ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಭಾರಿ ಸದ್ದು ಮಾಡಿತ್ತು. ಹಾಗೆ ನೋಡಿದರೆ ಈ ಬಾರಿಯ ಕಾಂಗ್ರೆಸ್ ಗೆಲುವಿಗೆ ಹಾಗೂ ಬಿಜೆಪಿಯ ಹೀನಾಯ ಸೋಲಿಗೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವೂ ಕಾರಣ ಎಂದರೆ ತಪ್ಪೇನಲ್ಲ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಂತರ ಸಾವಿರಾರು ಬಿಜೆಪಿ ಕಾರ್ಯಕರ್ತರು, ಪಕ್ಷವನ್ನು ತೊರೆದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕರಾವಳಿಯಲ್ಲಿ ಪಕ್ಷದ ಕಾರ್ಯಕರ್ತರ ಆಕ್ರೋಶ ಎದುರಿಸಿದ್ದರು. ಇದೀಗ ಫಲಿತಾಂಶವನ್ನೂ ಎದುರಿಸುತ್ತಿದ್ದಾರೆ. ಆದರೆ ಈಗ ಕೊಲೆಯಾಗಿದ್ದ ಪ್ರವೀಣ್ ನೆಟ್ಟಾರು ಪತ್ನಿಯವರಿಗೆ ಸರ್ಕಾರ ಕೊಡಿಸಿದ್ದ ಕೆಲಸದ ಆಸರೆಯೂ ದೂರವಾಗಿದೆ.
ಪ್ರವೀಣ್ ನೆಟ್ಟಾರು ಪತ್ನಿ ಕುಮಾರಿ ಅವರಿಗೆ ನೀಡಿದ್ದ ಅನುಕಂಪದ ಆಧಾರದ ಮೇಲೆ ನೀಡಲಾಗಿದ್ದ ಗುತ್ತಿಗೆ ಆಧಾರದ ನೌಕರಿಯಿಂದ ವಜಾ ಮಾಡಲಾಗಿದೆ. ಕಾರಣ ಇಷ್ಟೆ, ಈಗ ಸರ್ಕಾರ ಬದಲಾಗಿದೆ. ಹೊಸ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ.ಈ ಹಿಂದಿನ ಸರ್ಕಾರ ಮಾಡಿದ ಎಲ್ಲ ರೀತಿಯ ತಾತ್ಕಾಲಿಕ ನೆಲೆಯ ನೇಮಕಾತಿಗಳನ್ನು ರದ್ದುಪಡಿಸುವುದು ವಾಡಿಕೆ. ಅದರಂತೆ ನೂತನ ಕುಮಾರಿ ಅವರ ಉದ್ಯೋಗಕ್ಕೂ ಕತ್ತರಿ ಪ್ರಯೋಗ ಮಾಡಲಾಗಿದೆ. ತಕ್ಷಣದಿಂದಲೇ ಕರ್ತವ್ಯದಿಂದ ತೆಗೆದುಹಾಕಿ ಆದೇಶ ಹೊರಡಿಸಲಾಗಿದೆ. ಇದರಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ನಿರ್ವಹಿಸುತ್ತಿದ್ದ ಕರ್ತವ್ಯದಿಂದ ನೂತನ ಕುಮಾರಿ ಶುಕ್ರವಾರ ಹೊರಹೋಗುವಂತಾಗಿದೆ.
ಪ್ರವೀಣ್ ನೆಟ್ಟಾರು ಅವರ ಪತ್ನಿ ಕುಮಾರಿಯವರಿಗೆ ಬಿಜೆಪಿ ವತಿಯಿಂದಲೇ ಮನೆ ಕಟ್ಟಿಕೊಡಲಾಗಿತ್ತು. ಚುನಾವಣೆಗೆ ಮುನ್ನ ಆ ಮನೆಯ ಗೃಹ ಪ್ರವೇಶವೂ ಆಗಿತ್ತು. ನೆಟ್ಟಾರು ಕೊಲೆ ಆದ ನಂತರ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ತಮ್ಮ ವಿಶೇಷ ಅಧಿಕಾರ ಬಳಸಿ ಕುಮಾರಿ ಅವರಿಗೆ ಗುತ್ತಿಗೆ ನೌಕರಿ ಕೊಡಿಸಿದ್ದರು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಖ್ಯಮಂತ್ರಿ ಕಚೇರಿಯಲ್ಲೇ ವಿಶೇಷ ನೇಮಕಾತಿ ನಡೆಸಿ 2022ರ ಸೆ.22ರಂದು ಆದೇಶ ಹೊರಡಿಸಿದ್ದರು. ಈ ಆದೇಶದಲ್ಲಿ ಗುತ್ತಿಗೆ ಆಧಾರದಲ್ಲಿ ಹಿರಿಯ ಸಹಾಯಕ ಗ್ರೂಪ್ ಸಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಈ ಹುದ್ದೆ ಮುಖ್ಯಮಂತ್ರಿ ಅಧಿಕಾರ ಇರುವ ತನಕ ಇಲ್ಲವೇ ಮುಂದಿನ ಆದೇಶ ವರೆಗೆ ಎಂದು ನಮೂದಿಸಲಾಗಿತ್ತು. ಆ ಆದೇಶದಲ್ಲಿ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಯಲ್ಲಿ ಎಂದಿದ್ದರೂ ನೂತನ ಕುಮಾರಿ ಅವರ ಅಪೇಕ್ಷೆ ಮೇರೆಗೆ ಅವರನ್ನು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅ.14ರಂದು ನೂತನ ಕುಮಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈಗ ಸರ್ಕಾರ ಬದಲಾದ್ದರಿಂದ ಕೇವಲ ಏಳು ತಿಂಗಳಲ್ಲೇ ನೂತನ ಕುಮಾರಿ ಅವರು ಕರ್ತವ್ಯವನ್ನು ತ್ಯಜಿಸಬೇಕಾಗಿ ಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ದ.ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್, ಈ ರೀತಿ ಹೊಸ ಸರ್ಕಾರ ಬಂದಾಗ ಹಳೆಯ ಸರ್ಕಾರದ ತಾತ್ಕಾಲಿಕ ಆದೇಶಗಳು ಸ್ಥಗಿತವಾಗುವುದು ಸಹಜ ಪ್ರಕ್ರಿಯೆ. ಕುಮಾರಿಯವರೂ ಕೂಡಾ ಗಮನಕ್ಕೆ ತಂದಿದ್ದಾರೆ. ಈ ಕುರಿತು ಸರ್ಕಾರದ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.



