ಅಆಇಈ. ಇಂದ ಸಹಳ..ವರೆಗೆ ಕನ್ನಡದಷ್ಟು ಸುಂದರವಾದ ಅಕ್ಷರಮಾಲೆ ಇನ್ನೊಂದಿಲ್ಲ. ವಿನೋಭಾ ಬಾವೆಯಂತಹವರಿಂದ ಲಿಪಿಗಳ ರಾಣಿ ಎಂದು ಕರೆದುಕೊಂಡ ಭಾಷೆ ಕನ್ನಡ. ಭಾರತೀಯ ಭಾಷೆಗಳಲ್ಲಿ ಸಂಸ್ಕೃತ ಬಿಟ್ಟರೆ ಕನ್ನಡದ ಇತಿಹಾಸವೇ ದೊಡ್ಡದು. ನಿಮಗೆ ಒಂದು ವಿಶೇಷವನ್ನಂತೂ ಹೇಳಲೇಬೇಕು. ರಾಷ್ಟ್ರೀಯ ಭಾಷೆ ಎಂದು ಕೆಲವರು ಸುಖಾಸುಮ್ಮನೆ ಕರೆಯುವ ಹಿಂದಿಗೆ ಸ್ವಂತ ಲಿಪಿಯಿಲ್ಲ. ದೇವನಾಗರಿಯಿಂದ ಜನಿಸಿದ್ದು. ಅಂತಾರಾಷ್ಟ್ರೀಯ ಭಾಷೆ ಎಂದು ಕರೆಸಿಕೊಳ್ಳುವ ಇಂಗ್ಲಿಷ್ ಲಿಪಿಗೂ ತಾಯಿ ರೋಮನ್.
ಕನ್ನಡ ಸ್ವಲ್ಪ ಮಟ್ಟಿಗೆ ಸಂಸ್ಕೃತ ಜನ್ಯವಾದರೂ, ಸಂಸ್ಕೃತದಿಂದ ಪ್ರಭಾವಿತವಾಗಿದ್ದರೂ ಸ್ವಂತ ಲಿಪಿಯನ್ನು ಹೊಂದಿದೆ. ಕನ್ನಡದಲ್ಲಿ ಕವಿರಾಜ ಮಾರ್ಗ ದಂತಹ ಕೃತಿ ರಚನೆಯಾಗಿದ್ದಾಗ ಇಂಗ್ಲಿಷ್ ಆಗಲೀ, ಹಿಂದಿಯಾಗಲೀ ಹುಟ್ಟಿರಲೇ ಇಲ್ಲ. ದಾಖಲೆ, ಇತಿಹಾಸವನ್ನು ಬರೆಯುತ್ತಾ ಹೋದರೆ ಇದು ಮುಗಿಯುವಂತದ್ದೂ ಅಲ್ಲ. ಇಂತಹ ಕನ್ನಡ ಇದೀಗ ಮತ್ತೊಂದು ದಾಖಲೆ ಬರೆದಿದೆ. ಅದು ಲಿಪಿಗಳ ವಿಷಯದಲ್ಲಿ.
