ಸದ್ಯಕ್ಕೆ ನಡೆಯುತ್ತಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಲೆಲ್ಲೂ ಅಬ್ಬರಿಸುತ್ತಿರುವುದು ಹೊಂದಾಣಿಕೆ ರಾಜಕೀಯ. ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಬೋಜೇಗೌಡರೇ, ಕಾಂಗ್ರೆಸ್ಸಿಗೆ ವೋಟ್ ಹಾಕಿ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸಿದ್ದರಾಮಯ್ಯ ಅವರಂತೂ ನನ್ನನ್ನು ಸೋಲಿಸೋಕೆ ಬಿಜೆಪಿ-ಜೆಡಿಎಸ್ ಒಪ್ಪಂದ ಮಾಡಿಕೊಂಡಿವೆ ಎಂದು ಚುನಾವಣೆ ಶುರುವಾಗುವ ಮೊದಲೇ ಮಾತನಾಡುತ್ತಿದ್ದಾರೆ. ಇನ್ನು ವಿಜಯೇಂದ್ರ ಅವರ ಗೆಲುವಿಗೆ ಕಾಂಗ್ರೆಸ್, ನಿಖಿಲ್ ಗೆಲುವಿಗೆ ಬಿಜೆಪಿ ಹಾಗೂ ಕಾಂಗ್ರೆಸ್, ಎಸ್.ಟಿ.ಸೋಮಶೇಖರ್ ಸೋಲಿಗೆ ಕಾಂಗ್ರೆಸ್ ಮತ್ತು ಜೆಡಿಎಸ್.. ಒಳ ಒಪ್ಪಂದ ಮಾಡಿಕೊಂಡಿವೆ ಎನ್ನುವ ಆರೋಪ ಕೇಳಿ ಬರುತ್ತಲೇ ಇದೆ. ಆದರೆ ಹಾಸನದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ನಿಜಕ್ಕೂ ಶಾಕ್ ಕೊಟ್ಟಿದ್ದಾರೆ.
ಜೆಡಿಎಸ್ಗೆ ಬಹುಮತ ಬರೋದಿಲ್ಲ. ದೆಹಲಿಯಲ್ಲಿ ಮೋದಿ ಸಾಹೇಬ್ರು ಹಾಗೂ ದೇವೇಗೌಡ್ರು ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ನೀವು ಜೆಡಿಎಸ್ಗೆ ವೋಟು ಹಾಕಿದರೂ ಬಿಜೆಪಿಗೆ ಹಾಕಿದಂತೆ. ನೀವು ಹಾಸನದಿಂದ ಬೆಂಗಳೂರಿಗೆ ಹೋಗುವುದಾದರೆ ಬೆಳ್ಳೂರು ಕ್ರಾಸ್ ಮೇಲೆಯೇ ಹೋಗಬೇಕು. ಅದನ್ನು ಬಿಟ್ಟು ಮೈಸೂರು ಸುತ್ತಿಕೊಂಡು ಹೋಗುತ್ತೇನೆ ಎಂದರೆ ನಾನೇನು ಮಾಡಲು ಆಗಲ್ಲ. ಎಲ್ಲಾ ಹಳ್ಳದ ನೀರು ಹರಿದು ಸಮುದ್ರಕ್ಕೇ ಬರೋದು. ಹಾಗಾಗಿ ನೀವು ಸುತ್ತಾಡಿಕೊಂಡು ನನ್ನ ಬಳಿ ಬರುವುದಕ್ಕಿಂತ ನೇರವಾಗಿ ಬನ್ನಿ. ಜೆಡಿಎಸ್ಗೆ ಬಹುಮತ ಬರುವುದಿಲ್ಲ. ದೆಹಲಿಯಲ್ಲಿ ಮೋದಿ ಸಾಹೇಬ್ರು ಹಾಗೂ ದೇವೇಗೌಡ್ರು ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ನೀವು ಜೆಡಿಎಸ್ಗೆ ವೋಟು ಹಾಕಿದರೂ ಬಿಜೆಪಿಗೆ ಹಾಕಿದಂತೆ…
ಇದು ಖುದ್ದ ಪ್ರೀತಂ ಗೌಡ ವೇದಿಕೆಯಲ್ಲಿ ಹೇಳಿರುವ ಮಾತು. ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. 123 ಸ್ಥಾನ ಗೆಲ್ಲಲಿದ್ದೇವೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ದೇವೇಗೌಡರು ವೇದಿಕೆಗಳಲ್ಲಿ ಕೂಡಾ ಮೋದಿಯವರ ಬಗ್ಗೆ ವೈಯಕ್ತಿಕವಾಗಿ ಒಳ್ಳೆಯ ಮಾತುಗಳನ್ನಾಡಿದರೂ ರಾಜಕೀಯವಾಗಿ ವಿರೋಧಿಸುತ್ತಾರೆ. ಅಲ್ಲಿ ಅಡ್ಜಸ್ಟ್`ಮೆಂಟ್ ಕಾಣಿಸುವುದಿಲ್ಲ.
