ಮೊದಲಿಗೆ ಪ್ರತಾಪ್ ಸಿಂಹ. ಮೈಸೂರು ಲೋಕಸಭಾ ಸದಸ್ಯರಾಗಿರುವ ಪ್ರತಾಪ್ ಸಿಂಹ ಎರಡು ಬಾರಿ ಗೆದ್ದಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೈವೇ ರೂವಾರಿ ಎನಿಸಿಕೊಂಡಿರುವ ಪ್ರತಾಪ್ ಸಿಂಹ, ಸೋಮಣ್ಣ ಅವರನ್ನು ಗೆಲ್ಲಿಸುವುದಕ್ಕಾಗಿ ಶ್ರಮಿಸಿದ್ದರು. ಆದರೆ ಸಿದ್ದರಾಮಯ್ಯ ವಿರುದ್ಧ ಸೋತರು. ಅವರ ಪ್ರಕಾರ..
ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದು, ಯಾರ ಮೇಲೆ ಯಾರೂ ಆರೋಪ ಮಾಡದಂತೆ ಒಂದು ಗೌಪ್ಯ ಒಡಂಬಡಿಕೆ ಮಾಡಿಕೊಂಡಂತೆ ವರ್ತಿಸುತ್ತಿದ್ದಾರೆ. ಬಹುಶಃ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿಯ ಅತಿರಥ ಮಹಾರಥರೇ ಷಾಮೀಲಾಗಿರಬಹುದು. ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿರುವಂತೆ ಕಾಣುತ್ತದೆ.
ಬಿಜೆಪಿಯವರು ಅಧಿಕಾರಕ್ಕೆ ಬಂದ ಕೂಡಲೇ ಅರ್ಕಾವತಿ ಹಗರಣ, ಡಿ ನೋಟಿಫಿಕೇಶನ್, ಕೆಂಪಣ್ಣ ಆಯೋಗದ ವರದಿ ಮುಂತಾದ ಪ್ರಕರಣಗಳನ್ನು ತೋರಿಸಿ, ಕಾಂಗ್ರೆಸ್ ನಾಯಕರನ್ನು ಹೆದರಿಸುತ್ತಾರೆ. ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರದಲ್ಲಿ ಕೇಳಿ ಬಂದಿದ್ದ ಆರೋಪಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಹಾಕುತ್ತಾರೆ. ಯಾರೂ ಯಾರ ವಿರುದ್ಧವೂ ತನಿಖೆ ಮಾಡಲ್ಲ. ಅದನ್ನು ನೋಡಿದರೆ, ಎರಡೂ ಪಕ್ಷದ ಹಿರಿಯ ನಾಯಕರು ಪರಸ್ಪರ ಹೊಂದಾಣಿಕೆ ರಾಜಕೀಯವನ್ನು ಮಾಡುತ್ತಿದ್ದಾರೆಂಬ ಅನುಮಾನಗಳು ಮೂಡುತ್ತಿವೆ.
ಎರಡನೆಯದಾಗಿ ಸಿಟಿ ರವಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿರುವ ಸಿಟಿ ರವಿಗೆ ಇದು ಮೊದಲ ಹೀನಾಯ ಸೋಲು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಿದ್ದ ಸಿಟಿ ರವಿ, ಚುನಾವಣೆ ವೇಳೆ ಯಡಿಯೂರಪ್ಪ ಕುರಿತು ಆಡಿದ್ದ ಮಾತುಗಳು ಸಂಚಲನ ಮೂಡಿಸಿದ್ದವು. ಈ ಬಾರಿ ಚಿಕ್ಕಮಗಳೂರಿಗೆ ಯಡಿಯೂರಪ್ಪ ಪ್ರಚಾರಕ್ಕೆ ಹೋಗಲಿಲ್ಲ. ಸೋತಿದ್ದು ತಮ್ಮ ಶಿಷ್ಯರೇ ಆಗಿದ್ದ, ಯಡಿಯೂರಪ್ಪ ಆಪ್ತರಾಗಿದ್ದವರ ವಿರುದ್ಧ. ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಟಿ ರವಿ ಅವರ ಪ್ರಕಾರ..
ಕೆಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಮಾತಾಡ್ತೀವಿ. ಕಾಂಗ್ರೆಸ್ನವರು ನವರು ಒಂದಷ್ಟು ಆರೋಪಗಳನ್ನು ನಮ್ಮ ಮೇಲೆ ಮಾಡಿದ್ದರು. ಅದನ್ನೆಲ್ಲ ಕಾಂಗ್ರೆಸ್ನವರು ಈಗ ಸಾಬೀತು ಮಾಡಿ ತೋರಿಸಲಿ. ಎಲ್ಲಾ ಪಾರ್ಟಿಯಲ್ಲೂ ಹೊಂದಾಣಿಕೆ ರಾಜಕೀಯ ಮಾಡೋರು ಇದ್ದಾರೆ. ಇದಕ್ಕೆ ಬಿಜೆಪಿಯೂ ಹೊರತಲ್ಲ. ನೇರವಾಗಿ ಮಾತಾಡೋರ ಮೇಲೆ ಮುಗಿಬೀಳುತ್ತಾರೆ. ಪಕ್ಷದ ಸೂಕ್ತ ವೇದಿಕೆಯಲ್ಲಿ ಹೊಂದಾಣಿಕೆ ರಾಜಕಾರಣಿದ ಬಗ್ಗೆ ಚರ್ಚೆ ಮಾಡ್ತೇವೆ. ಬಹಿರಂಗವಾಗಿ ಹೇಳೊಕೆ ಸಾಧ್ಯವಿಲ್ಲ.
ಇನ್ನು ರಮೇಶ್ ಜಿಗಜಿಣಗಿಯವರಂತೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 70ಕ್ಕೂ ಹೆಚ್ಚು ಜನ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಅದರಲ್ಲಿ ಗೆದ್ದವರು ಬೆರಳಣಿಕೆಯಷ್ಟುಜನ ಮಾತ್ರ. ಹಿರಿಯರಿಗೆ ಟಿಕೆಟ್ ಕೊಟ್ಟಿದ್ದರೆ ಎಲ್ಲರೂ ಗೆಲ್ಲುತ್ತಿದ್ದರು. ಆಗ 130ಕ್ಕೂ ಹೆಚ್ಚು ಸೀಟ್ಗಳಲ್ಲಿ ಬಿಜೆಪಿ ಗೆದ್ದು ಬಹುಮತ ಸಾಧಿಸುತ್ತಿತ್ತು. ಹೊಸಬರಿಗೆ ಬಿಜೆಪಿ ಟಿಕೆಟ್ ಕೊಡುವ ಔಚಿತ್ಯ ಇರಲಿಲ್ಲ. ಆ ಸಲಹೆ ಕೊಟ್ಟವರನ್ನು ನೇಣಿಗೆ ಹಾಕಬೇಕು ಎಂದು ಕಿಡಿಕಾರಿದ್ದಾರೆ.
ಈ ಮಾತು ಹೊಸದೇನಲ್ಲ. ಆದರೆ ಇದಕ್ಕೆಲ್ಲ ಕಾರಣವೇನು ಎಂದರೆ.. ಅವರ ಸಿಟ್ಟಿರುವುದು ಹಿರಿಯ ನಾಯಕರ ಮೇಲೆ. ಈಗಲೂ ಅಷ್ಟೆ, ಪ್ರತಾಪ್ ಸಿಂಹ, ಸಿಟಿ ರವಿ, ಯತ್ನಾಳ್, ಬೊಮ್ಮಾಯಿ ಮೊದಲಾದವರು ಟೀಕೆ ಮಾಡುತ್ತಿರುವುದೇನೋ ನಿಜ.. ಆದರೆ ಹಿರಿಯ ನಾಯಕರು ತುಟಿ ಬಿಚ್ಚುತ್ತಿಲ್ಲ. ಇದೇ ಕಾರಣಕ್ಕಾಗಿ ಬಿಜೆಪಿ ವರ್ಸಸ್ ಬಿಜೆಪಿ ವಾರ್ ಶುರುವಾಗಿದೆ. ಇದಕ್ಕೆಲ್ಲ ಏನು ಕಾರಣ ಎಂದು ಹುಡುಕಿದರೆ.. ಅಧಿಕಾರ ಇದ್ದಾಗ ಇವರು ಮಾಡಿದ್ದೇ ಇವರಿಗೆ ತಿರುಗುಬಾಣವಾಗಿರುವುದು ಸ್ಪಷ್ಟ.
