ಎಸ್.ಎಲ್.ಬೈರಪ್ಪ. ಕನ್ನಡ ಸಾಹಿತ್ಯ ಲೋಕದ ದೊಡ್ಡ ಹೆಸರು. ಆಳವಾದ ಅಧ್ಯಯನ ಬೈರಪ್ಪನವರ ಶಕ್ತಿಯೂ ಹೌದು. ಅಂತಹ ಬೈರಪ್ಪನವರಿಗೀಗ ಪದ್ಮಭೂಷಣ ಪುರಸ್ಕಾರ ಸಿಕ್ಕಿದೆ. 2016ರಲ್ಲಿ ಬೈರಪ್ಪನವರಿಗೆ ಪದ್ಮಶ್ರೀ ಗೌರವ ಸಿಕ್ಕಿತ್ತು. 6 ವರ್ಷಗಳ ನಂತರ ಪದ್ಮಭೂಷಣ ಗೌರವ ಒಲಿದುಬಂದಿದೆ. 91 ವರ್ಷದ ಬೈರಪ್ಪ ಅವರ ಕೃತಿಯೊಂದು ಪ್ರಕಟವಾದರೆ ಇವತ್ತಿಗೂ ಓದುಗರು ಮುಗಿಬಿದ್ದು ಖರೀದಿಸುತ್ತಾರೆ. ಆದರೆ ಸದ್ಯಕ್ಕೆ ಬೈರಪ್ಪ ಬರವಣಿಗೆಯಿಂದ ಮುಕ್ತವಾಗಿದ್ದಾರೆ. ವಯಸ್ಸು ಸಹಕರಿಸುತ್ತಿಲ್ಲ.


ಹಾಸನದ ಸಂತೇಶಿವರ ಗ್ರಾಮದ ಬೈರಪ್ಪ ಈಗ ವಾಸವಿರೋದು ಮೈಸೂರಿನಲ್ಲಿ. ವೃತ್ತಿಯಲ್ಲಿ ಪ್ರೊಫೆಸರ್ ಆಗಿದ್ದ ಬೈರಪ್ಪನವರಿಗೆ ಸಾಹಿತ್ಯ ಲೋಕದ ಹುಚ್ಚು ಹಿಡಿಸಿದ್ದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕಥೆಗಳು. ಎಡಪಂಥದವರು ದ್ವೇಷಿಸುವ, ಬಲಪಂಥದವರು ಆರಾಧಿಸುವ ಈ ಸಾಹಿತಿ ಸರಸ್ವತಿ ಸಮ್ಮಾನ್ ಪುರಸ್ಕøತರೂ ಹೌದು. ಎಡಪಂಥದವರನ್ನು ವಿರೋಧಿಸುವ ಕಾರಣಕ್ಕಾಗಿಯೇ ಬೈರಪ್ಪನವರಿಗೆ ಜ್ಞಾನಪೀಠ ಸಿಕ್ಕಿಲ್ಲ ಎಂಬ ಆರೋಪದಲ್ಲಿ ಸುಳ್ಳಿಲ್ಲದೆ ಇಲ್ಲ.


ಪರ್ವ ಬೈರಪ್ಪನವರ ಜೀವನಶ್ರೇಷ್ಟ ಕೃತಿಯೂ ಹೌದು. ಅದೊಂದು ಕೃತಿಗಾಗಿ 18 ವರ್ಷಗಳ ಕಾಲ ಸಂಶೋಧನೆ ಮಾಡಿದ್ದ ಬೈರಪ್ಪ, ಪರ್ವ ಕೃತಿಯಲ್ಲಿ ಮಹಾಭಾರತವನ್ನು ಸರಳೀಕರಣಗೊಳಿಸಿದ್ದಾರೆ. ಬೈರಪ್ಪನವರ ಪರ್ವದಲ್ಲಿ ಶ್ರೀಕೃಷ್ಣ ದೇವರಲ್ಲ. ಅಷ್ಟೇ ಅಲ್ಲ, ವಾಸ್ತವದ ನೆಲೆಗಟ್ಟಿನಲ್ಲಿ ಇಡೀ ಭಾರತವನ್ನು ಸುತ್ತಾಡಿ ಸಿದ್ಧಪಡಿಸಿರುವ ಕೃತಿ ಪರ್ವ. ಗೃಹಭಂಗ ಒಂದು ರೀತಿಯಲ್ಲಿ ಇವರ ಬಯೋಗ್ರಫಿಯೇ ಆದರೂ ಅಧಿಕೃತ ಜೀವನಚರಿತ್ರೆ ಭಿತ್ತಿ. ಇವರ ಕೆಲವು ಕೃತಿಗಳು ದೇಶದ ಎಲ್ಲ ಭಾಷೆಗಳಲ್ಲಿ ಅನುವಾದಗೊಂಡಿವೆ ಎನ್ನುವುದು ವಿಶೇಷ.
ದಾಟು, ಮಂದ್ರ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಗ್ರಹಣ, ಆವರಣ, ಮತದಾನ, ನಾಯಿನೆರಳು, ಗೃಹಭಂಗ, ಸಾಕ್ಷಿ, ತಂತು, ಸಾರ್ಥ, ಕವಲು, ಉತ್ತರಕಾಂಡ, ಧರ್ಮಶ್ರೀ, ದೂರ ಸರಿದರು, ನಿರಾಕರಣ, ಅನ್ವೇಷಣ, ನೆಲೆ.. ಹೀಗೆ ಅವರ ಪ್ರತಿಯೊಂದು ಕೃತಿಗಳೂ ಹಲವು ಮುದ್ರಣ ಕಂಡಿವೆ. ಕನ್ನಡದಲ್ಲಷ್ಟೇ ಅಲ್ಲ, ಇಂಗ್ಲಿಷ್, ಮರಾಠಿ, ಸಂಸ್ಕøತ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಸಿನಿಮಾಗಳೂ ಆಗಿವೆ.
ಆವರಣ ಕೃತಿ ಎಡಪಂಥೀಯ ಲೇಖಕರಲ್ಲಿ ತಲ್ಲಣ ಸೃಷ್ಟಿಸಿತ್ತು. ಹಂಪಿ, ಕಾಶಿಯ ಇತಿಹಾಸವನ್ನು ಸಾಕ್ಷಿ ಸಮೇತ ಒಂದು ಕಾದಂಬರಿಯಲ್ಲಿ ಎತ್ತಿತೋರಿಸಿದ್ದರು. ದಾಖಲೆಗಳ ಸಮೇತ. ಇವರ ಕೆಲವು ಕೃತಿಗಳು ಎರಡೂ ಕಡೆಯ ಮೂಲಭೂತವಾದಿಗಳನ್ನು ಕೆಣಕಿದೆ. ಅದರ ಅರ್ಥ ಬೈರಪ್ಪ ಸರಿಯಾಗಿದ್ದಾರೆ, ಎಂದಷ್ಟೆ.


ಬೈರಪ್ಪನವರ 4 ಕಾದಂಬರಿಗಳು ಸಿನಿಮಾಗಳಾಗಿವೆ. 1972ರಲ್ಲಿ ವಂಶವೃಕ್ಷ, 1977ರಲ್ಲಿ ತಬ್ಬಲಿಯೂ ನೀನಾದೆ ಮಗನೆ ಚಿತ್ರಗಳು ಬಿಡಗಡೆಯಾಗಿದ್ದವು. ಎರಡೂ ಚಿತ್ರಗಳಿಗೆ ನಿರ್ದೇಶಕರಾಗಿದ್ದವರು ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ್. ವಿಷ್ಣುವರ್ಧನ್ ಒಬ್ಬ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು ವಂಶವೃಕ್ಷ ಚಿತ್ರದಲ್ಲಿಯೇ. ಅದಾದ ನಂತರ 2001ರಲ್ಲಿ ಮತದಾನ ಚಿತ್ರ ತೆರೆಗೆ ಬಂದಿತ್ತು. ನಿರ್ದೇಶನ ಮಾಡಿದ್ದವರು ಟಿ.ಎನ್.ಸೀತಾರಾಂ. ಅದಾದ ಮೇಲೆ ನಾಯಿನೆರಳು ಚಿತ್ರವನ್ನು ನಿರ್ದೇಶಕ ಗಿರೀಶ್ ಕಾರ್ನಾಡ್2006ರಲ್ಲಿ ತೆರೆಗೆ ತಂದಿದ್ದರು.
ಅಷ್ಟೇ ಅಲ್ಲದೆ ಗೃಹಭಂಗ ಕನ್ನಡದಲ್ಲಿ ಹಾಗೂ ದಾಟು ಹಿಂದಿಯಲ್ಲಿ ಧಾರಾವಾಹಿಗಳಾಗಿ ಯಶಸ್ಸು ಕಂಡಿವೆ. ಇನ್ನೂ ಹಲವು ಕಾದಂಬರಿಗಳನ್ನು ಸಿನಿಮಾ ಮಾಡುವ ಕನಸು ಹೊತ್ತಿದ್ದವರಿಗೆ ಬೈರಪ್ಪ ಅನುಮತಿ ನೀಡಿಲ್ಲ.
ಬೈರಪ್ಪನವರಿಗೆ ಜ್ಞಾನಪೀಠ ಸಿಕ್ಕಿಲ್ಲದೇ ಇರಬಹುದು, ಕರ್ನಾಟಕದ 4 ವಿಶ್ವವಿದ್ಯಾಲಯಗಳು ಬೈರಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಿ ಸ್ವತಃ ಗೌರವಿಸಿಕೊಂಡಿವೆ. ಕರ್ನಾಟಕ ಸಾಹಿತ್ಯ ಪರಿಷತ್ ಹಾಗೂ ಬಿಎಂಟಿಸಿ ಜಂಟಿಯಾಗಿ ನೀಡುವ ನೃಪತುಂಗ ಪ್ರಶಸ್ತಿ, ತೆಲುಗು ವಿಜ್ಞಾನ ಸಮಿತಿಯ ಶ್ರೀಕೃಷ್ಣದೇವರಾಯ ಪ್ರಶಸ್ತಿ, ಬೆಟಗೇರಿ ಕೃಷ್ಣ ಶರ್ಮ ಪ್ರಶಸ್ತಿ, ಎನ್‍ಟಿಆರ್ ಸಾಹಿತ್ಯ ಪ್ರಶಸ್ತಿ, ಸರಸ್ವತಿ ಸಮ್ಮಾನ್ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.
1999ರಲ್ಲಿ ಕನಕಪುರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಬೈರಪ್ಪನವರು 3 ದಶಕಗಳಿಂದಲೂ ಕನ್ನಡದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕೃತಿಗಳ ಲೇಖಕರು ಬೆಸ್ಟ್ ಸೆಲ್ಲರ್ ಸಾಹಿತಿ.