ಕನ್ನಡದಲ್ಲಿ ಲಿಪಿ ಅರ್ಥಾತ್ ಅಕ್ಷರಮಾಲೆಗಳ ಕುರಿತೇ ಹಾಡೊಂದಿದೆ. ಕರುಳಿನ ಕುಡಿ ಚಿತ್ರದ ಅಅಇಈ ಕನ್ನಡದ ಅಕ್ಷರಮಾಲೆ.. ಅಮ್ಮಾ ಎಂಬುದೇ ಕಂದನ ಕರುಳಿನ ಕರೆಯೋಲೆ.. ಹಾಡಿನಲ್ಲಿ ಸ್ವರಗಳ ಪದಗಳನ್ನೇ ಸುಂದರ ಹಾಡನ್ನಾಗಿ ಚಿತ್ರಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಡಾ.ರಾಜ್, ಕಲ್ಪನಾ ಪ್ರಧಾನ ಪಾತ್ರದಲ್ಲಿದ್ದ ಕರುಳಿನ ಕರೆ ಚಿತ್ರದಲ್ಲಿ ಈ ಹಾಡಿದೆ. ಆರ್.ಎನ್.ಜಯಗೋಪಾಲ್ ಬರೆದಿದ್ದ ಹಾಡದು. ಎಸ್.ಜಾನಕಿ, ಬಿ.ಕೆ.ಸುಮಿತ್ರ ಹಾಗೂ ಸ್ವತಃ ಆರ್.ಎನ್.ಜಯಗೋಪಾಲ್ ಹಾಡಿದ್ದ ಹಾಡು ಅಆಇಈ ಕಲಿಸುವವರಿಗೊಂದು ಸ್ಫೂರ್ತಿ. ಹಾಡು, ನೃತ್ಯ, ನಾಟಕಗಳ ಮೂಲಕ ಕನ್ನಡ ಕಲಿಸುವ ಅನೇಕ ಪ್ರಯತ್ನಗಳು ಕನ್ನಡದಲ್ಲಿ ಆಗಿವೆ. ಇಂತಹದ್ದೇ ವಿಶಿಷ್ಠ ಪ್ರಯೋಗದ ಮೂಲಕ ಗಮನ ಸೆಳೆದಿದ್ದವರು ಕಲಾವಿದ ಬಾದಲ್ ನಂಜುಂಡಸ್ವಾಮಿ.


‘ಅ’ ಅಕ್ಷರದೊಳಗೆ ಅಳಿಲನ್ನು ಕೂರಿಸಿ, ‘ಆ’ದಲ್ಲಿ ಆನೆ ಸೊಂಡಿಲು ಮೂಡಿಸಿ, ‘ಇ’ಯಲ್ಲಿ ಇಲಿಯನ್ನಿಟ್ಟು, ‘ಈ’ಯಲ್ಲಿ ಈರುಳಿಯನ್ನೇ ಬೆಳೆಸಿರುವ ಬಾದಲ್ ನಂಜುಂಡಸ್ವಾಮಿ, ಕನ್ನಡ ವರ್ಣಮಾಲೆಯ ಪ್ರತಿ ಅಕ್ಷರಕ್ಕೂ ಸರಿಹೊಂದುವ ಚಿತ್ರಗಳನ್ನು ಆಯಾ ಅಕ್ಷರದಲ್ಲಿ ಕೈಬರಹದಲ್ಲೇ ಬಿಡಿಸಿದ್ದಾರೆ. ಇದು ಸಣ್ಣ ಮಕ್ಕಳ ಗಮನವನ್ನು ಅಕ್ಷಗಳ ಮೇಲೆ ಕೇಂದ್ರೀಕರಿಸಲು ಹಾಗೂ ಅಕ್ಷರಗಳನ್ನು ಗ್ರಹಿಸಲು ನೆರವಾಗಲಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ಮೊಸಳೆ, ಬಾಯ್ತೆರೆದ ಮೋರಿಯಲ್ಲಿ ರಕ್ಕಸನ ಚಿತ್ರ, ಮುರಿದು ನಿಂತ ಸೂಚನಾ ಫಲಕಕ್ಕೊಂದು ಬ್ಯಾಂಡೇಜು, ರಸ್ತೆಯ ನಡುವಲ್ಲಿ 3ಡಿ ಕೊರೊನಾ ವೈರಸ್, ಹೀಗೆ ಯಾವುದೇ ವಿಚಾರದ ಬಗ್ಗೆ ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಕಲೆಯ ಮೂಲಕ ಜಾಗೃತಿ ಮೂಡಿಸುವ ಬಾದಲ್ ನಂಜುಂಡಸ್ವಾಮಿ ಕಳೆದ 20 ವರ್ಷಗಳಿಂದ ಕ್ಯಾಲಿಗ್ರಫಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇದೀಗ ಈ ಅಕ್ಷರಮಾಲೆಯ ಕಲೆ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ.


