಕ್ಷೇತ್ರದ ವಿಚಾರ ಚರ್ಚೆಗೆ ಬಂದು, ರಾಹುಲ್ ಗಾಂಧಿ ವರುಣಾದಿಂದಲೇ ಸ್ಪರ್ಧಿಸಲು ಸಲಹೆ ಕೊಟ್ಟಿದ್ದಾರಂತೆ. ಅದಕ್ಕೆ ರಾಹುಲ್ ಗಾಂಧಿ ಕೊಟ್ಟಿರುವ ಕಾರಣಗಳೂ ಇಂಟ್ರೆಸ್ಟಿಂಗ್.


ಸದ್ಯದ ಮಟ್ಟಿಗೆ ಸಿದ್ದರಾಮಯ್ಯ ಅಧಿಕೃತವಾಗಿ ಏನನ್ನೂ ಹೇಳುತ್ತಿಲ್ಲ. ನನಗೇ ಟಿಕೆಟ್ ಫೈನಲ್ ಆಗಿಲ್ಲ. ಎಲ್ಲಿಂದ ಸ್ಪರ್ಧೆ ಮಾಡಬೇಕು ಅನ್ನೋದನ್ನ ಹೈಕಮಾಂಡ್ ತೀರ್ಮಾನಕ್ಕೇ ಬಿಟ್ಟಿದ್ದೇನೆ ಎನ್ನುತ್ತಿದ್ದಾರೆ ಸಿದ್ದರಾಮಯ್ಯ.
ವರುಣಾನ..? ಕೋಲಾರನಾ..? ಸಿದ್ದರಾಮಯ್ಯ ಅವರ ಕ್ಷೇತ್ರ ಮತ್ತೊಮ್ಮೆ ಪ್ರಶ್ನೆಯಾಗಿಬಿಟ್ಟಿದೆ.



