ಭವಾನಿಗೆ ಟಿಕೆಟ್ ಕೊಡುವುದಿಲ್ಲ. ನೀಡುತ್ತಿಲ್ಲ. ನಾನು ಮೊದಲು ಏನು ಹೇಳಿದ್ದೇನೆಯೋ.. ಅದಕ್ಕೆ ಈಗಲೂ ಬದ್ಧ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುತ್ತೇವೆ. ಈ ಕುರಿತಂತೆ ಬೆದರಿಕೆ ಹಾಕುವವರಿಗೆ ತಲೆ ಬಾಗುವುದಿಲ್ಲ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದು ಒಂದು ವರ್ಷದಿಂದ ಏನು ಹೇಳಿದ್ದೇನೆಯೋ ಈಗಲೂ ಅದೇ ನನ್ನ ನಿಲುವು. ಬೆದರಿಕೆ ಹಾಕುವವರಿಗೆಲ್ಲ ತಲೆ ಬಾಗುವುದಿಲ್ಲ. ನನಗೆ ಪಕ್ಷ ಮುಖ್ಯ ಎಂದು ಹೇಳಿರೋ ಕುಮಾರಸ್ವಾಮಿ ಬ್ಲಾಕ್ ಮೇಲ್ ಮಾಡುತ್ತಿರೋದು ಯಾರು ಅನ್ನೋದನ್ನೂ ಶೀಘ್ರದಲ್ಲೇ ಹೇಳ್ತಾರಂತೆ.
123 ಸ್ಥಾನ ಗೆಲ್ಲಬೇಕು, ಅದೇ ನಮ್ಮ ಗುರಿ. ಜನ ಮತ್ತು ಕಾರ್ಯಕರ್ತರಿಗೆ ವಿಶ್ವಾಸ ಮೂಡಿಸಬೇಕಾಗಿದೆ. ಇದರಲ್ಲಿ ಯಾವುದೇ ರಾಜಿಗೊಳಗಾಗುವ ಪ್ರಶ್ನೆಯೇ ಇಲ್ಲ. ಬೆದರಿಕೆ ತಂತ್ರವನ್ನು ಯಾರ ಬಳಿಯಾದರೂ ನಡೆಸಿಕೊಳ್ಳಲಿ, ನನ್ನ ಹತ್ತಿರ ನಡೆಸಲು ಬಂದರೆ ನಾನು ಬಗ್ಗುವುದಿಲ್ಲ. ಬ್ಲಾಕ್ಮೇಲ್ ಮಾಡುವವರು ಯಾರು ಎಂಬುದನ್ನು ಶೀಘ್ರದಲ್ಲಿಯೇ ಹೇಳುತ್ತೇನೆ ಎಂದಿದ್ದಾರೆ ಕುಮಾರಸ್ವಾಮಿ.


ರೇವಣ್ಣ ರಿಯಾಕ್ಷನ್ ಏನು..?
ನಾನು ಹಾಸನ ಜಿಲ್ಲೆಯಲ್ಲಿ 25 ವರ್ಷದಿಂದ ಕೆಲಸ ಮಾಡಿದ್ದೇನೆ. ಜಿಲ್ಲೆಯ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ ಎನ್ನುವ ಮೂಲಕ ಇಲ್ಲಿನ ರಾಜಕೀಯ ವಿಚಾರದಲ್ಲಿ ಇನ್ನೊಬ್ಬರಿಂದ ಪಾಠ ಬೇಡ . ಈ ವಿಚಾರದಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲ. ನಾನು ಹೆದರಿಕೊಂಡು ಓಡಿ ಹೋಗುವವನೂ ಅಲ್ಲ. ಟಿಕೆಟ್ ವಿಚಾರವಾಗಿ ನಾನು ಮುಖಂಡರ ಬಳಿ ಕೂರುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆ ನೇರವಾಗಿ ತಮ್ಮ ತಮ್ಮನಿಗೇ ಎನ್ನುವುದು ರಾಜಕೀಯ ವಿಶ್ಲೇಷಕರು ಹೇಳುತ್ತಿರೋ ಬಹಿರಂಗ ಸೀಕ್ರೆಟ್.


ಕಳೆದ ಬಾರಿಯೇ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಉತ್ಸುಕರಾಗಿದ್ದರು ಭವಾನಿ ರೇವಣ್ಣ. ಆದರೆ ನಮ್ಮ ಕುಟುಂಬದಿಂದ ನಾನು ಮತ್ತು ರೇವಣ್ಣ ಇಬ್ಬರೇ ಎಂದು ಶುರುವಾತಿನಲ್ಲೇ ಘೋಷಿಸಿದ್ದ ಕಾರಣ, ಭವಾನಿ ರೇವಣ್ಣ ಸುಮ್ಮನಾಗಿದ್ದರು. ಆದರೆ ಅದಾದ ನಂತರ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕಡೆ ನಿಂತು ಗೆದ್ದ ಕುಮಾರಸ್ವಾಮಿ, ರಾಮನಗರವನ್ನು ಪತ್ನಿ ಅನಿತಾ ಕುಮಾರಸ್ವಾಮಿಗೆ ಬಿಟ್ಟು ಕೊಟ್ಟಿದ್ದರು. ಅಲ್ಲಿಗೆ ತಮ್ಮ ಕುಟುಂಬದಿಂದ ನಾವಿಬ್ಬರೇ ಎಂಬ ಮಾತನ್ನು ಸ್ವತಃ ಮುರಿದಿದ್ದರು. ಅತ್ತ ಲೋಕಸಭೆ ಚುನಾವಣೆ ಬಂದಾಗ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಸಿ ಗೆದ್ದರು. ದೇವೇಗೌಡ ಮತ್ತು ಮಗ ನಿಖಿಲ್ ಕುಮಾರಸ್ವಾಮಿ ಸೋತರು. ಅಷ್ಟಕ್ಕೇ ಮುಗಿಯಲಿಲ್ಲ. ಅದಾದ ಮೇಲೆ ಸೂರಜ್ ರೇವಣ್ಣ ವಿಧಾನ ಪರಿಷತ್`ಗೆ ಆಯ್ಕೆಯಾದರು. ಆಗ ಕುಮಾರಸ್ವಾಮಿ ಸೂರಜ್ ರೇವಣ್ಣ ಪರ ಪ್ರಚಾರದಿಂದ ಅಂತರ ಕಾಯ್ದುಕೊಂಡರು. ಈಗ ನಿಖಿಲ್ ಕುಮಾರಸ್ವಾಮಿ ಅವರನ್ನು ರಾಮನಗರಕ್ಕೆ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅದು ಅನಿತಾ ಕುಮಾರಸ್ವಾಮಿ ಸ್ಥಾನಕೆಕ ರೀಪ್ಲೇಸ್ ಅಷ್ಟೆ. ಹೀಗಾಗಿ ಈಗ ಭವಾನಿ ರೇವಣ್ಣ ಕೂಡಾ ಟಿಕೆಟ್‍ಗಾಗಿ ಬಹಿರಂಗ ಹೋರಾಟಕ್ಕಿಳಿದಿದ್ದಾರೆ. ಆದರೆ ಒಂದಂತೂ ನಿಜ. ದೇವೇಗೌಡರ ಕುಟುಂಬದ ಒಗ್ಗಟ್ಟಿನಲ್ಲಿ ಬಿರುಕಂತೂ ಮೂಡಿದೆ.



