ನಂದಿನಿ ಹಾಲಿನ (Nandini Milk) ಬೆಲೆ ಏರಿಕೆಗೆ ಕೆಎಂಎಫ್‍ನಲ್ಲಿ (KMF) ನಿರ್ಧಾರ ಮಾಡಲಾಗಿದೆ. ಕೆಎಂಎಫ್‍ಗೆ (KMF) ರಾಜ್ಯದ ಎಲ್ಲ ಹಾಲು ಒಕ್ಕೂಟ ಸಂಸ್ಥೆಗಳೂ ಬೆಂಬಲ ಸೂಚಿಸಿವೆ. ಗುರುವಾರ ಸಂಜೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ (Nandini Milk) ಪ್ರತಿ ಲೀಟರ್ ಹಾಲಿನ ದರವನ್ನು 5 ರು. ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲು ಒಕ್ಕೊರಲಿನಿಂದ ತೀರ್ಮಾನಿಸಲಾಯಿತು. ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿನ ದರವನ್ನು 5 ರು. ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ. ರಾಜ್ಯ ಸರ್ಕಾರ ಒಪ್ಪಿಗೆ ನೀಡುವುದೊಂದೇ ಬಾಕಿ.
ಜುಲೈ 10ರಂದು ಅನ್ನಭಾಗ್ಯ ಯೋಜನೆಗೆ ಅಧಿಕೃತವಾಗಿ ರಾಜ್ಯ ಸರ್ಕಾರ ಚಾಲನೆ ನೀಡಲಿದೆ. ಆ ನಂತರ ಜುಲೈ 11ರಂದು ನಂದಿನಿ ಹಾಲಿನ ದರ ಏರಿಸಲು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಿರುವ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಆಡಳಿತ ಮಂಡಳಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಜೊತೆಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಿದೆ. ಮೂಲಗಳ ಪ್ರಕಾರ 5 ರೂ. ಹೆಚ್ಚಳಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಒಪ್ಪುವ ಸಾಧ್ಯತೆ ಇಲ್ಲ. ಬದಲಿಗೆ 3 ರೂ. ಅಥವಾ 2 ರೂ. ಏರಿಕೆಗೆ ಸಿದ್ದರಾಮಯ್ಯ ಒಪ್ಪಬಹುದು ಎನ್ನಲಾಗಿದೆ.
ಬೆಲೆ ಏರಿಕೆಗೆ ಏನು ಕಾರಣ..?
ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆಜೋಳ, ಅಕ್ಕಿತೌಡು, ಖನಿಜ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಹತ್ತಿಕಾಳು ಹಿಂಡಿ ಸೇರಿದಂತೆ ಇತರೆ ಪಶು ಅಹಾರದಲ್ಲಿ ಶೇ.30ಕ್ಕಿಂತಲೂ ಅಧಿಕ ಏರಿಕೆಯಾಗಿದೆ. ಪ್ರತಿ ಕೆಜಿ ಪಶು ಆಹಾರ ಉತ್ಪಾದನೆಯ ವೆಚ್ಚವು ಎರಡು ವರ್ಷದ ಹಿಂದೆ 18 ರು. ಇತ್ತು. ಈಗ 25 ರು.ಗಳಿಗೆ ತಲುಪಿದೆ. ಆದರೆ ಅದಕ್ಕೆ ತಕ್ಕಂತೆ ಹಾಲಿನ ಬೆಲೆ ಏರಿಕೆಯಾಗಿಲ್ಲ. ಸಾಗಾಣಿಕೆ ವೆಚ್ಚ, ಮೇವಿನ ದರವೂ ಡಬಲ್ ಆಗಿದ್ದು, ಹಾಲಿನ ದರ ಏರಿಸಿ ಎನ್ನುವ ಬೇಡಿಕೆ ಇದೆ.
ಹಾಲಿನ ಮಾರುಕಟ್ಟೆಯಲ್ಲಿ ದೊಡ್ಲ, ಹೆರಿಟೇಜ್, ತಿರುಮಲ, ಜೆರ್ಸಿ, ಆರೋಗ್ಯ ಸೇರಿದಂತೆ ಇತರೆ ಬ್ರ್ಯಾಂಡ್ ಹಾಲಿನ ದರಕ್ಕೆ ಹೋಲಿಕೆ ಮಾಡಿದರೆ ನಂದಿನಿ ಹಾಲಿನ ದರ ಕಡಿಮೆ ಇದೆ. ಹಾಲು ಉತ್ಪಾದಕರು ಹಾಲನ್ನು ಖಾಸಗಿ ಕಂಪನಿಗಳಿಗೆ ಹೆಚ್ಚು ಹಣಕ್ಕೆ ಮಾರಾಟ ಮಾಡಲು ಮುಂದಾಗುತ್ತಿರುವುದು ಕೂಡ ದರ ಹೆಚ್ಚಳಕ್ಕೆ ಕಾರಣವಾಗಿದೆ.



