ಸರ್ ಎಂ.ವಿಶ್ವೇಶ್ವರಯ್ಯ ಅವರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ ಮಾಡಿದರು. 1923ರಿಂದ ಈ ಕಾರ್ಖಾನೆ ಕಬ್ಬಿಣ ಮತ್ತು ಉಕ್ಕು ಉತ್ಪಾದನೆ ಮಾಡುತ್ತಿದೆ. 1996ರಲ್ಲಿ ನಾನು ಪ್ರಧಾನಿಯಾಗಿದ್ದಾಗ ವಿಐಎಸ್ಎಲ್ ಕಾರ್ಖಾನೆಯನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಜೊತೆ ವಿಲೀನಗೊಳಿಸಲು ಕ್ರಮ ಕೈಗೊಂಡಿದ್ದೆ. 650 ಕೋಟಿ ಹೂಡಿಕೆಯೊಂದಿಗೆ ಕಾರ್ಖಾನೆ ಮೇಲ್ದರ್ಜೆಗೇರಿಸಲು ನಿರ್ಧಾರ ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್ ನಮ್ಮ ಉದ್ದೇಶಿತ ಯೋಜನೆ ಕಾರ್ಯಾಸಾಧ್ಯವಾಗಲಿಲ್ಲ.




2016ರಲ್ಲಿ ನೀತಿ ಆಯೋಗ ವಿಐಎಸ್ಎಲ್ ಕಾರ್ಖಾನೆಯನ್ನು ಖಾಸಗೀಕರಣಕ್ಕೆ ಶಿಫಾರಸು ಮಾಡಿತ್ತು. ಖಾಸಗಿ ಹೂಡಿಕೆದಾರರು ಕಾರ್ಖಾನೆ ಕೊಳ್ಳಲು ಒಲವು ತೋರಲಿಲ್ಲ. ಇದೀಗ ಸರಕಾರ 20 ಸಾವಿರ ಜನರ ಜೀವನಾಧಾರವಾಗಿರುವ ಕಾರ್ಖಾನೆಯನ್ನು ಮುಚ್ಚಲು ಹೊರಟಿದೆ ಎಂದು ತಿಳಿದು ಬಂದಿದೆ. ಕೂಡಲೇ ಉದ್ದೇಶಿತ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಸಾರ್ವಜನಿಕ ವಲಯದ ಕೈಗಾರಿಕೆ ಮುಚ್ಚಲ್ಪಟ್ಟರೆ, ಸುಮಾರು 20 ಸಾವಿರ ಕುಟುಂಬಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಈ ಭಾಗದ ಜನರ ಹಾಗೂ ನೌಕರ ವರ್ಗದವರ ಬದುಕು ದುರ್ಬರವಾಗುವ ಅಪಾಯವಿದೆ ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದ್ದಾರೆ. ಆತ್ಮನಿರ್ಭರ ಭಾರತಕ್ಕೆ ಈ ಕಾರ್ಖಾನೆ ಹೆಚ್ಚಿನ ಕೊಡುಗೆ ನೀಡಬಲ್ಲದು. ರಕ್ಷಣಾ ಕ್ಷೇತ್ರ, ಪರಮಾಣು ವಲಯ, ಆಟೋಮೊಬೈಲ್ ಹಾಗೂ ರೈಲ್ವೆ ಉಪಕರಣಗಳಿಗೆ ಪೂರಕ ಉತ್ಪನ್ನಗಳನ್ನು ಇದರಿಂದ ಪೂರೈಕೆ ಮಾಡಬಹುದು. ಹೀಗಾಗಿ ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಪ್ರಸ್ತಾವ ಕೈ ಬಿಟ್ಟು, ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಉಕ್ಕು ಸಚಿವಾಲಯ ಹಾಗೂ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಸದ್ಯಕ್ಕೆ ಭಾರತ ಉಕ್ಕು ಮತ್ತು ಕಬ್ಬಿಣವನ್ನು ಭಾರಿ ಪ್ರಮಾನದಲ್ಲಿ ರಫ್ತು ಮಾಡುತ್ತಿದೆ. ಈ ಮೊದಲು ಭಾರತ ಕೇವಲ ಆಮದನ್ನೇ ನೆಚ್ಚಿಕೊಂಡಿತ್ತು. ಈಗ ರಫ್ತು ಕೂಡಾ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅಷ್ಟೇ ಅಲ್ಲ, ಕಬ್ಬಿಣ ಮತ್ತು ಉಕ್ಕಿಗಾಗಿ ವಿದೇಶಿ ಆಮದು ನೆಚ್ಚಿಕೊಂಡಿದ್ದ ಭಾರತೀಯ ಕೈಗಾರಿಕೆಗಳು, ಈಗ ಭಾರತದಲ್ಲೇ ತಯಾರಾಗುತ್ತಿರುವ ಉಕ್ಕು, ಕಬ್ಬಿಣ ಬಳುಸುತ್ತಿದ್ದಾರೆ. ದೇಶದ ದೊಡ್ಡ ಪ್ರಮಾಣದ ವಿದೇಶಿ ವಿನಮಯ ಇದಕ್ಕಾಗಿಯೇ ಖರ್ಚಾಗುತ್ತಿತ್ತು. ಅವೆಲ್ಲವೂ ಹತೋಟಿಗೆ ಬಂದಿವೆ. ಆದರೆ ಅದರ ಲಾಭ ಭದ್ರಾವತಿಯ ವಿಐಎಸ್ಎಲ್`ಗೆ ಆಗಿಲ್ಲ. ವಿಶೇಷವೆಂದರೆ ಇದು ಕೇವಲ ಸರ್ಕಾರಿ ಸಮಸ್ಯೆಯಷ್ಟೇ ಅಲ್ಲ, ವಿಐಎಸ್ಎಲ್`ನವರ ಆಂತರಿಕ ಸಮಸ್ಯೆಯೂ ಹೌದು. ಕೆಲವು ಸಣ್ಣ ಸಣ್ಣ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೆ ದೊಡ್ಡದು ಮಾಡಿಕೊಂಡಿದ್ದು, ಸೋಮಾರಿತನ, ಸರ್ಕಾರದಿಂದ ಪಡೆದ ನೆರವನ್ನು ಬಳಸದೆ ವ್ಯರ್ಥ ಮಾಡಿದ್ದು, ಭ್ರಷ್ಟಾಚಾರ ಹೀಗೆ ವಿಐಎಸ್`ಎಲ್ ಕಷ್ಟಕ್ಕೆ ಕಾರಣಗಳು ಹಲವು. ಇದರಿಂದಾಗಿ ಪದೇ ಪದೇ ಮುಷ್ಕರ ನಡೆಯುತ್ತಿದ್ದು, ಮುಷ್ಕರ ನಡೆಯುವ ಕಂಪೆನಿಗೆ ಆರ್ಡರ್ ಕೊಡುವುದಾದರೂ ಯಾರು? ಅಲ್ಲವೇ. ಆದರೆ ಈ ಕುರಿತು ದೇವೇಗೌಡರ ಕಳಕಳಿಯನ್ನಂತೂ ಮೆಚ್ಚಬೇಕಾದದ್ದೇ.



