ಇಡೀ ರಾಜ್ಯದ ಗಮನ ಸೆಳೆದಿರುವ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಕ್ಯಾಂಡಿಡೇಟ್ ಯಾರು..? ಈ ಪ್ರಶ್ನೆಗೆ ಉತ್ತರ ಅಧಿಕೃತವಾಗಿ ಇನ್ನೂ ಸಿಕ್ಕಿಲ್ಲ. ಪಂಚರತ್ನ ಯಾತ್ರೆ 100 ದಿನ ಪೂರೈಸಿದ್ದರೂ ಹಾಸನ ಇನ್ನೂ ಸಸ್ಪೆನ್ಸ್. ಹೆಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದ ಸ್ವರೂಪ್ ಪ್ರಕಾಶ್ ಅವರೇ ಫೈನಲ್ ಆದರಾ ಎಂದರೆ.. ಆಗಿಲ್ಲ. ನಾನೂ ಆಕಾಂಕ್ಷಿ ನನಗೂ ಟಿಕೆಟ್ ಕೊಡಿ ಎಂದಿದ್ದ ಭವಾನಿ ರೇವಣ್ಣ ಫೈನಲ್ ಆದರಾ ಎಂದರೆ.. ಇನ್ನೂ ಅಧಿಕೃತವಾಗಿಲ್ಲ. ಇದ್ದಕ್ಕಿದ್ದಂತೆ ಕೇಳಿಬಂದ ಹೆಸರು ರಾಜೂಗೌಡ ಹೆಸರು ಆಯ್ಕೆ ಆಯ್ತಾ ಎಂದರೆ ಅದೂ ಅಲ್ಲ. ಆದರೆ.. ಇದ್ದಕ್ಕಿದ್ದಂತೆ ಭವಾನಿ ರೇವಣ್ಣ ಬೆಂಬಲಿಗರ ಆಕ್ಟಿವಿಟಿ ಕ್ಷೇತ್ರದಲ್ಲಿ ಜೋರಾಗಿದೆ.
ಕುಮಾರಸ್ವಾಮಿ ಬಹಿರಂಗವಾಗಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಎಂದಾಗ ಹಾಸನ ಒಂದು ರೀತಿಯಲ್ಲಿ ರಣರಂಗದ ಸ್ವರೂಪ ಪಡೆದಿತ್ತು. ಈ ಮಧ್ಯೆ ದೇವೇಗೌಡರು ಎಂಟ್ರಿಯಾಗುವವರೆಗೆ ಭವಾನಿ ರೇವಣ್ಣ ಮತ್ತು ಸ್ವರೂಪ್ ಪ್ರಕಾಶ್ ಇಬ್ಬರೂ ಆಕ್ಟಿವ್ ಆಗಿದ್ದರು. ಕೊನೆಗೆ ದೇವೇಗೌಡರು ಎಂಟ್ರಿ ಕೊಟ್ಟ ಮೇಲೆ ಭವಾನಿ ರೇವಣ್ಣ ಸೈಲೆಂಟ್ ಆದರು. ಆದರೆ ಅಭಿಮಾನಿಗಳು ಹಾಗೂ ಬೆಂಬಲಿಗರು ಸೈಲೆಂಟ್ ಆಗಿರಲಿಲ್ಲ.
