ಪುಲಿಕೇಶಿ ನಗರ. ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರ. ಆದರೆ ಈ ಬಾರಿ ಪುಲಿಕೇಶಿನಗರ ಹಾಟ್ ಹಾಟ್ ಆಗಿದೆ. ಇಲ್ಲಿ ಇರೋದು ಅಖಂಡ ಶ್ರೀನಿವಾಸ ಮೂರ್ತಿ. ಇವರ ಮನೆಯನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದ್ದರು. ಆದರೆ ಬೆಂಕಿಯಲ್ಲಿ ಮನೆ ಭಸ್ಮ ಮಾಡಿಕೊಂಡ ಅಖಂಡಗೆ ಟಿಕೆಟ್ ಕೊಡಬೇಡಿ ಎಂಬ ಒತ್ತಡ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಬೆಂಕಿ ಹಚ್ಚಿದವರಿಗೇ ಟಿಕೆಟ್ ಕೊಡಬೇಕು ಎಂಬ ಬೇಡಿಕೆಯೂ ಜೋರಾಗಿದೆ. ಮೊದಲ ಪಟ್ಟಿಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಹೆಸರಿಲ್ಲ. ಹಾಲಿ ಶಾಸಕ. ದಲಿತ ನಾಯಕ. ದುಷ್ಕರ್ಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಶಾಸಕ. ಕಳೆದ ಬಾರಿ ದಾಖಲೆ ಮತಗಳನ್ನು ಪಡೆದು ಗೆದ್ದಿದ್ದವರು. ಹೀಗಿರುವಾಗ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಇಲ್ಲ ಎಂದಾಗ ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ.
ಪುಲಿಕೇಶಿ ನಗರದ ಕಥೆ : ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಯಿಂದ ನಕರಾತ್ಮಕವಾಗಿ ಗಮನಸೆಳೆದಿದ್ದ ಪುಲಿಕೇಶಿ ನಗರದ ಕಥೆ ಸಣ್ಣದೇನಲ್ಲ. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಯ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗಲಭೆ ನಡೆದಿತ್ತು. ಪೊಲೀಸ್ ಠಾಣೆಗೂ ಬೆಂಕಿ ಹಚ್ಚಲಾಗಿದ್ದು, ನಂತರದಲ್ಲಿ ನಡೆದ ಪೊಲೀಸ್ ಗೊಲಿಬಾರ್ಗೆ ಮೂವರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಕಾಂಗ್ರೆಸ್ ಮಾಜಿ ಮೇಯರ್ ಸಂಪತ್ ರಾಜ್ ಬಂಧನವೂ ಆಗಿತ್ತು.
ಅಖಂಡ ಸಿದ್ದು ಬೆಂಬಲಿಗರಾದರೆ, ಸಂಪತ್ ರಾಜ್ ಡಿಕೆಶಿ ಬೆಂಬಲಿಗ. ಅರೆಸ್ಟ್ ಆಗಿ, ಆಮೇಲೆ ಜಾಮೀನಿನ ಮೇಲೆ ಹೊರಬಂದ ಸಂಪತ್ ರಾಜ್ ಬಹಿರಂಗವಾಗಿ ಕಾಣಿಸಿಕೊಂಡಿದ್ದೆಲ್ಲ ಡಿಕೆಶಿ ಜೊತೆಯಲ್ಲಿಯೇ. ಅಖಂಡ ಕಣ್ಣೀರಿಟ್ಟರು. ಗೋಗರೆದರು. ಹೈಕಮಾಂಡಿಗೆ ದೂರು ಕೊಟ್ಟರು. ಕೊನೆಗೆ ಶರಣಾಗತರೂ ಆಗಿಬಿಟ್ಟರು. ಅಖಂಡ ಮನೆಗೆ ಬೆಂಕಿ ಇಟ್ಟ ಆರೋಪಿಗಳಿಗೆ ಕಾಂಗ್ರೆಸ್ಸಿಗರೇ ಕುಮ್ಮಕ್ಕು ನೀಡಿದ್ದರೆಂಬ ಆರೋಪವಿತ್ತು. ಕೊನೆಗೆ ಅಖಂಡ ಸೈಲೆಂಟ್ ಆದರು. ಮುಸ್ಲಿಂ ಏರಿಯಾಗಳಿಗೇ ಹೋಗಿ, ತಮ್ಮ ವಿರುದ್ಧ ಘೋಷಣೆ ಕೂಗಿದ್ದವರ ಮನೆಗೆ ರೇಷನ್ ಕಿಟ್ ವಿತರಿಸಿದರು. ಇದು ಹಳೆ ಕಥೆ.


