ಪ್ರಸ್ತುತ ರಾಜಕೀಯದಲ್ಲಿ ಯಾವ ಕ್ಷೇತ್ರವೂ ಯಾವುದೇ ಒಂದು ಪಕ್ಷದ ಭದ್ರಕೋಟೆ ಎನ್ನುವುದಕ್ಕೆ ಸಾಧ್ಯವಿಲ್ಲ. ಆದರೂ.. ಕೆಲವೊಂದು ಕ್ಷೇತ್ರಗಳು ಆ ರೀತಿಯ ಹಣೆಪಟ್ಟಿ ಕಟ್ಟಿಕೊಂಡಿರ್ತವೆ. ಅಂತಹ ಕ್ಷೇತ್ರಗಳಲ್ಲಿ ಒಂದು ಬೆಂಗಳೂರು ಗ್ರಾಮಾಂತರ. ಅದು ಡಿಕೆ ಬ್ರದರ್ಸ್ ಭದ್ರಕೋಟೆ ಎನ್ನುವುದು ಕೂಡಾ. ಏಕೆಂದರೆ.. ಕಳೆದ ಬಾರಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸೋತಾಗ ಗೆದ್ದುಕೊಂಡಿದ್ದ ಏಕೈಕ ಕ್ಷೇತ್ರ ಬೆಂಗಳೂರು ಗ್ರಾಮಾಂತರ.
ಅಂತಹ..ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಬಿಜೆಪಿ ಅಭ್ಯರ್ಥಿ. ದೇವೇಗೌಡರ ಅಳಿಯ. ಅಂತಹ ಕ್ಷೇತ್ರದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ ಮಾಡಿದ್ಧಾರೆ. ತೆರೆದ ವಾಹನದಲ್ಲಿ ಅಮಿತ್ ಶಾ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ, ಬೆಂಗಳೂರು ಗ್ರಾಮಂತರ ಅಭ್ಯರ್ಥಿ ಸಿಎನ್ ಮಂಜುನಾಥ್ ಮೊದಲ ಸಾಲಿನಲ್ಲಿ ನಿಂತಿದ್ದರೆ, ಮತ್ತೊಂದು ಕಡೆ ನಿಖಿಲ್ ಕುಮಾರಸ್ವಾಮಿ, ಸಿಪಿ ಯೋಗೇಶ್ವರ್, ಅಶ್ವತ್ ನಾರಾಯಣ್ ಅವರಂತಹ ನಾಯಕರಿದ್ದರು.
ರೋಡ್ ಶೋನಲ್ಲಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ್ದಾರೆ. ವಂದೇ ಮಾತಾರಂ, ಭಾರತ್ ಮಾತಾ ಕಿ ಜೈ ಘೋಷಣೆಗಳು ಮೊಳಗಿದವು. ಬೆಂಗಳೂರಿನಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಕ್ಷೇತ್ರಗಳ ಪ್ರಮುಖರ ಜೊತೆ ಪ್ರತ್ಯೇಕವಾದ ಸಭೆ ನಡೆಸಿ ಚನ್ನಪಟ್ಟಣಕ್ಕೆ ಆಗಮಿಸಿದ ಅಮಿತ್ ಶಾ, ಬೃಹತ್ ರೋಡ್ ಶೋ ಮೂಲಕ ಮತಭೇಟೆ ಆರಂಭಿಸಿದ್ದಾರೆ. ಬೆಂಗಳೂರು ಗ್ರಾಮಂತರ ಕ್ಷೇತ್ರ ಡಿಕೆಶಿ ಭದ್ರಕೋಟೆ ಎಂದೇ ಬಿಂಬಿತವಾಗಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವ ಏಕೈಕ ಕ್ಷೇತ್ರ ಕೂಡ ಇದಾಗಿದೆ. ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಈ ಬಾರಿಯೂ ಸ್ಪರ್ಧಿಸುತ್ತಿದ್ದು, ಬಿಜೆಪಿ ದೇಶದಲ್ಲೇ ಜನಪ್ರೀಯತೆ ಹೊಂದಿರುವ ವೈದ್ಯ ಡಾ. ಸಿಎನ್ ಮಂಜುನಾಥ್ ಕಣಕ್ಕಿಳಿಸಿದೆ. ಬೆಂಗಳೂರು ಗ್ರಾಮಂತರದಿಂದಲೇ ಅಮಿತ್ ಶಾ ಕರ್ನಾಟದ ಪ್ರಚಾರ ಆರಂಭಿಸಿದ್ದಾರೆ.
ಕರ್ನಾಟಕದಲ್ಲಿ ಅರಮನೆ ಮೈದಾನದಲ್ಲಿ ಮಾತನಾಡಿದ ಅಮಿತ್ ಶಾ ಪ್ರಧಾನಿ ಮೋದಿ ಕಳೆದ 10 ವರ್ಷಗಳಿಂದ ಆಡಳಿತ ಮಾಡಿದರೂ ಒಂದೇ ಒಂದು ಭ್ರಷ್ಟಾಚಾರ ಆರೋಪವಿಲ್ಲ. ಆದರೆ. ಇಂಡಿಯಾ ಒಕ್ಕೂಟದಲ್ಲಿರುವವರೆಲ್ಲರೂ ಭ್ರಷ್ಟಾಚಾರಿಗಳು. ಅದರಲ್ಲಿಯೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಭ್ರಷ್ಟಾಚಾರಿಗಳೆಂದರೆ ಅಚ್ಚುಮೆಚ್ಚು ಎಂದು ಟೀಕಿಸಿದ್ಧಾರೆ.
