ವಿ.ಸೋಮಣ್ಣ. ಬಿಜೆಪಿ ಸರ್ಕಾರದಲ್ಲಿ ಸಚಿವ. ಗೋವಿಂದರಾಜನಗರ ಕ್ಷೇತ್ರದ ಶಾಸಕ. ಆದರೆ ಏಕೋ ಏನೋ.. ಈ ಬಾರಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ವಿ.ಸೋಮಣ್ಣ ಬಿಜೆಪಿ ಬಿಡ್ತಾರಂತೆ ಅನ್ನೋ ಸುದ್ದಿ ಸದಾ ಚಾಲ್ತಿಯಲ್ಲಿತ್ತು. ವಿ.ಸೋಮಣ್ಣ ಮೂಲತಃ ಬಿಜೆಪಿಯವರೇನಲ್ಲ. ಮೂಲತಃ ಜನತಾದಳದವರು. ನಂತರ ಕಾಂಗ್ರೆಸ್ಸಿಗೆ ಬಂದು, ಈಗ ಬಿಜೆಪಿಯಲ್ಲಿದ್ದಾರೆ. 2008ರಲ್ಲಿ 110 ಸ್ಥಾನ ಗೆದ್ದು ಯಡಿಯೂರಪ್ಪ ಸಿಎಂ ಆದರಲ್ಲ, ಆಗ ಕಾಂಗ್ರೆಸ್ಸಿಂದ ಬಿಜೆಪಿಗೆ ಹೋಗಿ ಮಿನಿಸ್ಟರ್ ಆದವರು ವಿ.ಸೋಮಣ್ಣ. ವಿಚಿತ್ರವೆಂದರೆ ಒಮ್ಮೆ ಪಕ್ಷೇತರರಾಗಿಯೂ ಗೆದ್ದಿದ್ದ ವಿ.ಸೋಮಣ್ಣ, ಬಿಜೆಪಿಯಿಂದ ನಿಂತಾಗ ಸೋತು, ವಿಧಾನಪರಿಷತ್ ಪ್ರವೇಶ ಮಾಡಬೇಕಾಯಿತು. ಹೀಗೆ ಯಡಿಯೂರಪ್ಪ ಅವರಿಗಾಗಿ ಬಿಜೆಪಿಗೆ ಹೋದ ಸೋಮಣ್ಣ, ಅದೇ ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗಿ ಕೆಜೆಪಿ ಕಟ್ಟಿದಾಗ ಬಿಜೆಪಿಯಲ್ಲಿಯೇ ಉಳಿದುಬಿಟ್ಟರು.
ಬಿಜೆಪಿಯಲ್ಲಿಯೇ ಉಳಿದ ಸೋಮಣ್ಣ, ನಂತರ ಹೈಕಮಾಂಡ್ ಸೂಚನೆ ಮೇರೆಗೆ ಯಡಿಯೂರಪ್ಪ ಬೆನ್ನಿಗೆ ಹೋಗುತ್ತಿದ್ದ ಹಲವು ನಾಯಕರನ್ನು ತಡೆದು ನಿಲ್ಲಿಸಿದರು. ಸ್ವತಃ ಸೋಮಣ್ಣನವರೇ ನನ್ನ ಜೊತೆ ನಿಲ್ಲುತ್ತಾರೆ ಎಂಬ ಭರವಸೆಯಲ್ಲಿದ್ದ ಯಡಿಯೂರಪ್ಪ, ಬರಲು ಸಿದ್ಧವಿದ್ದ ಇತರರನ್ನೂ ತಡೆದು ನಿಲ್ಲಿಸಿದ್ದೇ ತಮ್ಮ ಸೋಮಣ್ಣ ಎಂದು ತಿಳಿದಾಗ ಕನಲಿ ಕೆಂಡವಾದರು. ನಂತರ ಯಡಿಯೂರಪ್ಪ ಬಿಜೆಪಿಗೆ ಬಂದರೂ.. ಸೋಮಣ್ಣ ಏನೇ ಕಾರಣ ಹೇಳಿದರೂ.. ಯಡಿಯೂರಪ್ಪ ಸಿಟ್ಟು ತಣ್ಣಗಾಗಲೇ ಇಲ್ಲ. ತಮ್ಮ ವಿರುದ್ಧ ನಿಂತಿದ್ದ ಹಲವರಿಗೆ ಇವತ್ತಿಗೂ ಯಡಿಯೂರಪ್ಪ ನೆರವು ನೀಡುತ್ತಾರೆ. ಎಂತೆಂತಹ ದ್ರೋಹಗಳನ್ನು ಮರೆತು, ಅಂತಹವರನ್ನೆಲ್ಲ ಕ್ಷಮಿಸಿದ್ದ ಯಡಿಯೂರಪ್ಪ ಸೋಮಣ್ಣ ಬಗ್ಗೆ ಏಕೆ ಕಠೋರ ನಿಲುವು ತಾಳಿದರೋ ಗೊತ್ತಿಲ್ಲ. ಆದರೆ ಮೂಲಗಳ ಪ್ರಕಾರ ಅದಕ್ಕೆ ಕಾರಣ ವಿಜಯೇಂದ್ರ ಯಡಿಯೂರಪ್ಪ.
