ಈಗ ಚುನಾವಣೆ ಬಿರುಗಾಳಿ ಇದೆ. ಆದರೆ 2022ರಲ್ಲಿ ಬಿಜೆಪಿಯನ್ನು ಪ್ರವೀಣ್ ನೆಟ್ಟಾರು ಕೊಲೆ ಕೇಸ್ ಅಕ್ಷರಶಃ ನಡುಗಿಸಿತ್ತು. ಈಗ ಪಕ್ಷ ಬಿಟ್ಟಿರುವ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯಂತಹವರಲ್ಲ, ನಿಜಕ್ಕೂ ಬಿಜೆಪಿಗೆ ಶಾಕ್ ಕೊಟ್ಟಿದ್ದುದು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ. ಯಾಕೆಂದರೆ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು, ಅಷ್ಟೇ ಅಲ್ಲದೆ ಅದಕ್ಕೆ ಕೆಲವೇ ತಿಂಗಳ ಮೊದಲು ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಗಿತ್ತು. ಹಲ್ಲೆ ಪ್ರಕರಣಗಳು ನಿಂತೇ ಇರಲಿಲ್ಲ. ಜುಲೈ 26ರಂದು ನಡೆದ ಪ್ರವೀಣ್ ನೆಟ್ಟಾರು ಕೊಲೆ ನಂತರ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಿದ್ದರು. ಪಕ್ಷದ ಸ್ಥಳೀಯ ಘಟಕಗಳ ಅಧ್ಯಕ್ಷರು, ಯುವ ಕಾರ್ಯಕರ್ತರು ಬಿಜೆಪಿ ತೊರೆದಿದ್ದರು. ಹಿಂದೂ ಸಂಘಟನೆ ಕಾರ್ಯಕರ್ತರು ಬಿಜೆಪಿ ವಿರುದ್ಧ ಬೀದಿಗೆ ಇಳಿದಿದ್ದರು. ರಾಜ್ಯ ಬಿಜೆಪಿ ನಾಯಕರ ನಡೆದುಹೋಗುತ್ತೆ ಬಿಡಿ, ಒಂದಷ್ಟು ದಿನ ಹಾರಾಡ್ತಾರೆ.. ಆಮೇಲೆ ಸುಮ್ಮನಾಗ್ತಾರೆ.. ಈಗೊಂದು ಆಕ್ರೋಶದ ಹೇಳಿಕೆ ಕೊಟ್ಟರೆ ಸಾಕು ಎಂಬ ವರ್ತನೆಗೆ ಆ ಸಾಮೂಹಿಕ ರಾಜೀನಾಮೆ ಮತ್ತು ಪ್ರತಿಭಟನೆ ದೊಡ್ಡ ಏಟನ್ನೇ ಕೊಟ್ಟಿತ್ತು.
ಹಾಗೆ ನೋಡಿದರೆ ಹರ್ಷ ಕೊಲೆ ಪ್ರಕರಣದಲ್ಲಿಯೇ ಸರ್ಕಾರಕ್ಕೂ ಮೊದಲು ಹಣ ಸಂಗ್ರಹಿಸಿ ಕೊಟ್ಟಿದ್ದ ಬಿಜೆಪಿ ಕಾರ್ಯಕತರ್ತರು ಹಾಗೂ ಹಿಂದೂ ಸಂಘಟನೆಗಳು ಶಾಂತಿಯುತ ಪ್ರತಿಭಟನೆಯ ಮುನ್ಸೂಚನೆ ನೀಡಿದ್ದರು. ಆದರೆ ಬಿಜೆಪಿ ನಾಯಕರಿಗೆ ಅದು ಆರ್ಥವಾಗಿದ್ದು ನಳಿನ್ ಕುಮಾರ್ ಕಟೀಲ್, ಸುನಿಲ್ ಕುಮಾರ್, ಅರಗ ಜ್ಞಾನೇಂದ್ರ ಕಾರನ್ನು ಅಲುಗಾಡಿಸಿದಾಗಲೇ.. ಆ ರೀತಿಯ ಆಕ್ರೋಶವನ್ನು ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಬಿಜೆಪಿ ನಾಯಕರೂ ನಿರೀಕ್ಷಿಸಿರಲಿಲ್ಲ.
ಆ ಪ್ರವೀಣ್ ನೆಟ್ಟಾರು ಅವರ ಕನಸು ಸ್ವಂತ ಮನೆ. ಸುಳ್ಯದಲ್ಲಿ ಭೂಮಿಯೂ ಇತ್ತು. ಮನೆ ಕಟ್ಟುವ ಕನಸಿನಲ್ಲೇ ಬದುಕುತ್ತಿದ್ದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಆಸರೆಯಾಗಿ ಬಂದಿದ್ದ ಸ್ಥಳೀಯ ಬಿಜೆಪಿ ಘಟಕ ಕೈಜೋಡಿಸಿದ್ದು, ಮನೆ ಕಟ್ಟಿಸಿಕೊಟ್ಟಿದೆ. ಹತ್ತೇ ತಿಂಗಳಲ್ಲಿ ಮನೆಯ ನಿರ್ಮಾಣ ಕಾರ್ಯವೂ ಮುಗಿದು ಗೃಹ ಪ್ರವೇಶವಾಗುತ್ತಿದೆ. 70 ಲಕ್ಷ ವೆಚ್ಚದಲ್ಲಿ ಕಟ್ಟಿರುವ ಮನೆಗೆ ಪ್ರವೀಣ್ ನಿಲಯ ಎಂದು ಹೆಸರಿಡಲಾಗಿದೆ. ಗಣಹೋಮ ಮತ್ತು ಸತ್ಯನಾರಾಯಣ ಪೂಜೆಗಳ ಜೊತೆ ಗೃಹ ಪ್ರವೇಶ ನಡೆಯಲಿದೆ. ಪ್ರವೀಣ್ ನೆಟ್ಟಾರು ಸಮಾಧಿ ಬಳಿ ಪ್ರವೀಣ್ ಅವರ ಪ್ರತಿಮೆ ಅನಾವರಣಗೊಳಲಿದೆ.
ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ. ಕರಾವಳಿ ಭಾಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟುತ್ತಿದ್ದು, ಕಾರ್ಯಕರ್ತರು ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ. ಸುಳ್ಯ, ಪುತ್ತೂರು ಭಾಗದಲ್ಲಿ ಪ್ರಚಾರಕ್ಕೆ ಹೋಗುತ್ತಿರುವ ನಾಯಕರಿಗೆ ಈ ಬಿಸಿ ಜೋರಾಗಿಯೇ ತಟ್ಟುತ್ತಿದೆ. ತಮ್ಮದೇ ಪಕ್ಷದ ಆಕ್ರೋಶವನ್ನು ಈ ಮೂಲಕ ತಣ್ಣಗಾಗಿಸಬಹದು ಎಂಬ ನಿರೀಕ್ಷೆ, ಲೆಕ್ಕಾಚಾರ ನಾಯಕರದ್ದು.