ಮೋದಿ, ಅಮಿತ್ ಶಾ ಅಟ್ಯಾಕ್ ಮಾಡುತ್ತಿರುವುದು ಕೇವಲ ಕಾಂಗ್ರೆಸ್ ನಾಯಕರ ಮೇಲಲ್ಲ. ಜೆಡಿಎಸ್ ಭದ್ರಕೋಟೆಯನ್ನೂ ಸೀರಿಯಸ್ಸಾಗಿಯೇ ಪರಿಗಣಿಸಿರುವ ಬಿಜೆಪಿ, ಮೋದಿ, ಯೋಗಿ, ಅಮಿತ್ ಶಾರನ್ನು ಕರೆತಂದಿದೆ. ಈಗಾಗಲೇ ಮೋದಿ ಮೈಸೂರು-ಬೆಂಗಳೂರು ಹೈವೇ, ತುಮಕೂರು ಹೆಲಿಕಾಪ್ಟರ್ ಘಟಕ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದು, ಸ್ವತಃ ಬಂದು ಉದ್ಘಾಟನೆ ಮಾಡಿದ್ದಾರೆ. ಈಗ ಮೋದಿಯ ಪ್ರಚಾರ ಶುರುವಾಗುತ್ತಿರುವುದೂ ಕೂಡಾ ಕುಮಾರಸ್ವಾಮಿಯವರ ಅಖಾಡ ಚೆನ್ನಪಟ್ಟಣದಿಂದ. ಹಾಗಾದರೆ ಪ್ರೀತಂ ಗೌಡ ಮಾತಿನ ಅರ್ಥವೇನು..?
ಕೊನೆ ಕೊಸರು : ಹಾಸನ ಕ್ಷೇತ್ರ ಈ ಬಾರಿ ಸೆನ್ಸೇಷನ್ ಸೃಷ್ಟಿಸಿರುವ ಕ್ಷೇತ್ರ. ಭವಾನಿ ರೇವಣ್ಣ ಆಕಾಂಕ್ಷೆ ವ್ಯಕ್ತಪಡಿಸಿ ಸುದ್ದಿಯಾಗಿದ್ದ ಹಾಸನ, ನಂತರ ದೇವೇಗೌಡರ ಕುಟುಂಬದ ಒಗ್ಗಟ್ಟಿಗೆ ಸಾಕ್ಷಿಯಾಯ್ತು. ಈಗ ಪ್ರೀತಂ ಗೌಡ ಅವರೇನೋ ಜೆಡಿಎಸ್ ಮತದಾರರು ಕೂಡಾ ನನಗೇ ವೋಟ್ ಹಾಕಿ ಎಂದಿದ್ದಾರೆ. ಅಕಸ್ಮಾತ್ ಇದು ಉಲ್ಟಾ ಹೊಡೆದು, ಬಿಜೆಪಿ ಮತದಾರರೆಲ್ಲ ಜೆಡಿಎಸ್`ಗೆ ವೋಟು ಹಾಕಿಬಿಟ್ಟರೆ.. ಸುಮ್ನೆ ತಮಾಷೆಗೆ ಅಂದ್ಕಳಿ..



