ಈ ಬಾರಿಯ ಅಸೆಂಬ್ಲಿ ಚುನಾವಣೆಯ ದಿಕ್ಕು ಮತ್ತೊಮ್ಮೆ ಬದಲಾಗಿದೆ. ಬಸವರಾಜ ಬೊಮ್ಮಾಯಿ ಸುಖಾಸುಮ್ಮನೆ ವಿವಾದ ಮೈಮೇಲೆ ಎಳೆದುಕೊಂಡರು ಎಂದೇ ಎಲ್ಲರೂ ಅಂದುಕೊಳ್ಳುತ್ತಿದ್ದ ವಿಷಯಕ್ಕೆ ಈಗ ಬೊಮ್ಮಾಯಿ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ. ಹಲವು ವರ್ಷಗಳಿಂದ ಎಲ್ಲ ರಾಜಕೀಯ ಪಕ್ಷಗಳೂ ಹೇಗೋ ನಡೆದುಕೊಂಡು ಹೋಗಲಿ ಬಿಡಿ ಎಂದೇ ಕೈತೊಳೆದುಕೊಳ್ಳುತ್ತಿದ್ದ ವಿಷಯ ಅದು. ಮೀಸಲಾತಿ ಹೆಚ್ಚಳ ಮತ್ತು ಒಳ ಮೀಸಲಾತಿ ಹೆಚ್ಚಳ. ಅವೆಲ್ಲವನ್ನೂ ಬೊಮ್ಮಾಯಿ ಯಶಸ್ವಿಯಾಗಿಯೇ ನಿಭಾಯಿಸಿದ್ದಾರೆ.
ಸರ್ಕಾರದ ಈ ನಿರ್ಧಾರ ಯಥಾವತ್ ಆಗಿ ಜಾರಿಗೆ ಬಂದರೆ, ಮುಸ್ಲಿಮರನ್ನು ಬಿಟ್ಟರೆ ಮಿಕ್ಕ ಎಲ್ಲರಿಗೂ ಇದು ಲಾಭದಾಯಕವೇ. ಎಲ್ಲರೂ ಲಿಂಗಾಯತ ಮತ್ತು ಒಕ್ಕಲಿಗರ ಬಗ್ಗೆ ಮಾತನಾಡುತ್ತಿದ್ದಾರೆ. ಇದರ ಮಧ್ಯೆ ಮರೆತೇ ಹೋಗಿರುವುದು ದಲಿತರ ಮೀಸಲಾತಿ ಹೆಚ್ಚಳವಾಗಿರುವುದು. ಹಾಗೆ ನೋಡಿದರೆ ಮೀಸಲಾತಿಯಲ್ಲಿದ್ದರೂ ಯಾವ ಲಾಭವೂ ಇಲ್ಲದೆ ಇದ್ದವರು. ದಲಿತ ಎಡಗೈ ಸಮುದಾಯದವರು. ಎಡಗೈ ದಲಿತರನ್ನು ದಲಿತರಲ್ಲೇ ಕೆಲ ವರ್ಗದವರು ಅಸ್ಪøಶ್ಯರಂತೆ ನೋಡುತ್ತಾರೆ. ಹೀಗಿರುವಾಗ ಮೀಸಲಾತಿ ಪ್ರಯೋಜನೆಯ ಲಾಭ ಎಲ್ಲಿಂದ ಬರಬೇಕು. ಅದಕ್ಕೆ ಒಳ ಮೀಸಲಾತಿಯನ್ನೂ ತಂದು ಲಾಭ ಹಂಚುವ ಸವಾಲಿಗೆ ಕೈ ಹಾಕಿದ್ದಾರೆ ಬೊಮ್ಮಾಯಿ.


ಮೀಸಲಾತಿಯಿಂದ ಯಾವುದೇ ಲಾಭವಿಲ್ಲ. ಬೊಮ್ಮಾಯಿವರಿಗೆ ಸೋಷಿಯಲ್ ಎಂಜಿನಿಯರಿಂಗ್ ಗೊತ್ತಿಲ್ಲ ಎನ್ನುವ ವಾದ ಮಾಡುವವರಿಗೇನೂ ಕಮ್ಮಿಯಿಲ್ಲ. ಆದರೆ ಮೀಸಲಾತಿ ಹೆಚ್ಚಾದಾಗ ಲಾಭವಾಗುವುದಿಲ್ಲವೇ.. ಹೆಚ್ಚು ಅವಕಾಶ ಸಿಕ್ಕುವುದಿಲ್ಲವೇ ಎಂಬ ಪ್ರಶ್ನೆ ಎತ್ತಿದಾಗ ನಿಮಗೆ ಅರ್ಥವಾಗಲ್ಲ. ಗೊತ್ತಾಗಲ್ಲ ಎಂದು ಥೇಟು ಸಿದ್ದರಾಮಯ್ಯ ಶೈಲಿಯಲ್ಲಿಯೇ ಉತ್ತರ ಕೊಡುವ ಪಂಡಿತರೂ ಇದ್ದಾರೆ.