ಅನುಮಾನವೇ ಇಲ್ಲ. ಹಿರಿಯ ನಾಯಕರನ್ನು ಕಡೆಗಣಿಸುವ ಆಟ ಆಡಿದ್ದು, ನಾಟಕ ಮಾಡಿದ್ದು, ವೇದಿಕೆಯ ಮೇಲಷ್ಟೇ ಕೊಂಡಾಡಿದ್ದು ಈಗ ಅಡ್ಜಸ್ಟ್‍ಮೆಂಟ್ ರಾಜಕೀಯದ ಆರೋಪ ಮಾಡುತ್ತಿರುವವರೇ. ಆದರೆ ಅಂತರಂಗದಲ್ಲಿ ಆ ಹಿರಿಯ ನಾಯಕರಿಗೆ ಹೆಜ್ಜೆ ಹೆಜ್ಜೆಗೂ ಮುಳ್ಳಾಗಿ ಕಾಡಿದ್ದೂ ಇವರೇ. ಅವರು ಮತ್ತೇನೂ ಮಾಡಲಿಲ್ಲ. ಸೈಲೆಂಟ್ ಆದರಷ್ಟೇ. ಅವರ ಮೌನದ ಹೊಡೆತಕ್ಕೇ ರಾಜ್ಯದ ಬಿಜೆಪಿ ನಾಯಕರು ತತ್ತರಿಸಿ ಹೋಗಿದ್ದಾರೆ. ಇನ್ನು ಅಬ್ಬರಿಸಿ..ಬೊಬ್ಬಿರಿದು ರಾಜಾಹುಲಿಯಂತೆ ಹೊರಟರೆ.. ಪರಿಣಾಮ ಏನಾದೀತು.. ಸ್ವಂತ ಕ್ಷೇತ್ರವನ್ನು ಬಿಟ್ಟು ಹೊರಗೆ ಒಂದು ಕ್ಷೇತ್ರವನ್ನೂ ಗೆಲ್ಲಿಸಲು ಸಾಧ್ಯವಾಗದ.. ನಾಯಕರೆಲ್ಲ ರಾಜ್ಯ ಮಟ್ಟದ, ಪಕ್ಷವನ್ನು ತಳದಿಂದ ಕಟ್ಟಿ ಬೆಳೆಸಿದವರನ್ನು ಹಣಿಯುತ್ತೇವೆ ಎಂದು ಹೊರಟರೆ.. ಹೀಗೆಯೇ ಆಗುವುದು. ಆದರೆ ಈ ಎಲ್ಲದರಿಂದ ಹೊರಬರಲು ಬಿಜೆಪಿಗೆ ಸಾಧ್ಯವೂ ಇದೆ. ಮೀಡಿಯಾ ಟೈಗರ್`ಗಳನ್ನು ಪಕ್ಕಕ್ಕಿಟ್ಟು, ಸೋಷಿಯಲ್ ಮೀಡಿಯಾ ಹೋರಾಟಗಾರರನ್ನು ಸೈಡಿಗಿಟ್ಟು, ಪಕ್ಷದ ಕಾರ್ಯಕರ್ತರ ಜೊತೆ ನಿಲ್ಲುವ, ಹೋರಾಟ ನಡೆಸುವ ನಿಜವಾದ ನಾಯಕರನ್ನು ಗುರುತಿಸಿದರೆ ಬಿಜೆಪಿಗೆ ಈಗಲೂ ಅವಕಾಶ ಇದೆ.



