ಕುಮಾರಸ್ವಾಮಿ ಮತ್ತು ಹೆಚ್.ಡಿ.ರೇವಣ್ಣ ಮಧ್ಯೆ ಈ ಪರಿಯಾಗಿ ವಾಗ್ಯುದ್ಧ ಹಿಂದೆಂದೂ ನಡೆದಿರಲಿಲ್ಲ. ಏನೇ ನಡೆದರೂ ನಾಲ್ಕು ಗೋಡೆಗಳ ಮಧ್ಯೆ ನಡೆದು ಹೋಗುತ್ತಿತ್ತು. ಹೊರಬರುತ್ತಿರಲಿಲ್ಲ. ಆದರೆ ಈ ಬಾರಿ ಹಾಗಾಗಿಲ್ಲ. ರೇವಣ್ಣ ಹಾಸನದಲ್ಲಿ, ಬೆಂಗಳೂರಿನಲ್ಲಿ ಮಾತನಾಡುತ್ತಿದ್ದರೆ, ಕುಮಾರಸ್ವಾಮಿ ಬಳ್ಳಾರಿ, ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದಾರೆ. ಎಲ್ಲರ ಕೇಂದ್ರಬಿಂದು ಹಾಸನವೇ ಆಗಿರುವುದು ವಿಶೇಷ.
ಕುಮಾರಸ್ವಾಮಿ ಹೇಳಿರುವ ಶಕುನಿ ಮಾತು ಕುತೂಹಲ ಕೆರಳಿಸಿದೆಯೇನೋ ಹೌದು. ರೇವಣ್ಣ ಹೊಳೆನರಸೀಪುರ ಮತ್ತು ಹಾಸನ ಎರಡು ಕ್ಷೇತ್ರಗಳ ಟಿಕೆಟ್ ಕೇಳಿರುವ ಕುರಿತು ಪಕ್ಷದಲ್ಲಿ ಚರ್ಚೆ ಆಗಿಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಕುಮಾರಸ್ವಾಮಿ ಪ್ರಕಾರ ರಾಜ್ಯ ಹಾಗೂ ಹಾಸನಲ್ಲಿ ಕೆಲವರು ಶಕುನಿಗಳು, ದೇವೆಗೌಡರ ಕುಟುಂಬವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಶಕುನಿಗಳು ನಮ್ಮ ಕುಟುಂಬ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಮಹಾಭಾರತ ಕಾಲದಿಂದ ನಡೆದು ಬಂದಿದೆ. ಈಗಲೂ ನಡೆಯುತ್ತಿದೆ. ನಾನು ಮೊದಲಿಂದಲೂ ಹಾಸನದ ಟಿಕೆಟ್ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಸಣ್ಣ ಸುಳಿವನ್ನು ನೀಡಿದ್ದೇನೆ. ಕುಟುಂಬದ ಸದಸ್ಯರಿಗೆ ಹಾಸನ ಟಿಕೆಟ್ ಕೊಟ್ಟು ಮಾಧ್ಯಮಗಳಿಗೆ ಆಹಾರ ಆಗಲ್ಲ. ರೇವಣ್ಣ ಕುಟುಂಬಕ್ಕೆ ತಲೆ ತುಂಬಿ ದಾರಿ ತಪ್ಪಿಸುತ್ತಿದ್ದಾರೆ. ಶಕುನಿಗಳು ದೇವೆಗೌಡರ ಕುಟುಂಬವನ್ನು ಮುಗಿಸಬೇಕು ಅಂತಿವೆ. ಅವರಿಗೆ ನಾವು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸರಿಯಾಗಿ ಪಾಠ ಕಲಿಸುತ್ತೇವೆ ಎಂದು ಗುಡುಗುತ್ತಿದ್ದಾರೆ ಕುಮಾರಸ್ವಾಮಿ.