ಈ ಮಧ್ಯೆ ಭವಾನಿ ರೇವಣ್ಣ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹಾಸನದಲ್ಲಿ ಓಡಾಡೋಕೆ ಶುರುವಾಗಿದೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಒಂದು ಪುಸ್ತಕವನ್ನೇ ಸಿದ್ಧ ಮಾಡಿರುವ ಜೆಡಿಎಸ್, ಅದನ್ನು ಬಿಡುಗಡೆಯನ್ನೂ ಮಾಡಿದೆ. ಖುದ್ದು ಹೆಚ್.ಡಿ.ರೇವಣ್ಣನವರೇ ಬುಕ್ ರಿಲೀಸ್ ಮಾಡಿದ್ದಾರೆ. ಆ ಪುಸ್ತಕದಲ್ಲಿ ಹಾಸನ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿ ಗಳ ಫೋಟೊ ಸಾಲಿನಲ್ಲಿ ಭವಾನಿ ಫೋಟೊ ಪ್ರತ್ಯಕ್ಷವಾಗಿದ್ದು, ಕುತೂಹಲ ಮೂಡಿಸಿದೆ. ಜಿಲ್ಲಾ ಜೆಡಿಎಸ್ ನಿಂದ ಬಿಡುಗಡೆ ಮಾಡಲಾದ ಪಕ್ಷದಿಂದ ಆಗಿರೋ ಅಭಿವೃದ್ಧಿ ಕಾರ್ಯ ಹಳ ಮಾಹಿತಿ ಪುಸ್ತಕದಲ್ಲಿ ಭವಾನಿ ಫೋಟೊ ಬಳಕೆಯಾಗಿರುವುದೇ ಕುತೂಹಲದ ಮೂಲ. ಹಾಗಾದರೆ ಹಾಸನಕ್ಕೆ ಭವಾನಿ ರೇವಣ್ಣ ಹೆಸರು ಫೈನಲ್ ಆಯ್ತಾ ಎಂದರೆ.. ರೇವಣ್ಣ ಎಂದಿನಂತೆ ಹ್ಞೂಂ ಅನ್ನಲ್ಲ. ಊಹ್ಞೂಂ ಅನ್ನಲ್ಲ.
ಎಲ್ಲ ಕೂತು ಅಭ್ಯರ್ಥಿ ಫೈನಲ್ ಮಾಡ್ತೀವಿ. ಅರಸೀಕೆರೆಗೆ ಅಶೋಕ್ ಹೆಸರು ಆಗಿದೆ. ಅದಕ್ಕೆ ಅವರ ಫೋಟೋ ಹಾಕಿದ್ದೇವೆ. ಅರಕಲಗೂಡಿಗೆ ಎ.ಮಂಜು ಹೆಸರನ್ನು ಕುಮಾರಣ್ಣ ಘೋಷಣೆ ಮಾಡಿದ್ದಾರೆ. ಅದಕ್ಕೆ ಅವರ ಫೋಟೋ ಹಾಕಿದ್ದೇವೆ. ಭವಾನಿಯವರು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೇ ನಂಬರ್ ಒನ್ ಮಾಡಿದ್ರು. ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನ ಕಂಟ್ರೋಲ್ ಮಾಡಿದ್ರು. ಹೀಗಾಗಿ ಅವರ ಫೋಟೋ ಹಾಕಿದ್ದೇವೆ ಎಂದು ಸಮುಜಾಯಿಷಿ ಕೊಟ್ಟರು.
ಒಟ್ಟಿನಲ್ಲಿ ಭವಾನಿ ಹಿಂದೆ ರೇವಣ್ಣ, ಪ್ರಜ್ವಲ್, ಸೂರಜ್ ಪಡೆ ಇದ್ದರೆ, ಸ್ವರೂಪ್ ಹಿಂದೆ ಕುಮಾರಸ್ವಾಮಿಯೇ ಇದ್ದಾರೆ. ರಾಜೂಗೌಡರ ಹೆಸರು ಆಕಸ್ಮಿಕವಾಗಿ ದೇವೇಗೌಡರು ತೇಲಿಬಿಟ್ಟಿರುವ ದಾಳ ಎನ್ನಬಹುದು. ಆದರೆ ಇದ್ದಕ್ಕಿದ್ದಂತೆ ಭವಾನಿ ರೇವಣ್ಣ ಫೋಟೋ ಜೆಡಿಎಸ್ ಪುಸ್ತಕದಲ್ಲಿ ಬಂದಿದ್ದು, ಅದೂ ಅಭ್ಯರ್ಥಿಗಳ ಫೋಟೋ ಜೊತೆಯಲ್ಲೇ ಇದ್ದದ್ದು ಆಕಸ್ಮಿಕವಂತೂ ಅಲ್ಲ. ಅದರ ಹಿಂದಿನ ಸಂದೇಶ ಕೆಲವರಿಗೆ ತಲುಪಿದೆ. ತಲುಪಬೇಕಾದವರಿಗೇ ತಲುಪಿದೆ.



