ಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆಯಲ್ಲಿ ಕಾಂಗ್ರೆಸ್`ಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಬಿಜೆಪಿ 2ನೇ ಸ್ಥಾನ. ಜೆಡಿಎಸ್`ಗೆ 3ನೇ ಸ್ಥಾನ. ಈ ಬಾರಿಯೂ ಜೆಡಿಎಸ್ ಸಂಖ್ಯಾಬಲ 30 ದಾಟಲ್ಲ.
ಝೀ ನ್ಯೂಸ್ ಸಮೀಕ್ಷೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷ. ಆದರೆ ಬಹುಮತ ಇಲ್ಲ. ಕಾಂಗ್ರೆಸ್ ನಂ.2. ಜೆಡಿಎಸ್ ನಂ.3
ಅಲ್ಲದೆ ಏಷ್ಯಾನೆಟ್ ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ ಸಮೀಕ್ಷೆಗಳಲ್ಲೂ ಸ್ಪಷ್ಟ ಬಹುಮತ ಬಂದಿಲ್ಲ. ಆದರೆ ಈ ಸಮೀಕ್ಷೆಗಳ ಪ್ರಕಾರ ಜೆಡಿಎಸ್ ಕಿಂಗ್ ಮೇಕರ್. ಜೆಡಿಎಸ್ ಬೆಂಬಲವಿಲ್ಲದೆ ಯಾರೂ ಸರ್ಕಾರ ರಚಿಸಲು ಸಾಧ್ಯವಿಲ್ಲ.
ಸಹಜವಾಗಿಯೇ ಸ್ಪಷ್ಟ ಬಹುಮತದ ಮಾತನ್ನಾಡುತ್ತಿರುವ ಕುಮಾರಸ್ವಾಮಿ ಅವರಿಗೆ ಈ ಪ್ರಶ್ನೆ ಎದುರಾಯಿತು. ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಯಾರೂ ನಂಬಬೇಡಿ. ಅದೆಲ್ಲವೂ ರಾಷ್ಟ್ರೀಯ ಪಕ್ಷಗಳು ದುಡ್ಡು ಕೊಟ್ಟು ಮಾಡಿಸುವ ಸರ್ವೆಗಳು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ 10 ರಿಂದ 15 ಸ್ಥಾನ ಹೆಚ್ಚು ಜೆಡಿಎಸ್ ಗೆಲ್ಲುವುದು ನಿಶ್ಚಿತ ಇದು ಕುಮಾರಸ್ವಾಮಿ ಉತ್ತರ. ಅಂದರೆ ಹೆಚ್ಚು ದುಡ್ಡು ಕೊಟ್ಟವರಿಗೆ ಹೆಚ್ಚು ಸ್ಥಾನ ಕೊಡುತ್ತಾರೆ ಎನ್ನುವುದು ಕುಮಾರಸ್ವಾಮಿ ಮಾತಿನ ಅರ್ಥ.
ಹಾಗಾದರೆ ಅದು ನಿಜವಾ..? ಸಾಧ್ಯವಾ..? ಎಂದು ಹುಡುಕಿದರೆ ಒಂದೇ ಮಾತಿನಲ್ಲಿ ಉತ್ತರ ಹೇಳಬಹುದು. ಸಾಧ್ಯವಿಲ್ಲ. ಏಕೆಂದರೆ ಕ್ರೆಡಿಬಿಲಿಟಿ ಎನ್ನುವುದೊಂದು ಇರುತ್ತದೆ. ಯಾವುದೇ ನ್ಯೂಸ್ ಚಾನೆಲ್, ಪತ್ರಿಕೆ, ಸಂಸ್ಥೆಗಳಿಗೂ ಆ ರೀತಿಯ ನಂಬುವ ಆರ್ಹತೆ ಬೇಕೇ ಬೇಕು. 2014ರ ಲೋಕಸಭೆ ಚುನಾವಣೆಯಲ್ಲಿ ಬಹುತೇಕ ಎಲ್ಲ ಸಮೀಕ್ಷೆಗಳಲ್ಲಿ ಎನ್`ಡಿಎಗೆ ಅಧಿಕಾರ ಎಂದು ಬಂದಿತ್ತು. ಆದರೆ ಆಗ ಚಾಣಕ್ಯ ಟುಡೇ ಸಮೀಕ್ಷೆ ಮಾತ್ರ ಎನ್‍ಡಿಎ ಒಕ್ಕೂಟದಲ್ಲಿರುವ ಬಿಜೆಪಿಗೆ ಸರಳ ಬಹುಮತ ಬರುತ್ತದೆ ಎಂದು ಹೇಳಿತ್ತು. ಅದಕ್ಕೆ ಮುನ್ನ ಪಿ.ವಿ.ನರಸಿಂಹ ರಾವ್ ಸರ್ಕಾರ ಬಿಟ್ಟರೆ ಉಳಿದೆಲ್ಲ ಸಮ್ಮಿಶ್ರ ಸರ್ಕಾರಗಳನ್ನೇ ನೋಡಿದ್ದವರು, ಅದನ್ನು ನಂಬಿರಲಿಲ್ಲ. ಆದರೆ ರಿಸಲ್ಟ್ ಬಂದಾಗ ಅದೇ ಸತ್ಯವಾಗಿತ್ತು.
