ಅಮುಲ್ ಮತ್ತು ನಂದಿನಿ ವಿಲೀನ ಇಲ್ಲ. ಈ ಮಾತನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೆಎಂಎಫ್ ಎಂಡಿ ಬಿ.ಎ.ಸತೀಶ್ ಹೇಳಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಂಬುವುದಕ್ಕೆ ತಯಾರಿಲ್ಲ. ಅವರದ್ದು ಒಂದೇ ವಾದ. ಇದಕ್ಕೆ ತಕ್ಕಂತೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ನಮ್ಮ ಕೆಎಂಎಫ್ ನಮ್ಮ ನಂದಿನಿ ನಮ್ಮೆ ಹೆಮ್ಮೆ, ಸೇವ್ ನಂದಿನಿ ಎಂಬ ಅಭಿಯಾನಗಳೂ ಶುರುವಾಗಿವೆ. ಕನ್ನಡ ಪರ ಸಂಘಟನೆಗಳು ಬೀದಿಗಿಳಿದಿವೆ. ಇದರ ನಡುವೆ ಈಗ ಖುದ್ದು ಅಮುಲ್ ಸಂಸ್ಥೆಯ ಎಂಡಿಯೇ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು 10 ವರ್ಷ ಕಳೆದರೂ ಅಮುಲ್, ನಂದಿನಿಗೆ ಸ್ಪರ್ಧೆ ಮಾಡೋಕೆ ಆಗಲ್ಲ. ಅಲ್ಲದೆ ನಾವಿಬ್ಬರೂ ರೈತರ ಮಾಲೀಕತ್ವದ ಸಂಸ್ಥೆಗಳು. ನಮ್ಮ ಎರಡೂ ಕಂಪೆನಿಗಳ ಉದ್ದೇಶ ಒಂದೇ. ರೈತರ ಜೀವನ ಉತ್ತಮ ಪಡಿಸುವುದು. ನಾವು ಒಬ್ಬರಿಗೊಬ್ಬರು ಜೊತೆಯಾಗಿ ಪೂರಕವಾಗಿರುತ್ತೇವೆಯೇ ಹೊರತು, ಸ್ಪರ್ಧಿಗಳಾಗಲ್ಲ ಎಂದಿದ್ದಾರೆ ಅಮುಲ್ ಎಂಡಿ ಜಯೇನ್ ಮೆಹ್ತಾ.
ಅಷ್ಟೇ ಅಲ್ಲ, ಅಮುಲ್ ಬೆಲೆಗೂ, ನಂದಿನಿಯ ಬೆಲೆಗೂ ಬಹಳ ವ್ಯತ್ಯಾಸವಿದೆ. ಹೀಗಾಗಿಯೇ ನಾವು ಸ್ಪರ್ಧೆ ನೀಡಲು ಬರುತ್ತಿಲ್ಲ. ನಂದಿನಿಯ ಜೊತೆ ಇರಲು ಬರುತ್ತಿದ್ದೇವೆ. ಕಳೆದ ಏಳೆಂಟು ವರ್ಷಗಳಿಂದ ಕರ್ನಾಟಕದ ಬೆಳಗಾವಿ ಮತ್ತು ಧಾರವಾಡದಲ್ಲಿ ಇದ್ದೇವೆ. ಅಮುಲ್ ಹಾಲು ಮತ್ತು ಮೊಸರನ್ನು ಮಾರುತ್ತಿದ್ದೇವೆ. ಈಗಲೂ ಅಷ್ಟೆ, ಇ ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ಮೂಲಕ ಆನ್‍ಲೈನ್‍ನಲ್ಲಿ ಮಾತ್ರವೇ ಪೂರೈಸುತ್ತಿದ್ದೇವೆ. ಚಿಲ್ಲರೆ ಮಾರುಕಟ್ಟೆಗೆ ಬರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಅಮುಲ್ ಎಂಡಿ ಜಯೇನ್ ಮೆಹ್ತಾ.
ನಂದಿನಿ ಅಮುಲ್ ಸ್ನೇಹದ ಕಥೆ : ನಂದಿನಿಯ ಜೊತೆ ನಾವು ಹಿಂದಿನಿಂದಲೂ ಒಳ್ಳೆಯ ಸ್ನೇಹ ಹೊಂದಿದ್ದೇವೆ. ಕೆಎಂಎಫ್ ಜೊತೆ ವ್ಯವಹಾರವಿದೆ. ಕೆಎಂಎಫ್ ಹಾಲನ್ನು ಬಳಸಿಕೊಂಡು ಬೆಂಗಳೂರು ಡೈರಿಯಲ್ಲಿಯೇ ಅಮುಲ್ ಐಸ್‍ಕ್ರೀಂ ತಯಾರಿಸುತ್ತಿದ್ದೇವೆ. ನಮಗೆ ಚೀಸ್ ಕೊರತೆಯಾದಾಗ ಕೆಎಂಎಫ್‍ನಿಂದಲೇ ತರಿಸಿಕೊಂಡಿದ್ದೇವೆ. ಅದು ದಶಕಗಳಿಂದಲೂ ನಡೆದುಕೊಂಡು ಬರುತ್ತಿದ್ದೆ. ತಪ್ಪು ತಿಳುವಳಿಕೆ ಬೇಡ ಎನ್ನುವುದು ಅಮುಲ್ ಕೊಟ್ಟಿರುವ ಸ್ಪಷ್ಟನೆ.
ಸಿದ್ದರಾಮಯ್ಯ ಸರ್ಕಾರದಲ್ಲೇ ಅಮುಲ್ ಕರ್ನಾಟಕಕ್ಕೆ ಎಂಟ್ರಿ : ಅಂದಹಾಗೆ ಕೆಎಂಎಫ್ ಜೊತೆ ಅಮುಲ್ ಕಂಪೆನಿಯ ಹಾಲು, ಮೊಸರು ಕರ್ನಾಟಕಕ್ಕೆ ಮೊದಲು ಎಂಟ್ರಿ ಕೊಟ್ಟಿದ್ದು 2017ರಲ್ಲಿ. ಆಗ ಇದ್ದದ್ದು ಸಿದ್ದರಾಮಯ್ಯ ಸರ್ಕಾರ. ಆಗ ಇಲ್ಲದ ಪ್ರತಿಭಟನೆ, ಹೋರಾಟ ಈಗೇಕೆ..? ಇದು ರಾಜಕೀಯದ ಬೆಂಕಿ ಹೊತ್ತಿಸಿ ಲಾಭ ಪಡೆಯುವ ಯತ್ನವೇ ಹೊರತು ಬೇರೇನೂ ಅಲ್ಲ ಎಂದು ದಾಖಲೆ ಮುಂದಿಟ್ಟಿದ್ದಾರೆ ಸಂಸದ ಪ್ರತಾಪ್ ಸಿಂಹ.



