ಪುನೀತ್ ಅವರು ಯಾವ ವರ್ಗದವರಿಗೆ ಇಷ್ಟ ಎಂದು ಹೇಳೋಕೇ ಆಗಲ್ಲ. ದೊಡ್ಡವರು, ಕಿರಿಯರು, ಯುವಕರು, ಮುದುಕರು, ಮಕ್ಕಳೂ ಸೇರಿದಂತೆ ಎಲ್ಲರಿಗೂ ಇಷ್ಟವಾಗಿದ್ದರು. ಪುನೀತ್ ಚಿತ್ರಗಳೆಂದರೆ ಓಪನಿಂಗ್ ಡೇನಲ್ಲೇ ಕುಟುಂಬಗಳು ಬರುತ್ತಿದ್ದವು. ರಿಲೀಸ್ ದಿನವೇ ಕುಟುಂಬಗಳನ್ನು ಥಿಯೇಟರಿಗೆ ಬರುವಂತೆ ಮಾಡುತ್ತಿದ್ದ ಏಕೈಕ ನಟ ಪುನೀತ್ ರಾಜಕುಮಾರ್ (Puneeth Rajkumar) . ಮೃತರಾದ ಮೇಲೆ ಪುನೀತ್ ಅವರ ನಿಜಸ್ವರೂಪ ಗೊತ್ತಾದ ನಂತರ ಅಭಿಮಾನಿಗಳ ಸಂಖ್ಯೆ ಡಬಲ್.. ತ್ರಿಬಲ್ ಆಯಿತು. ಅಪ್ಪು ಪರಮಾತ್ಮನಾದರು. ಸಮಾಧಿ ಪುಣ್ಯಸ್ಥಳವಾಯಿತು.
ಜೀವಿತಾವಧಿಯಲ್ಲೊಮ್ಮೆ ಪರಮಾತ್ಮ ಚಿರನಿದ್ರೆಗೆ ಜಾರಿರುವ ಆ ಜಾಗವನ್ನ ಕಣ್ಣಾರೆ ನೋಡಬೇಕೆಂಬ ಹಂಬಲದಿಂದ ನಿತ್ಯವೂ ಕಂಠೀರವ ಸ್ಟುಡಿಯೋಗೆ ಆಗಮಿಸುವವರ ಸಂಖ್ಯೆ ಅಧಿಕವಾಗ್ತಿದೆ. ಆಶ್ಚರ್ಯ ಅನ್ನೋ ರೀತಿಯಲ್ಲಿ ಈ ಒಂದು ತಿಂಗಳಲ್ಲಿ ಅಪ್ಪು (Puneeth Rajkumar) ಸಮಾಧಿಗೆ ಭೇಟಿ ಕೊಡುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗದ ಮಹಿಳೆಯರು ತಂಡೋಪತಂಡವಾಗಿ ಅಪ್ಪು ಸಮಾಧಿ ದರ್ಶನಕ್ಕೆ ಬರುತ್ತಿದ್ದಾರೆ.
ಅಪ್ಪು ಸಮಾಧಿಗೆ (Appu Samadhi) ಭೇಟಿ ಕೊಡುವವರ ಸಂಖ್ಯೆ ಪ್ರತಿನಿತ್ಯ ಎರಡು ದಿಂದ ಐದು ಸಾವಿರದವರೆಗೂ ಇರುತ್ತೆ. ವೀಕೆಂಡ್ನಲ್ಲಿ ಇದು 25 ಸಾವಿರಕ್ಕೂ ಹೋಗುತ್ತದೆ. ಇದೇ ಕಾರಣಕ್ಕೆ ಕಂಠೀರವ ಸ್ಟುಡಿಯೋ ಯಾವ ಪ್ರವಾಸಿ ಸ್ಥಳಕ್ಕೂ ಕಮ್ಮಿ ಇಲ್ಲದಂತಾಗಿದೆ. ಉತ್ತರ ಕರ್ನಾಟಕದ ಮಂದಿಯಂತೂ ಇಂತಹ ಪುಣ್ಯಾತ್ಮ ಇದ್ದಾಗಂತೂ ನೋಡಲಾಗಲಿಲ್ಲ, ಸಮಾಧಿಯನ್ನಾದರೂ ದರ್ಶನ ಮಾಡೋಣ. ಪಾದದ ಬಳಿಯೊಂದು ಹೂವಿಟ್ಟು ಕೈಮುಗಿದು ಬರೋಣ ಎಂದು ಹೇಳುತ್ತಿದ್ದಾರೆ.
ಅಂದಹಾಗೆ ಅಪ್ಪು ಸಮಾಧಿಯೂ ಪುಣ್ಯಕ್ಷೇತ್ರವೇ ಆಗಿದೆ. ಶಕ್ತಿ ಯೋಜನೆ (Shakthi Scheme) ಎಫೆಕ್ಟ್ ಧರ್ಮಸ್ಥಳ, ನಂಜನಗೂಡು, ಚಾಮುಂಡಿ ಬೆಟ್ಟ, ಹುಲಿಗೆಮ್ಮ, ಸಿಗಂಧೂರು, ಉಡುಪಿ, ಬನಶಂಕರಿ.. ಹೀಗೆ ರಾಜ್ಯದ ಎಲ್ಲ ಪುಣ್ಯಕ್ಷೇತ್ರಗಳೂ ಹೇಗೆ ಜನರನ್ನು ಸೆಳೆದಿವೆಯೋ.. ಹಾಗೆಯೇ ಪುನೀತ್ ಸಮಾಧಿ ಸ್ಥಳವೂ ಜನರನ್ನು ಸೆಳೆದಿದೆ. ಬಹುತೇಕ ಮಹಿಳೆಯರು ಸಮಾಧಿಗೆ ಭೇಟಿ ಕೊಡುತ್ತಿದ್ದಾರೆ. ಮೊದಲ್ಲಿದ್ದ ಜನಪ್ರವಾಹಕ್ಕೆ ಹೋಲಿಸಿದೆ ದುಪ್ಪಟ್ಟು ಹೆಚ್ಚಾಗಿದೆ ಎನ್ನುತ್ತಾರೆ ಕಂಠೀರವ ಸ್ಟುಡಿಯೋ ಸುತ್ತಮುತ್ತ ವ್ಯಾಪಾರ ಮಾಡುವವರು.