ಕರ್ನಾಟಕದಿಂದ 2019ರಲ್ಲಿ ಶೇ.51 ಪರ್ಸೆಂಟ್ ವೋಟ್ ಕೊಟ್ಟು 27 ಸೀಟ್ ನಮಗೆ ಕೊಟ್ಟಿದ್ದೀರಿ. ಆದರೆ ಈ ಬಾರಿ ಶೇ.70% ವೋಟ್ ಕೊಟ್ಟು 28ಕ್ಕೆ 28 ಸೀಟ್ ಕೊಡಬೇಕು. ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಈ ಗುರಿ ಮುಟ್ಟೋಣ ಎಂದು ಕರೆ ನೀಡಿದ್ಧಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೋಡಿ ರಾಜ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಲಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಇನ್ನು ಅಮಿತ್ ಶಾ ನಾನು ಕರ್ನಾಟಕದ ಜನರಿಗೆ ಮನವಿ ಮಾಡಲು ಬಂದಿದ್ದೇನೆ. ಕರ್ನಾಟಕದ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ- ಜೆಡಿಎಸ್ ಖಾತೆಗೆ ನೀಡಿ. ತೆನೆ ಹೊತ್ತ ಮಹಿಳೆ ಹಾಗೂ ಕಮಲಕ್ಕೆ ವೋಟ್ ನೀಡಿದರೆ ನೀವು ಮೋದಿಗೆ ಶಕ್ತಿ ನೀಡಿದಂತೆ. ಈ ಬಾರಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ಗುರಿ ಇದೆ. ಇನ್ನು ಡಾ.ಸಿ.ಎನ್ ಮಂಜುನಾಥ ಅವರು 5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅತ್ತ ಉತ್ತರಾಖಂಡದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಡಿಕೆ ಸುರೇಶ್ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದ್ಧಾರೆ. ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಸೂಕ್ತ ಅನುದಾನ ನೀಡದೇ ಹೋದಲ್ಲಿ ನಾವು ಪ್ರತ್ಯೇಕ ದೇಶ ಹೋರಾಟ ಆರಂಭಿಸಬೇಕಾಗುತ್ತದೆ ಎಂಬ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿರುದ್ಧ ಕಿಡಿ ಕಾರಿರುವ ಮೋದಿ ಇಂಥ ಹೇಳಿಕೆ ನೀಡಿದವರನ್ನು ಶಿಕ್ಷಿಸುವ ಬದಲು ಅವರಿಗೆ ಲೋಕಸಭಾ ಟಿಕೆಟ್ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಟೀಕಿಸಿದ್ಧಾರೆ.
ಇತ್ತೀಚೆಗೆ ಕಾಂಗ್ರೆಸ್‌ನ ದೊಡ್ಡ ನಾಯಕರೊಬ್ಬರು, ದಕ್ಷಿಣ ಭಾರತವನ್ನು ದೇಶದಿಂದ ಬೇರ್ಪಡಿಸುವ ಮತ್ತು ವಿಭಜನೆಯ ಮಾತುಗಳನ್ನು ಆಡಿದ್ದರು. ಅವರನ್ನು ಶಿಕ್ಷಿಸುವ ಬದಲು, ಪಕ್ಷ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ’ ಎಂದು ಹೆಸರು ಹೇಳದೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರುದ್ಧಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಕಳೆದ ಫೆಬ್ರುವರಿಯಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಿದ್ದ ಮೋದಿ, ‘ದೇಶವನ್ನು ಒಂದುಗೂಡಿಸುವ ಮಾತಿರಲಿ, ಕೆಲ ಕಾಂಗ್ರೆಸ್ ನಾಯಕರು ದೇಶ ವಿಭಜನೆ ಮಾತುಗಳನ್ನು ಆಡುತ್ತಿದ್ದಾರೆ. ದೇಶವನ್ನು ತುಂಡು ತುಂಡು ಮಾಡುವುದಷ್ಟೇ ಅವರ ಗುರಿ. ಈಗಾಗಲೇ ಮಾಡಿರುವ ವಿಭಜನೆ ಅವರಿಗೆ ಸಾಕಾಗಿಲ್ಲ. ಹೀಗಾಗಿ ಹೊಸದಾಗಿ ದೇಶ ವಿಭಜನೆಯ ಮಾತುಗಳನ್ನು ಆಡುತ್ತಾರೆ. ಇಂಥದ್ದೆಲ್ಲಾ ಇನ್ನೆಷ್ಟು ದಿನ ನಡೆಯಬೇಕು’ ಎಂದು ಹೆಸರು ಹೇಳದೆಯೇ ಡಿ.ಕೆ.ಸುರೇಶ್ ವಿರುದ್ಧ ಕಿಡಿಕಾರಿದ್ದರು.



