ಎಲ್ಲರೂ ಮಾತನಾಡುತ್ತಿರುವುದು ಲಿಂಗಾಯತರ ಬಗ್ಗೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಕಾಂಗ್ರೆಸ್ಸಿಗೆ ಬಂದರೆ ಎಷ್ಟು ಲಿಂಗಾಯತ ಮತಗಳು ಕಾಂಗ್ರೆಸ್ಸಿಗೆ ಬಿಜೆಪಿಯಿಂದ ಶಿಫ್ಟ್ ಆಗುತ್ತವೆ. ಎಷ್ಟು ವೋಟುಗಳನ್ನು ಪಡೆದುಕೊಂಡರೆ ಎಷ್ಟು ಕ್ಷೇತ್ರಗಳನ್ನು ಗೆಲ್ಲಬಹುದು? ಎಷ್ಟು ಕ್ಷೇತ್ರಗಳನ್ನು ಗೆದ್ದರೆ, ಯಡಿಯೂರಪ್ಪ ಅವರ ತೆಕ್ಕೆಯಲ್ಲಿರುವ ಲಿಂಗಾಯತರನ್ನು ಕಾಂಗ್ರೆಸ್ಸಿನ ತೆಕ್ಕೆಗೆ ಸೆಳೆದುಕೊಳ್ಳಬಹುದು.. ಶೆಟ್ಟರ್, ಸವದಿಯವರನ್ನು ಮುಂದಿಟ್ಟುಕೊಂಡು ಹೊರಟರೆ, ಬಿಜೆಪಿ ಶಕ್ತಿಶಾಲಿಯಾಗಿರುವ ಮಧ್ಯ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದಲ್ಲಿ ಎಷ್ಟು ಮಟ್ಟದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದ ಮಧ್ಯೆ ಕಾಂಗ್ರೆಸ್ಸಿಗರು ಮರೆತೇ ಹೋಗಿರುವುದು ಒಬ್ಬ ದಲಿತ ಶಾಸಕನನ್ನು.
ಅಖಂಡ ಶ್ರೀನಿವಾಸ ಮೂರ್ತಿ. ಪುಲಿಕೇಶಿ ನಗರದ ಶಾಸಕ. ಈಗ ರಾಜೀನಾಮೆ ನೀಡಿದ್ದಾರೆ ಬಿಡಿ. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸಿಎಂ ಆಗಿದ್ದ ಸಿದ್ದರಾಮಯ್ಯ, ತಮ್ಮ ಪ್ರಭಾವ ಬಳಸಿ ಕಾಂಗ್ರೆಸ್ಸಿಗೆ ಸೆಳೆದುಕೊಂಡ ಜೆಡಿಎಸ್ ಶಾಸಕರಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಕೂಡಾ ಒಬ್ಬರು. 