ವಿಜಯೇಂದ್ರ ಬೆಳೆದು ನಿಂತರೆ ತನ್ನ ಸ್ಥಾನ ಅಲುಗಾಡಬಹುದು ಎಂಬ ಆತಂಕ ಸೋಮಣ್ಣ ಅವರಿಗೆ, ಸೋಮಣ್ಣ ಅವರನ್ನು ಬೆಳೆಸಿದರೆ ಮುಂದೆ ತಮ್ಮ ಮಗನ ಬೆಳವಣಿಗೆಗೇ ತೊಂದರೆಯಾದೀತು ಎಂಬ ಅನುಮಾನ ಯಡಿಯೂರಪ್ಪ ಅವರಿಗೆ. ಈ ಅಪನಂಬಿಕೆಗಳ ಮಧ್ಯೆ ಗ್ಯಾಪ್ ದೊಡ್ಡದಾಯಿತು. ಈಗ ವಿ.ಸೋಮಣ್ಣ ಕಾಂಗ್ರೆಸ್ಸಿಗೆ ವಾಪಸ್ ಹೋಗ್ತಾರಾ..? ಬಿಜೆಪಿಯಲ್ಲೇ ಇರ್ತಾರಾ..? ಎಂಬ ಗೊಂದಲ ಉದ್ಭವವಾಗುವಂತೆ ಮಾಡಿದೆ.
ವಿ.ಸೋಮಣ್ಣ ಅವರು ಜೆಪಿ ನಡ್ಡಾ ಅವರೇ ಬಂದಿದ್ದಾಗ ಪಕ್ಷದ ವೇದಿಕೆಯಿಂದ ಹಿಂದೆ ಸರಿದರು. ತಾವೇ ಉಸ್ತುವಾರಿ ಸಚಿವರಾಗಿದ್ದ ಚಾಮರಾಜನಗರದಲ್ಲಿ ತಾವೇ ಕಾಣಿಸಿಕೊಳ್ಳಲಿಲ್ಲ. ಅದಾದ ಮೇಲೆ ಕಾಂಗ್ರೆಸ್ ಬಾಗಿಲು ತಟ್ಟಿದ ಸೋಮಣ್ಣ ಅವರಿಗೆ ಸಿದ್ದರಾಮಯ್ಯ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗಲಿಲ್ಲ ಎನ್ನಲಾಗಿದೆ. ಏಕೆಂದರ ಸೋಮಣ್ಣ ಬರಬೇಕು ಎಂದರೆ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಓಕೆ ಎನ್ನಬೇಕು. ಗೋವಿಂದರಾಜ ನಗರ ಮತ್ತು ವಿಜಯ ನಗರ ಕ್ಷೇತ್ರಗಳಲ್ಲಿ ಅವರೇ ಎದುರಾಳಿಗಳು. ಹೀಗಾಗಿ ಅವರು ಒಪ್ಪದೆ ನಿನ್ನನ್ನು ಕರೆದುಕೊಳ್ಳೋದು ಹೇಗೆ ಎಂದರಂತೆ ಸಿದ್ದರಾಮಯ್ಯ.
ರೆಡ್ ಸಿಗ್ನಲ್ ಬರುತ್ತಿದ್ದಂತೆಯೇ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಸೋಮಣ್ಣ ನಾನೆಲ್ಲ ಕಾಂಗ್ರೆಸ್ಸಿಗೆ ಹೋಗ್ತೀನಿ ಎಂದಿದ್ದೆ ಎಂದು ತಪ್ಪನ್ನೆಲ್ಲ ಮೀಡಿಯಾಗಳ ಮೇಲೆ ಹಾಕಿಬಿಟ್ಟರು. ಸಿಎಂ ಬೊಮ್ಮಾಯಿ, ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರೆಲ್ಲ ಸೋಮಣ್ಣ ಅವರೇ ಹೇಳಿದ್ದಾರಲ್ಲ ಎಂದರೇ ಹೊರತು, ನೋ ಚಾನ್ಸ್, ಸೋಮಣ್ಣ ಬಿಜೆಪಿಯಲ್ಲೇ ಇರ್ತಾರೆ ಎನ್ನಲಿಲ್ಲ. ಸೋಮಣ್ಣನವರೂ ಅಷ್ಟೆ, ಬಿಜೆಪಿಯಲ್ಲೇ ಇರ್ತೇನೆ ಎಂದು ಸ್ಪಷ್ಟವಾಗಿ ಹೇಳಲಿಲ್ಲ. ನಾನು ಇಂಡಿಪೆಂಡೆಂಟ್ ಆಗಿ ಗೆದ್ದವನು. ನಾನೆಲ್ಲ ಹೇಳಿದ್ದೆ ಕಾಂಗ್ರೆಸ್ಸಿಗೆ ಹೋಗ್ತೀನಿ ಅಂತಾ ಎಂದರಷ್ಟೇ.. ಆದರೆ ಅತ್ತ ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಇದ್ದಕ್ಕಿದ್ದಂತೆ ವಿ.ಸೋಮಣ್ಣ ನಮ್ಮವರು. ನಮ್ಮೂರಿನವರು. ಒಳ್ಳೆ ಕೆಲಸ ಮಾಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ ಎಂದಿದ್ದಾರೆ.
ಅಂದಹಾಗೆ ವಿ.ಸೋಮಣ್ಣ ಅವರು ಎಲ್ಲಿಗೆ ಹೋಗ್ತಾರೆ? ಕಾದು ನೋಡಿ..