ಎರಡು ವರ್ಷಗಳ ಹಿಂದೆ ಶಿಕ್ಷಕಿ ಪುಷ್ಪಮ್ಮ ಎಂಬವರ ಮನವಿ ಮೇರೆಗೆ ಈ ಕಲೆ ರಚಿಸಿದ್ದೆ. ಇದೀಗ ನನ್ನ ಕಲೆಯನ್ನು ಪ್ರಧಾನಿಯವರು ಗುರುತಿಸಿರುವುದು ಹೆಮ್ಮೆಯ ವಿಚಾರವಾಗಿ, ಅಷ್ಟೇ ಸಂತೋಷವನ್ನು ನೀಡುತ್ತಿದೆ, ಕಲೆಯನ್ನು ಗುರುತಿಸಿರುವುದಕ್ಕೆ ಪ್ರಧಾನಿಯವರಿಗೆ ಧನ್ಯವಾದಗಳು ಎಂದು ತಮ್ಮ ಕಲೆಯನ್ನು ಭಾರತದ ಪ್ರಧಾನಿ ಗುರುತಿಸಿದ ಬಗ್ಗೆ ನಂಜುಂಡಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಅಕ್ಷರಮಾಲೆ ರೂಪಿಸಲು 10-15 ದಿನಗಳಷ್ಟು ಸಮಯ ತೆಗೆದುಕೊಂಡಿದ್ದೆ. ಇದು ಮಾತಿನ ಸಮಸ್ಯೆ ಇರುವ ಮಕ್ಕಳಿಗೆ ಅನೂಕೂಲವಾಗುತ್ತದೆ. ಕಲಿಕೆಯ ಹಂತದ ಎಲ್ಲ ಮಕ್ಕಳಿಗೂ ಉಪಯೋಗವಾಗುತ್ತದೆ. ಮಕ್ಕಳಿಗೆ ಅಕ್ಷರ ಗುರುತಿಸುವಂತಿರಬೇಕು ಹಾಗೂ ಚಿತ್ರವನ್ನೂ ಗುರುತಿಸುವಂತಿರಬೇಕು ಎನ್ನುವುದು ನನ್ನ ಕಲ್ಪನೆಯಾಗಿತ್ತು ಎಂದಿದ್ದಾರೆ ಬಾದಲ್ ನಂಜುಂಡಸ್ವಾಮಿ.
ಕಡಿಮೆ ಬುದ್ದಿಶಕ್ತಿಯಿರುವ ಮಕ್ಕಳಿಗೆ ಇದು ಪ್ರಯೋಜನಕಾರಿ. ತಾರೇ ಜಮೀನ್ ಪರ್ ಚಿತ್ರದಲ್ಲಿಯೂ ಇದನ್ನು ತೋರಿಸಲಾಗಿತ್ತು. ಚಿತ್ರಗಳನ್ನು ಪದೇ ಪದೇ ನೋಡುತ್ತಿದ್ದರೆ ಮಕ್ಕಳಿಗೆ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ ಎನ್ನುವುದು ಸಂಶೋಧನೆಯಿಂದ ಸಾಬೀತಾಗಿದೆ. ನಾನು ಕೇಳಿದ್ದೆನಷ್ಟೆ, ಸರಿಯಾದ ಪದಗಳನ್ನು ಗುರುತಿಸಿ ಬಿಡಿಸಿದ್ದು ಬಾದಲ್ ನಂಜುಂಡಸ್ವಾಮಿ ಎಂದು ಹೇಳಿದ್ದಾರೆ ಈ ಚಿತ್ರಕ್ಕೆ ಮೂಲ ಕಾರಣರಾದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಷ್ಪಾವತಿ.



