ಚುನಾವಣೆ ಹತ್ತಿರವಾಗುತ್ತಿದ್ದಂತೆ ರಂಗೇರುತ್ತಿರುವ ಚುನಾವಣಾ ಅಖಾಡದಲ್ಲಿ ಮಂಡ್ಯ ಮತ್ತೊಮ್ಮೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗುತ್ತಾ..? 2019ರಲ್ಲಿ ಮಂಡ್ಯ ಯಾವ ಪರಿ ರಂಗೇರಿತ್ತೆಂದರೆ ಲೋಕಸಭೆ ಚುನಾವಣೆ ನಡೆಯುತ್ತಿರುವುದು 28 ಕ್ಷೇತ್ರಗಳಿಗೋ.. ಕೇವಲ ಮಂಡ್ಯಕ್ಕೋ ಎಂದು ಜನ ಮಾತನಾಡಿಕೊಳ್ಳುವಂತಾಗಿತ್ತು. ಸುಮಲತಾ ಅಂಬರೀಷ್ ಸ್ಪರ್ಧೆ ಹಾಗೂ ಜೆಡಿಎಸ್ ನಾಯಕರು ಕೊಟ್ಟ ಎಡವಟ್ಟು ಹೇಳಿಕೆಗಳು ರೋಚಕತೆ ಒದಗಿಸಿದ್ದವು. ಜೆಡಿಎಸ್ ಶಕ್ತಿಶಾಲಿಯಾಗಿದ್ದರೂ ಸ್ವಯಂಕೃತಾಪರಾಧದಿಂದಾಗಿ ಸೋತಿತ್ತು. ಸುಮಲತಾ ಸ್ವಾಭಿಮಾನ ಗೆದ್ದಿತ್ತು.
ಈ ಬಾರಿಯೂ ಆ ರೋಚಕತೆ ಸಿಗಲಿದೆಯಾ..?
ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡ್ತಿರೋ ಕುಮಾರಸ್ವಾಮಿ, ಅದಕ್ಕೂ ಮುನ್ನ ರಾಮನಗರಕ್ಕೆ ಹೋಗಿ ಮಗ ನಿಖಿಲ್ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾಗಿದ್ದಾರೆ. ಮಗನ ನಾಮಪತ್ರ ಸಲ್ಲಿಕೆ ಮುಗಿದ ತಕ್ಷಣ ಚನ್ನಪಟ್ಟಣಕ್ಕೆ ಬಂದು ನಾಮಪತ್ರ ಸಲ್ಲಿಸಿದ್ದಾರೆ. ರಾಮನಗರ ಜನತೆಗೆ ಕ್ಷೇತ್ರ ಬಿಟ್ಟಿದ್ದಕ್ಕೆ ಕ್ಷಮೆ ಕೇಳಿರುವ ಕುಮಾರಸ್ವಾಮಿ, ಮಗ ನಿಖಿಲ್‍ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ನಾನು ಚನ್ನಪಟ್ಟಣದಲ್ಲಿ ಮಾತ್ರ ನಿಲ್ಲುತ್ತಿದ್ದೇನೆ. ಮಂಡ್ಯಕ್ಕೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣ ಜೊತೆ ಮಂಡ್ಯದಲ್ಲೂ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿ ಜೋರಾಗಿ ಹಬ್ಬಿದ್ದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಆದರೆ ಅತ್ತ ಸುಮಲತಾ ಅಂಬರೀಷ್ ಹೇಳಿರುವುದೇ ಬೇರೆ. ವರಿಷ್ಠರು ಸೂಚಿಸಿದರೆ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವದಂತಿ ಇದೆ. ಪಕ್ಷ ಸೂಚನೆ ನೀಡಿದರೆ ನನ್ನ ಸ್ಪರ್ಧೆ ಇರಲಿದೆ. ಈವರೆಗೆ ಪಕ್ಷ ನನಗೆ ಯಾವುದೇ ಸೂಚನೆಯನ್ನು ನೀಡಿಲ್ಲ. ಮಂಡ್ಯ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಮರ್ಥರಿದ್ದಾರೆ ಎಂದಿದ್ದಾರೆ. ಈ ಎರಡೂ ಹೇಳಿಕೆಗಳು ಏಕಕಾಲದಲ್ಲಿ ಬಂದಿರುವುದು ಕಾಕತಾಳೀಯ. ಅಥವಾ ಕಾಕತಾಳೀಯ ಅಲ್ಲ.
ಸುಮಲತಾ ಅಂಬರೀಷ್ ಈ ಬಾರಿ ಮಂಡ್ಯದಲ್ಲಿ ಬಿಜೆಪಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಲೋಕಸಭೆ ಎಲೆಕ್ಷನ್ ವೇಳೆ ಸುಮಲತಾ ಜೊತೆಗಿದ್ದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದ್ದು, ಮೇಲುಕೋಟೆಯಲ್ಲಿ ಕ್ಯಾಂಡಿಡೇಟ್ ಹಾಕಿಲ್ಲ. ಆದರೆ ಸುಮಲತಾ ಅಂಬರೀಷ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಬೇಕೋ ಬೇಡವೋ ಎಂಬ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ.