ಹಾಗಂತ ಯಾರಿಗೂ ಅನ್ಯಾಯವೇ ಆಗಿಲ್ಲವೇ ಎಂದರೆ ಮುಸ್ಲಿಮರತ್ತ ಕಣ್ಣು ಹೊರಳುತ್ತದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎನ್ನುವ ವಾದವೇನೋ ಸರಿ. ಆದರೆ ಇಷ್ಟು ದಿನ ಕೊಟ್ಟು ಇದ್ದಕ್ಕಿದ್ದಂತೆ ಕಿತ್ತುಕೊಂಡಾಗ ಅನ್ಯಾಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಸಿಗುತ್ತಲೂ ಇಲ್ಲ. ಅಕಸ್ಮಾತ್ ಮುಸ್ಲಿಮರು ಕೋರ್ಟ್ ಮೆಟ್ಟಿಲೇರಿದರೆ, ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಸರ್ಕಾರದ ಅಧಿಸೂಚನೆಗೆ ತಡೆಯಾಜ್ಞೆ ತಂದರೆ ಮತ್ತೆ ಹಿಂದಿನ ಮೀಸಲಾತಿಗೆ ಮರಳಬೇಕಾಗಿ ಬರಬಹುದು. ರಾಜಕೀಯ ಲೆಕ್ಕಾಚಾರ ಬೇರೆಯೇ ಇದೆ.




ಬಿಜೆಪಿಯವರೇನೋ ಹುಮ್ಮಸ್ಸಿನಲ್ಲಿದ್ದಾರೆ. ದಲಿತರಲ್ಲಿ ಎಡಗೈ ದಲಿತರು ಬಿಜೆಪಿ ಜೊತೆಯಲ್ಲಿದ್ದಾರೆ. ಅವರನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಬಹುದು. ಬಹುತೇಕ ಕಾಂಗ್ರೆಸ್ ಜೊತೆಯಲ್ಲೆ ಇರುವ ದಲಿತ ಬಲಗೈ ಸಮುದಾಯದವರು ಈ ನಿರ್ಧಾರದ ನಂತರ ಬಿಜೆಪಿಯತ್ತ ವಾಲಿದರೂ ಆಶ್ಚರ್ಯವಿಲ್ಲ. ಇನ್ನು ಲಿಂಗಾಯತರದ್ದು. ಲಿಂಗಾಯತರಲ್ಲಿ ವೀರಶೈವ ಬೇರೆ..ಲಿಂಗಾಯತ ಬೇರೆ.. ಎಂಬ ವಾದ ಸೃಷ್ಟಿಸಿದ್ದ ಕಾಂಗ್ರೆಸ್ ಎದುರು ಬಿಜೆಪಿ ನಿರಾಯುಧನಾಗಿ ನಿಂತಿತ್ತು. ಆದರೆ ಈ ಬಾರಿ ಹಾಗಲ್ಲ. ಪಂಚಮಸಾಲಿಗಳನ್ನು ಪ್ರತ್ಯೇಕಗೊಳಿಸುವ ಹೋರಾಟದ ಹಿಂದೆ ರಾಜಕೀಯ ಇತ್ತು ಅನ್ನೋದು ಓಪನ್ ಸೀಕ್ರೆಟ್. ಕಾಂಗ್ರೆಸ್ಸಿಗೆ ದೊಡ್ಡ ಹೊಡೆತವೂ ಬಿದ್ದಿದೆ. ಇದರ ಮಧ್ಯೆ ಇದೇ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಯತ್ನಾಳ್ ಅವರ ಮೂಲಕ ಅದನ್ನೂ ಏಕಾಏಕಿ ಕಾಂಗ್ರೆಸ್ಸಿಗೆ ಹೋಗೋಕೆ ಬಿಟ್ಟಿಲ್ಲ. ಇನ್ನು ಒಕ್ಕಲಿಗರ ಬೇಡಿಕೆಗೂ ಮನ್ನಣೆ ಸಿಕ್ಕಿದೆ. ಒಟ್ಟಿನಲ್ಲಿ ಈ ಎಲ್ಲ ಲೆಕ್ಕದ ಪ್ರಕಾರ ಬಿಜೆಪಿಗೆ ಲಾಭವಿದೆ ಎನ್ನಿಸುತ್ತಿದೆ.
ಆದರೆ.. ಇತಿಹಾಸ ಹೇಳುತ್ತಿರುವುದೇ ಬೇರೆ. ಇದುವರೆಗೆ ಮೀಸಲಾತಿ ಕುರಿತಂತೆ ದಿಟ್ಟ ಹೆಜ್ಜೆಯಿಟ್ಟು ಉಘೇ ಉಘೇ ಎನ್ನಿಸಿಕೊಂಡಿದ್ದ ವಿಪಿ ಸಿಂಗ್ ಅವರಾಗಲೀ, ದೇವೇಗೌಡರಾಗಲೀ, ಲಿಂಗಾಯತ ಧರ್ಮ ಸೃಷ್ಟಿಗೆ ಕೈ ಹಾಕಿದ್ದ ಸಿದ್ದರಾಮಯ್ಯ ಅವರಾಗಲೀ ಗೆದ್ದಿಲ್ಲ. ಬೊಮ್ಮಾಯಿ ಹೇಳಿದಂತೆ ಅದು ಅಕ್ಷರಶಃ ಜೇನುಗೂಡು. ಕೈ ಹಾಕಿದಾಗ ಅದೃಷ್ಟ ಚೆನ್ನಾಗಿದ್ದರೆ ಜೇನುಗೂಡಿನಲ್ಲಿದ್ದ ಜೇನ್ನೊಣಗಳು ಹಾರಿ ಹೋಗಿ ಸಿಹಿ ಜೇನು ಸಿಕ್ಕರೂ ಸಿಗಬಹುದು. ಜೇನ್ನೊಣಗಳು ರೊಚ್ಚಿಗೆದ್ದು ಕಚ್ಚಿದರೆ ವಿಷ ಮೈಗೇರಬಹುದು.



