ಹಾಸನ ರಾಜಕೀಯವೇ ಬೇರೆ… ಕರ್ನಾಟಕ ರಾಜಕೀಯವೇ ಬೇರೆ.. ಅದರಲ್ಲೂ ಜೆಡಿಎಸ್ ವಿಚಾರಕ್ಕೆ ಬಂದರೆ ಹಾಸನದ್ದು ಒಂದು ಲೆಕ್ಕ. ಇಡೀ ರಾಜ್ಯದ್ದು ಇನ್ನೊಂದು ಲೆಕ್ಕ ಎಂದು ಹೇಳಬಹುದು. ಅದು ದೇವೇಗೌಡರ ತವರು ಎಂಬ ಕಾರಣಕ್ಕಲ್ಲ, ಅಲ್ಲಿ ಹೆಚ್.ಡಿ.ರೇವಣ್ಣ ಕಾರುಬಾರು ಇದೇ ಎನ್ನುವುದು ನಿಜವಾದ ಕಾರಣ. ಸರ್ಕಾರ ಯಾವುದೇ ಆಗಿರಲಿ, ಯಾರೇ ಅಧಿಕಾರದಲ್ಲಿರಲಿ.. ರೇವಣ್ಣ ಹಾಸನದ ಕೆಲಸವನ್ನು ಪಟ್ಟು ಹಿಡಿದು ಮಾಡಿಸಿಕೊಳ್ಳುತ್ತಾರೆ. ಹೀಗಾಗಿಯೇ ಇದು ರೇವಣ್ಣ ಕೋಟೆ. ಅಂತಹ ಕೋಟೆಯಲ್ಲೀಗ ವಿಚಿತ್ರ ರಾಜಕೀಯ ಶುರುವಾಗಿದೆ.
ಅರಸೀಕೆರೆ, ಅರಕಲಗೂಡು ಕಥೆ ಏನು?
ವಿಚಿತ್ರ ಎನಿಸಬಹುದಾದರೂ ಅರಕಲಗೂಡು ಕ್ಷೇತ್ರಕ್ಕೆ ಎ.ಮಂಜು ಅವರು ಜೆಡಿಎಸ್`ನಿಂದ ನಿಂತರೂ ಕೂಡಾ ಪ್ರಬಲ ಅಭ್ಯರ್ಥಿಯೇ. ಜೆಡಿಎಸ್‍ನ ಸಾಂಪ್ರದಾಯಿಕ ಮತಗಳು ಹಾಗೂ ಮಂಜು ಅವರ ಶಕ್ತಿ ಒಟ್ಟುಗೂಡಿದರೆ ಗೆಲುವು ಕಷ್ಟವಲ್ಲ. 

ಶಿವಲಿಂಗೇಗೌಡರ ಜೆಡಿಎಸ್ ಓವರ್ :
ಇನ್ನು ಅರಸೀಕೆರೆಯ ಶಿವಲಿಂಗೇಗೌಡರ ಆಡಿಯೋಗಳು ಒಂದಾದ ಮೇಲೊಂದರಂತೆ ವೈರಲ್ ಆಗುತ್ತಿವೆ. ಕಾಂಗ್ರೆಸ್‍ನಿಂದ ನಿಂತರೆ 50 ಸಾವಿರ ವೋಟುಗಳಲ್ಲಿ ಗೆಲ್ಲುತ್ತೇನೆ ಎನ್ನುವ ಆಡಿಯೋ ಕೇಳಿ ಕೆರಳಿರುವ ಕುಮಾರಸ್ವಾಮಿ, ನೋಡೋಣ.. 50 ಸಾವಿರದಿಂದ ಗೆಲ್ತಾರೋ.. ಸೋಲ್ತಾರೋ… ಎನ್ನೋದನ್ನ ಎಂದಿದ್ದಾರೆ.

ಹಾಸನದಿಂದಲೇ ಆರಂಭ :
ಹಾಸನದ ರಾಜಕೀಯ ಚಕ್ರವ್ಯೂಹ ಶುರುವಾಗಿದ್ದೇ ಹಾಸನದಿಂದ. ಭವಾನಿ ರೇವಣ್ಣ ಯಾವಾಗ ತನಗೆ ಹಾಸನದಿಂದ ಸ್ಪರ್ಧಿಸುವ ಇಚ್ಚೆಯಿದೆ ಎಂದು ಬಹಿರಂಗವಾಗಿ ಹೇಳಿದರೋ ಅದೂವರೆಗೆ ಬೂದಿ ಮುಚ್ಚಿದ ಕೆಂಡದಂತಿದ್ದ ಜೆಡಿಎಸ್ ಭಿನ್ನಮತದ ಹೊಗೆ ಭುಗಿಲೆದ್ದಿತು.

ಮೂಲಗಳ ಪ್ರಕಾರ ಹೆಚ್.ಡಿ.ರೇವಣ್ಣ ಅವರ ಇಡೀ ಕುಟುಂಬ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಭವಾನಿಯವರಿಗೇ ಟಿಕೆಟ್ ಕೊಡುವಂತೆ ಮನವಿ ಮಾಡಿದೆ. ಆದರೆ ಕುಮಾರಸ್ವಾಮಿಯವರು ರೇವಣ್ಣ ಅವರ ಕುಟುಂಬದ ಮೂವರು ಈಗಾಗಲೇ ಅಧಿಕಾರದಲ್ಲಿದ್ಧಾರೆ. ಇದು ಕೆಟ್ಟ ಸಂದೇಶ ರವಾನೆಯಾಗಲಿದೆ ಎಂದಿದ್ದಾರಂತೆ. ಇದು ಅಂತೆಕಂತೆಗಳ ಸುದ್ದಿ ಮಾತ್ರ. ಆಗ ರೇವಣ್ಣ ಅವರು ಹಾಗಾದರೆ ಹಾಸನಕ್ಕೆ ನನಗೇ ಟಿಕೆಟ್ ಕೊಡಿ ಎಂದಿದ್ದಾರಂತೆ. ಅಕಸ್ಮಾತ್ ಇದಕ್ಕೆ ಕುಮಾರಸ್ವಾಮಿ ಒಪ್ಪಿ, ಹಾಸನಕ್ಕೆ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟರೆ ಹೊಳೆನರಸೀಪುರಕ್ಕೆ ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಹೊಳೆನರಸೀಪುರ ಕೂಡಾ ಭವಾನಿ ರೇವಣ್ಣ ಅವರಿಗೆ ಹೊಸ ಕ್ಷೇತ್ರವೇನಲ್ಲ. ರೇವಣ್ಣ ಅವರಂತೆಯೇ ಇಡೀ ಕ್ಷೇತ್ರ, ಕ್ಷೇತ್ರದ ಜನ, ಸ್ಥಳೀಯ ನಾಯಕರು ಎಲ್ಲರ ಪರಿಚಯ, ಒಡನಾಟ ಭವಾನಿ ರೇವಣ್ಣ ಅವರಿಗೆ ಇದೆ. ಕಾರ್ಯಕರ್ತರಲ್ಲಿ ಭವಾನಿ ರೇವಣ್ಣ ಜನಪ್ರಿಯರೂ ಹೌದು. ಹೀಗಾಗಿ ಹಾಸನಕ್ಕೆ ರೇವಣ್ಣ ಹಾಗೂ ಹೊಳೆ ನರಸೀಪುರಕ್ಕೆ ಭವಾನಿ ರೇವಣ್ಣ ಎಂಬ ಮಾತು ಕೇಳಿ ಬರುತ್ತಿದೆ.