ನನಗೆ ರಾಜ್ಯದಲ್ಲಿ ಪಕ್ಷ ಕಟ್ಟಿ ಪಕ್ಷವನ್ನು ಅಧಿಕಾರಕ್ಕೆ ತರುವ ಚಿಂತೆಯಾದರೆ ಕೆಲವರಿಗೆ ಹಾಸನದ ಚಿಂತೆಯೇ ಮುಖ್ಯವಾಗಿದೆ ಎನ್ನುವ ಮೂಲಕ ಟಾಂಗ್ ಕೊಟ್ಟಿರುವ ಕುಮಾರಸ್ವಾಮಿ ಹಾಸನದಲ್ಲಿ ಟಿಕೆಟ್ ಕೊಟ್ಟರೆ ಭವಾನಿ ರೇವಣ್ಣ ಗೆಲ್ಲೋದಿಲ್ಲ ಎನ್ನುವ ಮೂಲಕ ಬಾಂಬ್‍ನ್ನೇ ಸಿಡಿಸಿದ್ದಾರೆ. ನಾನೂ ಸಮೀಕ್ಷೆ ಮಾಡಿಸಿದ್ದೇನೆ. ಸಮೀಕ್ಷೆ ಪ್ರಕಾರ ಭವಾನಿ ಗೆಲ್ಲೋದಿಲ್ಲ. ಸೋಲ್ತಾರೆ ಎಂದಿದ್ದಾರೆ.
ಆದರೆ ಇದಕ್ಕೆ ರೇವಣ್ಣ ಹೇಳಿರೋದೇ ಬೇರೆ. ನನಗೆ ಯಾವ ಸಮೀಕ್ಷೆಯೂ ಗೊತ್ತಿಲ್ಲ ಎನ್ನುವುದು ಅವರ ಉತ್ತರ. ರೇವಣ್ಣ ಅವರು ಕುಮಾರಸ್ವಾಮಿ ಹೇಳಿಕೆ ಕೊಟ್ಟ ಬೆನ್ನಲ್ಲೇ ದೇವೇಗೌಡರ ಮನೆಗೆ ಹೋಗಿದ್ದರು. ಗುಡ್ ನ್ಯೂಸ್ ಸಿಗಲಿದೆ ಎಂಬ ವಿಶ್ವಾಸದಲ್ಲಿಯೇ ಬಂದಿದ್ದರು. ಈಗಲೂ ಅದೇ ವಿಶ್ವಾಸದಲ್ಲಿದ್ದಾರೆ. ದೇವೇಗೌಡರು ಯಾರಿಗೆ ಹೇಳ್ತಾರೋ ಅವರು ಚುನಾವಣೆಗೆ ನಿಲ್ತೇವೆ. ನಮಗೆ ದೇವೇಗೌಡರೇ ಫೈನಲ್ ಎಂದು ಉತ್ತರ ಕೊಟ್ಟಿದ್ದಾರೆ.
ಎರಡು ಕ್ಷೇತ್ರಗಳಲ್ಲಿ ರೇವಣ್ಣ ನಿಲ್ತಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿರೋ ರೇವಣ್ಣ ನಾನ್ಯಾಕೆ ಎರಡು ಕ್ಷೇತ್ರದಲ್ಲಿ ನಿಲ್ಲಲಿ ಎನ್ನುವ ಮೂಲಕ ನೋ ವೇ. ಚಾನ್ಸೇ ಇಲ್ಲ ಎಂದಿದ್ದಾರೆ.
ಇದರ ಮಧ್ಯೆ ಭವಾನಿ ರೇವಣ್ಣ ಅವರು ಏ.14ಕ್ಕೆ ಹಾಸನ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ಧಾರೆ ಎನ್ನವ ಸುದ್ದಿಯೂ ಇದೆ. ಏಪ್ರಿಲ್ 14ಕ್ಕೆ ಭವಾನಿ ರೇವಣ್ಣ ಮತ್ತು ಏ.17ಕ್ಕೆ ಸ್ವರೂಪ್ ಪ್ರಕಾಶ್ ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷೇತರರಾಗಿಯೇ ನಾಮಪತ್ರ ಸಲ್ಲಿಸಲಿದ್ದು, ನಂತರ ಯಾರಿಗೆ ಬಿ ಫಾರಂ ದೊರೆಯುತ್ತದೆಯೋ ಅವರು ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ.