ಮುಸ್ಲಿಮ್ ಮೌಲಾನಗಳ ವಿರೋಧದ ಮಾತು : ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ಕೊಡಬೇಡಿ ಎಂದು ಮುಸ್ಲಿಂ ಧರ್ಮಗುರುಗಳು ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರಂತೆ. ಹೀಗಾಗಿಯೇ ಟಿಕೆಟ್ ಘೋಷಣೆ ಆಗಿಲ್ಲ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು. ಅಖಂಡ ಬೆಂಬಲಿಗರು ಬಹಿರಂಗ ಪ್ರತಿಭಟನೆ ಮಾಡಿದ್ದರೂ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಆಗಲೀ, ಡಿಕೆಶಿವಕುಮಾರ್ ಆಗಲಿ ತುಟಿಕ್ ಪಿಟಿಕ್ ಎಂದಿಲ್ಲ.
ಧರ್ಮಗುರುಗಳ ಭಯ. ಹೀಗಾಗಿ 81 ಸಾವಿರ ಮತಗಳ ದಾಖಲೆ ಅಂತರದಲ್ಲಿ ಗೆದ್ದು ದಾಖಲೆ ಬರೆದಿದ್ದ ಅಖಂಡ ಟಿಕೆಟ್`ಗಾಗಿ ವೇಯ್ಟಿಂಗ್ ಮಾಡುವ ಪರಿಸ್ಥಿತಿ ತಲೆದೋರಿದೆ. ದಲಿತ ಎಂಬುದೂ ವರ್ಕೌಟ್ ಆಗಿಲ್ಲ. ಏಕೆಂದರೆ ಈ ಕ್ಷೇತ್ರದಲ್ಲಿರೋ ಎರಡೂವರೆ ಲಕ್ಷ ಮತದಾರರಲ್ಲಿ 71 ಸಾವಿರ ಮುಸ್ಲಿಮರು. ಮುಸ್ಲಿಮರು ಯೆಸ್ ಎಂದರೆ ಮಾತ್ರ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್.
ಪುಲಿಕೇಶಿ ನಗರದಲ್ಲಿ ಮುಸ್ಲಿಮರು ಮಾತ್ರನಾ..?
ಹಾಗೇನಿಲ್ಲ. ಎರಡೂವರೆ ಲಕ್ಷ ಮತದಾರರಲ್ಲಿ ಮುಸ್ಲಿಮರು 71 ಸಾವಿರ ಇದ್ದರೆ, ಎಸ್ಸಿ+ಎಸ್ಟಿ ದಲಿತರು 45 ಸಾವಿರ, ಒಕ್ಕಲಿಗರು 25 ಸಾವಿರ ಇದ್ದಾರೆ. ಉಳಿದಂತೆ ಒಬಿಸಿ, ಲಿಂಗಾಯತ, ಕುರುಬ, ದೇವಾಂಗ, ಯಾದವರು ಹಾಗೂ ಇತರರ ಸಂಖ್ಯೆ ಸುಮಾರು 30 ಸಾವಿರ ಇದೆ. ಆದರೆ ಈ ಯಾವ ಮತದಾರರೂ ಮುಸ್ಲಿಮರ ರೀತಿ ಒಗ್ಗಟ್ಟಾಗಿ ಮತ ಹಾಕಲ್ಲ. ಹೀಗಾಗಿಯೇ ಮುಸ್ಲಿಂ ಧರ್ಮಗುರುಗಳ ಮಾತನ್ನು ಮೀರಲು ಕಾಂಗ್ರೆಸ್ಸಿಗೆ ಸಾಧ್ಯವಾಗುತ್ತಿಲ್ಲ.
ಸದ್ಯಕ್ಕೇನೋ ಅಖಂಡ ನಮಗೆ ಟಿಕೆಟ್ ಫಿಕ್ಸ್ ಎನ್ನುತ್ತಿದ್ದಾರೆ. ಆದರೆ.. ನೋ ಗ್ಯಾರಂಟಿ.