2018ರಲ್ಲಿ ಜೆಡಿಎಸ್‍ನಿಂದ ಕಾಂಗ್ರೆಸ್ಸಿಗೆ ಬಂದು ಇಲ್ಲಿ ಗೆದ್ದ ಇಬ್ಬರಲ್ಲಿ ಒಬ್ಬರು ಅಖಂಡ ಶ್ರೀನಿವಾಸ ಮೂರ್ತಿ. ಈ ಶ್ರೀನಿವಾಸ ಮೂರ್ತಿ ಒಂದು ಲೆಕ್ಕಾಚಾರದಲ್ಲಿ ನಂ.1 ಶಾಸಕ. ಏಕೆಂದರೆ 2018ರಲ್ಲಿ ಬಿಜೆಪಿ ದೊಡ್ಡ ಪಕ್ಷವಾಯಿತೇನೋ ನಿಜ. ಆದರೆ ಬಿಜೆಪಿಯ ಯಡಿಯೂರಪ್ಪ ಆಗಲೀ, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಆಗಲೀ, ಡಿಕೆ ಶಿವಕುಮಾರ್ ಆಗಲೀ.. ಯಾರೂ ಕೂಡಾ ಗೆಲ್ಲಲಾಗದಷ್ಟು ಅತ್ಯಧಿಕ ಮತಗಳ ಅಂತರದೊಂದಿಗೆ ಗೆದ್ದಿದ್ದವರು ಅಖಂಡ ಶ್ರೀನಿವಾಸ ಮೂರ್ತಿ. ಆದರೆ ಕಾಲ ಬದಲಾಯ್ತು. ಅವತ್ತು ಹೆಮ್ಮೆಯಿಂದ ಬೀಗುತ್ತಿದ್ದವರೇ ಈಗ ಕಣ್ಣೀರಿಡುವ ಮಟ್ಟಕ್ಕೆ ಬಂದಿದೆ. ಯಾವೊಬ್ಬ ದಲಿತ ನಾಯಕರೂ ಈ ಬಗ್ಗೆ ಮಾತನಾಡುತ್ತಿಲ್ಲ ಎನ್ನುವುದೇ ವಿಚಿತ್ರ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ದಲಿತರು. ಅವರ ಮಗ ಪ್ರಿಯಾಂಕ್ ಖರ್ಗೆ ಕೂಡಾ ಕಾಂಗ್ರೆಸ್ಸಿನಲ್ಲ ಪ್ರಭಾವಿಯೇ. ಕಾಂಗ್ರೆಸ್ಸಿನ ಸಿಎಂ ಕ್ಯಾಂಡಿಡೇಟ್ ಎಂದೇ ಕರೆಸಿಕೊಳ್ಳೋ, ಅಹಿಂದ ಅಂದ್ರೆ ದಲಿತರೂ ಸೇರಿದಂತೆ ಎಲ್ಲರ ನಾಯಕ ಸಿದ್ದರಾಮಯ್ಯ ಯಾರೊಬ್ಬರೂ ಮಾತನಾಡುತ್ತಿಲ್ಲ. ಅಖಂಡ ಶ್ರೀನಿವಾಸ ಮೂರ್ತಿ ಒಂಟಿಯಾಗಿದ್ದಾರೆ.
ನಾನು ಬಿಜೆಪಿಗೂ ಹೋಗಲ್ಲ. ಜೆಡಿಎಸ್`ಗೂ ಹೋಗಲ್ಲ ಎನ್ನುತ್ತಿರುವ ಅಖಂಡ ಶ್ರೀನಿವಾಸ ಮೂರ್ತಿಗೆ, ಪಕ್ಷೇತರರಾಗಿ ನಿಂತುಕೋ, ನಾವು ನಿಮ್ಮ ಜೊತೆಗಿರುತ್ತೇವೆ ಎಂದಿದ್ದಾರಂತೆ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್. ಪಕ್ಷೇತರನಾಗಿ ನಿಂತರೆ ಸಪೋರ್ಟ್ ಮಾಡುತ್ತೇನೆ ಎನ್ನುವ ನಾಯಕರಿಗೆ ಟಿಕೆಟ್ ಕೊಡಿಸುವ ಶಕ್ತಿಯಿಲ್ಲ. ಅಖಂಡ ಪರವಾಗಿ ಬಹಿರಂಗವಾಗಿ ಧ್ವನಿಯೆತ್ತುವುದಕ್ಕೂ ಆಗುತ್ತಿಲ್ಲ ಎನ್ನುವುದೇ ಅಚ್ಚರಿ..ವಿಸ್ಮಯ..ಕುತೂಹಲ.
