ತಮ್ಮನ ಪರ ನಿಂತ ಅಣ್ಣ. ಚಿಕ್ಕಪ್ಪನನ್ನೇ ಪ್ರಶ್ನಿಸಿದ್ದ ಮಕ್ಕಳಿಗೆ ಬುದ್ದಿವಾದ. ಅಣ್ಣನ ಮಕ್ಕಳನ್ನು ಇರಲಿ ಬಿಡು, ನಮ್ಮ ಕುಟುಂಬದ ಸಮಸ್ಯೆ. ನಾವೇ ಬಗೆಹರಿಸುತ್ತೇವೆ ಎಂಬಂತೆ ಮಾತನಾಡಿ ವಿವಾದ ತಪ್ಪಿಸಿದ ತಮ್ಮ. ಇದು ಹೆಚ್.ಡಿ.ಕುಮಾರಸ್ವಾಮಿ-ಪ್ರಜ್ವಲ್ ರೇವಣ್ಣ-ಸೂರಜ್ ರೇವಣ್ಣ-ಭವಾನಿ ರೇವಣ್ಣ-ಹೆಚ್.ಡಿ.ರೇವಣ್ಣ ಅವರ ನಡುವೆ ನಡೆದ ವಾಕ್ ಸಮರದ ಓವರ್ ಆಲ್ ಪಿಕ್ಚರ್.


ವಿಧಾನಸಭಾ ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆಯೇ ಹಾಸನ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಸೆಂಟರ್ ಆಫ್ ಬ್ಯಾಟಲ್ ಆಗುತ್ತಿದೆಯೇನೋ ಎಂಬ ಭಾವ. ಭವಾನಿ ರೇವಣ್ಣ ಅವರ ಬಹಿರಂಗ ಹೇಳಿಕೆಯಿಂದಾಗಿ ಶುರುವಾಗಿರುವ ಜ್ವಾಲಾಗ್ನಿ ಇದು. ಕುಮಾರಸ್ವಾಮಿ ಅವರಿಗೆ ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಅವರನ್ನೇ ನಿಲ್ಲಿಸುವ ಬಗ್ಗೆ ಮನಸ್ಸಿದೆ. ಟಿಕೆಟ್ ಘೋಷಿಸದೇ ಹೋದರು, ಅದನ್ನು ತಮ್ಮ ಇನ್ನಿತರ ವರ್ತನೆಗಳ ಮೂಲಕ ತೋರ್ಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭವಾನಿ ರೇವಣ್ಣ ನಾನೇ ಅಭ್ಯರ್ಥಿ ಎಂದು ಯಾವಾಗ ಹೇಳಿದರೋ ಹಾಸನ ರಣರಂಗ ರಂಗೇರಿತು. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎನ್ನುವ ಮೂಲಕ ಕುಮಾರಸ್ವಾಮಿ ಅತ್ತಿಗೆಯ ಮಾತಿಗೆ ತಿರುಗೇಟು ಕೊಟ್ಟರು.




ರೇವಣ್ಣ ಪ್ರತಿಜ್ಞೆ.. ಕಾರ್ಯಕರ್ತರಿಗೆ ರಿಲೀಫ್ : ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ನಿರ್ಣಯವೇ ಅಂತಿಮ. ಹಾಸನ ಹಾಗೂ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಟಿಕೆಟ್ ಕೊಡುವ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಜಿಲ್ಲೆಯ ಜೆಡಿಎಸ್ ಶಾಸಕರ ನಿರ್ಣಯಕ್ಕೆ ನಾನು ಮತ್ತು ನನ್ನ ಕುಟುಂಬ ಬದ್ಧರಾಗಿರುತ್ತದೆ. ನಾನು ಬದುಕಿರುವವರೆಗೂ ಕುಮಾರಸ್ವಾಮಿ ಮತ್ತು ನಾನು ಹೊಡೆದಾಡುವ ಪ್ರಶ್ನೆಯೇ ಉದ್ಭವಿಸಲ್ಲ.




ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣ ಅವರು ಟಿಕೆಟ್ ಕೇಳಿರುವುದು ದೊಡ್ಡ ವಿಷಯವಲ್ಲ. ಆ ಕುರಿತ ಗೊಂದಲವೇನಿದ್ದರೂ ಮನೆಯ ನಾಲ್ಕು ಗೋಡೆಗಳ ಮಧ್ಯೆ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ಮಕ್ಕಳಾಡಿದ ಮಾತುಗಳನ್ನು ದೊಡ್ಡದನ್ನಾಗಿ ಮಾಡುವ ಅಗತ್ಯವಿಲ್ಲ. ನನ್ನ ಮತ್ತು ಸೋದರ ಎಚ್.ಡಿ.ರೇವಣ್ಣ ನಡುವೆ ಗೊಂದಲ ಸೃಷ್ಟಿಸಲು ಸಾಧ್ಯವಿಲ್ಲ ಎಂದಿದ್ದಾರೆ ಕುಮಾರಸ್ವಾಮಿ.
ಮೂಲ ಎಲ್ಲಿದೆ ಗೊತ್ತಾ?
ಕಳೆದ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ನಾವಿಬ್ಬರೇ ಎಂದಿದ್ದರು ಕುಮಾರಸ್ವಾಮಿ. ಆಗಲೂ ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್ ಕೊಡಬೇಕು ಎನ್ನುವ ಕೂಗು ಕೇಳಿಬಂದಿತ್ತು. ಆಗ ತಾವು ಮತ್ತು ರೇವಣ್ಣ ಮಾತ್ರ ಅವರು ಮಾತ್ರ ನಿಲ್ಲುತ್ತೇವೆ ಎಂದ ಕುಮಾರಸ್ವಾಮಿ, ತಾವು ರಾಮನಗರ ಮತ್ತು ಚೆನ್ನಪಟ್ಟಣ ಎರಡೂ ಕಡೆ ಎಲೆಕ್ಷನ್ನಿಗೆ ನಿಂತರು. ಎರಡೂ ಕಡೆ ಗೆದ್ದರು. ಸಹಜವಾಗಿಯೇ ಒಂದು ಕ್ಷೇತ್ರ ತೆರವು ಮಾಡಬೇಕಾದಾಗ ಚೆನ್ನಪಟ್ಟಣ ಉಳಿಸಿಕೊಂಡು, ತಾವು ನಿಲ್ಲುತ್ತಿದ್ದ ಚೆನ್ನಪಟ್ಟಣವನ್ನು ಅನಿತಾ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟರು. ಅನಿತಾ ಶಾಸಕಿಯಾದರು. ಭವಾನಿ ರೇವಣ್ಣ ಅವರಿಗೆ ಇದು ತಂತ್ರವಾಗಿ ಕಾಣಿಸಿತು. ಅದಾದ ಮೇಲೆ ಮಂಡ್ಯದಲ್ಲಿ ನಿಖಿಲ್ ನಿಂತು ಸೋತರೆ, ಹಾಸನದಲ್ಲಿ ಪ್ರಜ್ವಲ್ ನಿಂತು ಲೋಕಸಭೆಗೆ ಹೋದರು. ಈಗ ಮತ್ತೊಮ್ಮೆ ಚುನಾವಣೆ ಬಂದಿದೆ. ಅನಿತಾ ಕುಮಾರಸ್ವಾಮಿ ಕ್ಷೇತ್ರವನ್ನು ಮಗ ನಿಖಿಲ್ ಅವರಿಗೆ ಬಿಟ್ಟುಕೊಟ್ಟಿದ್ಧಾರೆ. ತಮಗೆ ಹಾಸನ ಬಿಟ್ಟುಕೊಡಲಿ ಎನ್ನುವುದು ಭವಾನಿ ರೇವಣ್ಣ ಅವರ ಬಯಕೆ.