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವುದನ್ನು ಎಲ್ಲ ಸಮೀಕ್ಷೆಗಳೂ ನಿಚ್ಚಳವಾಗಿ ಹೇಳಿದ್ದವು. ಸುವರ್ಣ ನ್ಯೂಸ್-ಸಿ ವೋಟರ್ ಸಮೀಕ್ಷೆಯಂತೂ ಕರಾರುವಾಕ್ ಸಮೀಕ್ಷೆ ನುಡಿದಿತ್ತು. ಹಾಗೆಂದು ಉಳಿದ ಸಮೀಕ್ಷೆಗಳು ಸತ್ಯಕ್ಕೆ ದೂರವಾಗಿದ್ದವು ಎಂದಲ್ಲ. ಸತ್ಯಕ್ಕೆ ಹತ್ತಿರವಾಗಿಯೇ ಇದ್ದವು.
ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿ ಅತಿ ದೊಡ್ಡ ಪಕ್ಷವಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಹಾಗೆಯೇ ಆಯಿತು. ಬಿಜೆಪಿ ದೊಡ್ಡ ಪಕ್ಷವಾದರೆ, ಕಾಂಗ್ರೆಸ್ 2ನೇ ಹಾಗೂ ಜೆಡಿಎಸ್ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದವು. 2ನೇ ಮತ್ತು 3ನೇ ಸ್ಥಾನ ಪಡೆದವರು ಒಂದಾಗಿ ಮೊದಲನೇ ಸ್ಥಾನ ಪಡೆದವರು ಸರ್ಕಾರದಿಂದ ಆಚೆಗಿಟ್ಟಿದ್ದರು. ನಂತರ ಅವರು ಆಪರೇಷನ್ ಮಾಡಿ ಗೆದ್ದರು.
2019ರ ಲೋಕಸಭೆ ಚುನಾವಣೆಯಲ್ಲಿಯೂ ಅಷ್ಟೆ, ಈ ಬಾರಿಯೂ ಟುಡೇಸ್ ಚಾಣಕ್ಯ 300+ ಸೀಟನ್ನ ಬಿಜೆಪಿ ಗಳಿಸುತ್ತದೆ ಎಂದಿತ್ತು. ಆಡಳಿತ ವಿರೋಧಿ ಅಲೆ ಬಿಜೆಪಿಗೆ ಡ್ಯಾಮೇಜ್ ಮಾಡುತ್ತದೆ ಕಣ್ರಿ ಎಂದಿದ್ದವರೂ ರಿಸಲ್ಟ್ ಬಂದಾಗ ಬಾಯ್ಮುಚ್ಚಿಕೊಂಡಿದ್ದರು. ಈಗ ಒಂದು ಸಮೀಕ್ಷೆ ಕಾಂಗ್ರೆಸ್`ಗೆ ಬಹುಮತ ನೀಡಿದ್ದರೆ, ಉಳಿದ ಸಮೀಕ್ಷೆಗಳಲ್ಲಿ ಒಂದರಲ್ಲಿ ಬಿಜೆಪಿ ನಂ.1 ಹಾಗೂ ಇನ್ನೊಂದರಲ್ಲಿ ಕಾಂಗ್ರೆಸ್ ನಂ.1 ಎಂದು ಹೇಳಿವೆ. ಎಲ್ಲ ಸಮೀಕ್ಷೆಗಳಲ್ಲಿಯೂ ಜೆಡಿಎಸ್ 3ನೇ ಸ್ಥಾನದಲ್ಲೇ ಇದೆ. ಮತ್ತದು ಸತ್ಯಕ್ಕೆ ಹತ್ತಿರವಾಗಿಯೇ ಇದೆ. ಸಮೀಕ್ಷೆಗಳಲ್ಲಿ ಗೊಂದಲ ಇರುವುದಕ್ಕೆ ಕಾರಣ ಇಷ್ಟೆ, ಈ ಬಾರಿಯ ಎಲೆಕ್ಷನ್ ಕಣ್ಣಿನ ಅಂದಾಜಿಗೆ ಮಾತಿನ ಅಂದಾಜಿಗೆ ಸಿಗುತ್ತಿಲ್ಲ. ಒಂದು ಅಜೆಂಡಾ ಇಲ್ಲ. ಹೀಗಾಗಿ ಯಾವ ರೀತಿಯಲ್ಲಿ ಮತದಾರ ಮತ ನೀಡುತ್ತಾನೆ ಎನ್ನುವುದೇ ಕನ್`ಫ್ಯೂಷನ್.