ಅಂದಹಾಗೆ ನವೀನ್ ಎಂಬ ಯುವಕ ಸೋಷಿಯಲ್ ಮೀಡಿಯಾದಲ್ಲಿ ಮುಸ್ಲಿಂ ಧರ್ಮವನ್ನು ಅವಹೇಳನ ಮಾಡಿದ ತಪ್ಪಿಗೆ ಬಲಿಯಾಗಿದ್ದು ಅಖಂಡ ಶ್ರೀನಿವಾಸ ಮೂರ್ತಿ ಮನೆ. ಸಂಪೂರ್ಣ ಸುಟ್ಟು ಕರಕಲಾಗಿ ಹೋಯ್ತು. ಕಣ್ಣೀರಿಟ್ಟರು. ಗೋಗರೆದರು. ಕೆಪಿಸಿಸಿ ಅಧ್ಯಕ್ಷರಿಗೆ ಅಂಗಲಾಚಿದರು. ಅದೆ ಪ್ರಕರಣದ ಆರೋಪಿ ಸಂಪತ್ ರಾಜ್`ರನ್ನು ಜೈಲಿಂದ ಬಂದ ತಕ್ಷಣ ಜೊತೆಯಲ್ಲಿಟ್ಟುಕೊಂಡು ಓಡಾಡಿದ ಡಿಕೆ ಶಿವಕುಮಾರ್, ಅಖಂಡ ಅವರತ್ತ ತಿರುಗಿ ನೋಡಲಿಲ್ಲ. ಈಗ ಅವರ ವಿರುದ್ಧ ಕ್ಷೇತ್ರದಲ್ಲಿ ಜನಾಭಿಪ್ರಾಯವಿದೆ ಎಂದು ಹೇಳುತ್ತಿದ್ದಾರೆ.
ಅದೆಲ್ಲವನ್ನೂ ಬಿಡಿ. ಪಕ್ಷದ ಒಬ್ಬ ದಲಿತ ಶಾಸಕರ ಪರ ದನಿಯೆತ್ತಲಾಗದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಕೆಪಿಸಿಸಿಯ ಮಾಜಿ ಅಧ್ಯಕ್ಷ ಪರಮೇಶ್ವರ್, ಲೋಕಸಭೆ ಎಲೆಕ್ಷನ್ನಿನಲ್ಲಿ ಸೋತು ಈಗ ವಿಧಾನಸಭೆಗೆ ಬರಲು ಕನಸು ಕಾಣುತ್ತಿರುವ ಕೆ.ಎಚ್.ಮುನಿಯಪ್ಪ, ಹೊಳಲ್ಕೆರೆಯ ಆಂಜನೇಯ.. ಇವರೆಲ್ಲರೂ ಇವರ ಜೊತೆಗಿರುವ ನಾಯಕರೆಲ್ಲ ದಲಿತ ನಾಯಕರೇ. ಆದರೆ ಯಾರೊಬ್ಬರಿಗೂ ಪಕ್ಷದ ಒಬ್ಬ ದಲಿತ ಶಾಸಕನ ಪರ ಧ್ವನಿಯೆತ್ತುವ ಶಕ್ತಿಯಿಲ್ಲ ಎನ್ನುವುದೇ ವಿಪರ್ಯಾಸ.
ಅಂದಹಾಗೆ ಒಕ್ಕಲಿಗರ ಪರವಾಗಿ ಒಕ್ಕಲಿಗ ಸಮುದಾಯದ ಸ್ವಾಮಿಗಳು ದನಿಯೆತ್ತುತ್ತಾರೆ. ಅಬ್ಬರಿಸಿ ಗುಡುಗುತ್ತಾರೆ. ಲಿಂಗಾಯತರ ಪರವಾಗಿ ಲಿಂಗಾಯತ ಮಠಗಳು ಬೀದಿಗೇ ಇಳಿಯುತ್ತವೆ. ಕುರುಬರಿಗಾಗಿ ಕುರುಬ ಮಠಾಧೀಶರಿದ್ದಾರೆ. ಸಂಘಟನೆಗಳಿವೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿಷಯದಲ್ಲಿ ಇಲ್ಲಿನ ಮಸೀದಿ, ಮೌಲ್ವಿಗಳು, ಪಾದ್ರಿಗಳು, ಚರ್ಚುಗಳಷ್ಟೇ ಅಲ್ಲ ವಿದೇಶದಿಂದಲೂ ಒತ್ತಡ ಬಂದು ಬಿಡುತ್ತದೆ. ಆದರೆ ದಲಿತರ ವಿಷಯದಲ್ಲಿ ಮಾತ್ರ ಗಪ್ ಚುಪ್.



