ಡೀಸೆಲ್ ಕಾರು, ಜೀಪುಗಳು ಇರುವುದಿಲ್ಲವಾ..? ಅವುಗಳನ್ನು ಬ್ಯಾನ್ ಮಾಡಲಾಗುತ್ತಾ..? ಏಕೆ..? ಡೀಸೆಲ್ ಲಾರಿ, ಟೆಂಪೋಗಳೂ ಇರುವುದಿಲ್ಲವಾ..? ನಿಷೇಧ ಮಾಡ್ತಿರೋದು ಯಾಕೆ..? ಹೀಗೆ ಹಲವು ಪ್ರಶ್ನೆಗಳು ಮೂಡುತ್ತಿವೆ. ಅದಕ್ಕೆಲ್ಲ ಕಾರಣ ಒಂದು ರಿಪೋರ್ಟ್. 2027ರ ವೇಳೆಗೆ ದೇಶದ 10 ಲಕ್ಷ ಜನಸಂಖ್ಯೆಗಿಂತ ಹೆಚ್ಚಿನ ಬೃಹತ್ ಮತ್ತು ಹೆಚ್ಚು ಮಾಲಿನ್ಯಕಾರಕ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನ ಬಳಕೆಯನ್ನು ನಿಷೇಧಿಸಬೇಕು. ಕೇವಲ ಎಲೆಕ್ಟ್ರಿಕ್ ಮತ್ತು ಅನಿಲ ಇಂಧನ ಆಧರಿತ ವಾಹನಗಳ ಬಳಕೆಗೆ ಅನುಮತಿ ನೀಡಬೇಕು’ ಎಂದು ಉನ್ನತ ಮಟ್ಟದ ಸಮಿತಿಯೊಂದು ಪೆಟ್ರೋಲಿಯಂ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ವಿವಿಧ ಹಂತಗಳಲ್ಲಿ ಹೇಗೆ ಡೀಸೆಲ್ ಮತ್ತು ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಬಹುದು ಎಂಬ ಬಗ್ಗೆ ಇಂಧನ ಇಲಾಖೆಯ ಮಾರ್ಜಿ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ‘ಇಂಧನ ಪರಿವರ್ತನೆ ಸಲಹಾ ಸಮಿತಿ’ಯು ಪೆಟ್ರೋಲಿಯಂ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.
ವರದಿಯ ಪ್ರಕಾರ..
• 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಮತ್ತು ಹೆಚ್ಚು ಮಾಲಿನ್ಯ ಹೊಂದಿದ ನಗರಗಳಲ್ಲಿ 2027ರ ವೇಳೆಗೆ ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನ ಬಳಕೆ ನಿಷೇಧಿಸಬೇಕು.
• 2024ರ ಬಳಿಕ ಕೇವಲ ಎಲೆಕ್ಟ್ರಿಕ್ ‘ಸಿಟಿ ಡೆಲಿವರಿ ವಾಹನ’ಗಳ ನೋಂದಣಿ ಮಾಡಬೇಕು. ಸರಕು ಸಾಗಣೆಗೆ ರೈಲ್ವೆ ಸೇವೆ ಮತ್ತು ಗ್ಯಾಸ್ ಚಾಲಿತ ಟ್ರಕ್ಗಳ ಸೇವೆಯನ್ನು ಹೆಚ್ಚಾಗಿ ಬಳಸಬೇಕು.
• ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಫೇಮ್ ಯೋಜನೆಯಡಿ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಇನ್ನಷ್ಟು ಅವಧಿಗೆ ವಿಸ್ತರಿಸಬೇಕು.
• ಮುಂಬರುವ ದಿನಗಳಲ್ಲಿ ಅನಿಲಕ್ಕೆ ಬೇಡಿಕೆ ಹೆಚ್ಚುವ ಕಾರಣ, ಕನಿಷ್ಠ 2 ತಿಂಗಳ ಬೇಡಿಕೆ ಪೂರೈಸುವಷ್ಟು ಪ್ರಮಾಣದ ಅನಿಲವನ್ನು ಸಂಗ್ರಹಿಸುವ ಭೂಗತ ಅನಿಲ ಸಂಗ್ರಹಾಗಾರ ಸ್ಥಾಪಿಸಬೇಕು.
• 2024ರ ಬಳಿಕ ಯಾವುದೇ ಹೊಸ ಡೀಸೆಲ್ ಚಾಲಿತ ಬಸ್ಗಳನ್ನು ಖರೀದಿಸಿ ಬಳಕೆ ಮಾಡಬಾರದು. 2030ರ ವೇಳೆಗೆ ಎಲೆಕ್ಟ್ರಿಕ್ ಹೊರತುಪಡಿಸಿದ ಇತರೆ ಯಾವುದೇ ಇಂಧನ ಬಳಸಿದ ಬಸ್ಗಳನ್ನು ನಗರ ಸಾರಿಗೆ ವ್ಯವಸ್ಥೆಗೆ ಸೇರ್ಪಡೆ ಮಾಡಬಾರದು.
ಈ ಎಲ್ಲ ವರದಿಗಳ ಗುರಿ ಒಂದೇ. ಸದ್ಯ ದೇಶದಲ್ಲಿ ಬಳಕೆಯಾಗುತ್ತಿರುವ ಸಂಸ್ಕೃರಿತ ಇಂಧನದ ಪೈಕಿ ಶೇ.20ರಷ್ಟು ಡೀಸೆಲ್ನ ಪಾಲಿದೆ. ಇದರಲ್ಲಿ ಶೇ.80ರಷ್ಟು ಪಾಲು ಸಾರಿಗೆ ವಲಯಕ್ಕೆ ಸೇರಿದೆ. ಹೀಗಾಗಿ ಈ ವಲಯದಲ್ಲಿನ ಬಳಕೆ ಕಡಿತವು ಒಟ್ಟಾರೆ ಪರಿಸರ ಮಾಲಿನ್ಯ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಆ ಮೂಲಕ ಶೂನ್ಯ ಇಂಗಾಲ ಬಿಡುಗಡೆ ಗುರಿ ತಲುಪುವುದು ವರದಿಯ ಉದ್ದೇಶ. ಈ ಉದ್ದೇಶ ಜಾರಿಗೆ ಬಂದರೆ ಡೀಸೆಲ್ ಕಾರು, ಜೀಪುಗಳು ಮೊದಲಿಗೆ ನಿಷೇಧವಾದರೂ ಆಗಬಹುದು ಎಂಬ ಚಿಂತನೆಯಿದೆ.



