ಐಪಿಎಸ್ ಅಧಿಕಾರಿಯಾಗಿರುವ ಡಿ.ರೂಪಾ ಮೌದ್ಗಿಲ್, 2023ರ ಫೆ.18 ಮತ್ತು 19ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ತಮ್ಮ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ತಮ್ಮ ತೇಜೋವಧೆ ಮಾಡುವ ದುರುದ್ದೇಶದಿಂದಲೇ ರೂಪ ಅವರು ಈ ಕೃತ್ಯ ಎಸಗಿದ್ದು, ತಮ್ಮ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಮಾ.3ರಂದು ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಮಾನಹಾನಿ ಮಾಡಿ ಮಾನಸಿಕ ಯಾತನೆ ಉಂಟು ಮಾಡಿರುವುದಕ್ಕಾಗಿ ರೂಪಾ ಅವರಿಂದ ಒಂದು ಕೋಟಿ ರುಪಾಯಿಯನ್ನು ಪರಿಹಾರವಾಗಿ ಕೊಡಿಸಿಕೊಡಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು. ಅದನ್ನು ಪರಿಗಣಿಸಿದ್ದ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ರೂಪಾ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲು ಆದೇಶಿಸಿತ್ತು.
ಈ ಪ್ರಕರಣ ರದ್ದುಪಡಿಸುವಂತೆ ಕೋರಿ ರೂಪಾ ಹೈಕೋರ್ಚ್ ಮೆಟ್ಟಿಲೇರಿದ್ದಾರೆ. ರೂಪಾ ಪರ ವಕೀಲ ಮಧುಕರ್ ದೇಶಪಾಂಡೆ ವಕಾಲತ್ತು ವಹಿಸಿದ್ದಾರೆ. ಡಿ.ರೂಪಾ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ಸೋಮವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಇದೀಗ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ಹೂಡಿರುವ 1 ಕೋಟಿ ರು. ಕ್ರಿಮಿನಲ್ ಮಾನನಷ್ಟಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಸಲ್ಲಿಸಿರುವ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹಿಂದೆ ಸರಿದಿದ್ದಾರೆ.
ಈ ಹಿಂದೆ, ಜಡ್ಜ್ ಆಗುವ ಮೊದಲು ವಕೀಲರಾಗಿದ್ದಾಗ ನಾಗಪ್ರಸನ್ನ ಅವರು ಬೇರೆಯದೇ ಒಂದು ಕೇಸಿನಲ್ಲಿ ರೋಹಿಣಿ ಸಿಂಧೂರಿ ಪರ ವಕಾಲತ್ತು ವಹಿಸಿದ್ದರಂತೆ. ಹಾಗಾಗಿ, ತಾವು ಈ ಅರ್ಜಿ ವಿಚಾರಣೆ ನಡೆಸುವುದಿಲ್ಲ. ಅರ್ಜಿಯನ್ನು ಬೇರೊಂದು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲು ಸೂಕ್ತ ಆದೇಶ ಪ್ರಕಟಿಸಲು ಪ್ರಕರಣದ ಕಡತವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದಿಡಬೇಕು ಎಂದು ರಿಜಿಸ್ಟ್ರಾರ್ಗೆ ನಿರ್ದೇಶಿಸಿದ್ದಾರೆ.



