ರಾಜ್ಯದಲ್ಲಿ ಈಗ ಅನ್ನಭಾಗ್ಯದ್ದೇ ಸುದ್ದಿ. ರಾಜ್ಯ ಸರ್ಕಾರ ಈಗ 10 ಕೆಜಿ ಅಕ್ಕಿ ಕೊಡುತ್ತಿಲ್ಲ. 10 ಕೆಜಿ ಅಕ್ಕಿ ಕೊಡುವುದಕ್ಕೆ ಆದ ಬೆಳವಣಿಗೆಗಳೆಲ್ಲವನ್ನೂ ರಾಜ್ಯದ ಜನತೆ ನೋಡಿದ್ದಾರೆ. ಜುಲೈ 1ರಿಂದ ಜಾರಿ ಮಾಡುತ್ತೇವೆ ಎಂದು ಹೇಳಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ ಕೇಂದ್ರ ಸರ್ಕಾರದಿಂದ ಬರುವ 5 ಕೆಜಿ ಅಕ್ಕಿಯ ಜೊತೆ ರಾಜ್ಯ ಸರ್ಕಾರದ ವತಿಯಿಂದ ಕೆಜಿ ಅಕ್ಕಿಗೆ 34 ರೂ.ನಂತೆ 170 ರೂ. ನೀಡಲು ನಿರ್ಧರಿಸಿದೆ.
ಅಂದರೆ ಒಂದು ಬಿಪಿಎಲ್ ಕಾರ್ಡಿನಲ್ಲಿ ಇಬ್ಬರು ಸದಸ್ಯರಿದ್ದರೆ 340 ರೂ. + 10 ಕೆಜಿ ಅಕ್ಕಿ, ಐವರು ಸದಸ್ಯರಿದ್ದರೆ 25 ಕೆಜಿ ಅಕ್ಕಿ + 750 ರೂ. ಸಿಗಲಿದೆ. ಇಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವುದು ಕೇಂದ್ರ ಸರ್ಕಾರದ ಅಕ್ಕಿ ಮಾತ್ರ. ಸಂಪೂರ್ಣ ಉಚಿತವಾಗಿಯೇ ಸಿಗಲಿದೆ. ಈ ಅಕ್ಕಿಗೆ ರಾಜ್ಯ ಸರ್ಕಾರ ಹಣ ಕೊಡುವುದಿಲ್ಲ. ಬೇರೆ ಕಡೆ ಸಿಗದ ಅಕ್ಕಿಗೆ ಬದಲಾಗಿ, ಕೆಜಿ ಅಕ್ಕಿಗೆ 34 ರೂ.ನಂತೆ ಹಣ ನೀಡಲು ನಿರ್ಧಾರ ಮಾಡಲಾಗಿದೆ.
ಕೇಂದ್ರದ ಟೆಕ್ನಿಕಲ್ ಕಾರಣ ಏನು..?
ಕೇಂದ್ರ ಸರ್ಕಾರದ ಎಫ್‍ಸಿಐ ಅಧಿಕಾರಿಯೊಬ್ಬರು ಅಕ್ಕಿ ಸ್ಟಾಕ್ ಇದೆ. ಕೊಡಲಿದ್ದೇವೆ ಎಂದು ಉತ್ತರ ಕೊಟ್ಟಿದ್ದರು. ಮರುದಿನವೇ ಹಾಗೆ ಕೊಡುವುದಕ್ಕೆ ಬರುವುದಿಲ್ಲ ಎಂಬ ಲಿಖಿತ ಉತ್ತರವೂ ಬಂದಿತ್ತು. ಇದಕ್ಕೇನು ಕಾರಣ ಎಂದು ಹುಡುಕಹೋದರೆ ಟೆಕ್ನಿಕಲ್ ರೀಸನ್`ಗಳು ಎದುರಾಗುತ್ತವೆ. ಮೊದಲನೆಯದ್ದು ಎಫ್‍ಸಿಎ ನೀತಿಗಳು ಬದಲಾಗಿವೆ. ವರ್ಷಗಳ ಹಿಂದೆಯೇ ರೂಲ್ಸ್ ಬದಲಾಗಿದೆ. ಆ ರೂಲ್ಸ್ ಪ್ರಕಾರವೇ ಸ್ಟಾಕ್ ಇರುವ ಅಕ್ಕಿಯನ್ನು ಓಪನ್ ಮಾರ್ಕೆಟ್ಟಿನಲ್ಲಿ ಟೆಂಡರ್ ಕರೆದು ನೀಡಬೇಕು. ರಾಜ್ಯಗಳಿಗೆ ತುರ್ತು ಪರಿಸ್ಥಿತಿಗೆ ಮಾತ್ರವೇ ಅಕ್ಕಿ ನೀಡಬೇಕು. ಬರ, ಪ್ರವಾಹದಂತಹ ಕಷ್ಟದ ಸಂದರ್ಭದಲ್ಲಿ ಅಕ್ಕಿ ಬಿಡುಗಡೆಗೆ ಅವಕಾಶ ಇದೆ. ಉಳಿದಂತೆ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ 80 ಕೋಟಿ ಜನರಿಗೆ ಉಚಿತ ಅಕ್ಕಿ ನೀಡುತ್ತಿದೆ. ಆ ನಿಯಮದ ಪ್ರಕಾರವೇ ಈಗ 5 ಕೆಜಿ ಅಕ್ಕಿ ಸಿಗುತ್ತಿರುವುದು. ಎರಡನೆಯ ಸಮಸ್ಯೆ, ಹಣ ಕೊಡುತ್ತೇವೆ, ಕೊಡುವುದಕ್ಕೇನು ಅಡ್ಡಿ ಎಂಬ ಪ್ರಶ್ನೆ ಎತ್ತಿದೆ ಕಾಂಗ್ರೆಸ್. ದೇಶದ ಎಲ್ಲ ರಾಜ್ಯಗಳೂ ಕರ್ನಾಟಕ ಕಾಂಗ್ರೆಸ್ಸಿನಂತೆಯೇ ಹಣ ಕೊಡುತ್ತೇವೆ, ಅಕ್ಕಿ ಕೊಡಿ ಎಂದರೆ ನಿಭಾಯಿಸುವುದು ಸಾಧ್ಯವಿಲ್ಲ.
ಕರ್ನಾಟಕಕ್ಕೆ ದುಡ್ಡು ಪಡೆದು ಅಕ್ಕಿ ಕೊಟ್ಟ ನಂತರ, ಬೇರೆ ರಾಜ್ಯಗಳೂ ಡಿಮ್ಯಾಂಡ್ ಇಟ್ಟರೆ ಸೃಷ್ಟಿಯಾಗುವ ಪರಿಸ್ಥಿತಿ ಊಹೆಗೂ ನಿಲುಕದ್ದು. ಹಾಗೆಂದು ಇದು ಅಂತಿಮವಾ.. ಇಲ್ಲ. ಇದು ಮಳೆಗಾಲದ ಆರಂಭ. ಇನ್ನೊಂದೆರಡು ತಿಂಗಳಲ್ಲಿ ಅಕ್ಕಿಯ ಲಭ್ಯತೆ ಹೆಚ್ಚಾದಾಗ ಸಹಜವಾಗಿಯೇ ಕೇಂದ್ರ ಸರ್ಕಾರ ಅಕ್ಕಿ ರಿಲೀಸ್ ಮಾಡುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ, ಅಷ್ಟೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರೂ ಕೂಡಾ ಇದೇ ಮಾತು ಹೇಳಿದ್ದಾರೆ.
ಅಕ್ಕಿ ಹಿಂದಿನ ರಾಜಕೀಯ ಏನು?
ಈಗ ಎರಡೂ ಪಾರ್ಟಿಗಳು ರಾಜಕೀಯ ಮಾಡುತ್ತಿವೆ. ಅಕ್ಕಿ ಕೊಡುವುದಕ್ಕೆ ಆಗದಿದ್ದರೆ ದುಡ್ಡು ಕೊಡಿ ಎಂದಿದ್ದ ಬಿಜೆಪಿ, ಈಗ ದುಡ್ಡು ಕೊಟ್ಟರೆ ದುಡ್ಡನ್ನು ತಿನ್ನೋಕಾಗುತ್ತಾ? 34 ರೂ.ಗೆ ಒಳ್ಳೆಯ ಅಕ್ಕಿ ಸಿಗುತ್ತಾ ಎನ್ನುತ್ತಿದೆ. ಅಕ್ಕಿ ಕೊಡ್ತೀವ್ರೀ, ದುಡ್ಡು ಕೊಡಲ್ಲ. ದುಡ್ಡು ತಿನ್ನೋಕಾಗುತ್ತಾ ಎಂದಿದ್ದ ಸಿದ್ದರಾಮಯ್ಯ, ಈಗ ಉಲ್ಟಾ ಹೊಡೆದು ಐಡಿಯಾ ಕೊಟ್ಟವರೂ ನೀವೇ ಅಲ್ವಾ ಎಂದು ಬಿಜೆಪಿಗೇ ದೂರುತ್ತಿದ್ದಾರೆ. ಏನೆಂದು ಅರ್ಥವಾಗದ ಸ್ಥಿತಿಯಲ್ಲಿರುವುದು ರಾಜ್ಯದ ಜನ. ಇದರ ಹಿಂದೆ ದೂರದ ಉದ್ದೇಶದ ಲೆಕ್ಕಾಚಾರವೂ ಇದೆ. ಇದೇ ಸ್ಥಿತಿಯಲ್ಲಿ ಮುಂದುವರೆಯುವುದು. ರಾಜ್ಯದ ಜನತೆಯ ರಿಯಾಕ್ಷನ್ ಗಮನಿಸುವುದು. ಹಾಗೊಂದು ವೇಳೆ ಜನರ ಆಕ್ರೋಶ ಕೇಂದ್ರದ ವಿರುದ್ಧವೇ ಇದ್ದರೆ, ದುಡ್ಡು ಕೊಟ್ಟು ಆಕ್ರೋಶವನ್ನು ಗಟ್ಟಿ ಮಾಡುವುದು. ಅಕಸ್ಮಾತ್ ತಿರುಗಿಬಿದ್ದು ರಾಜ್ಯದ ವಿರುದ್ಧವೇ ಜನಾಕ್ರೋಶ ರೂಪುಗೊಂಡರೆ ಅಕ್ಕಿಯನ್ನು ಹೇಗಾದರೂ ಹುಡುಕಿ 10 ಕೆಜಿ ಕೊಡುವುದು ಈಗಿನ ಲೆಕ್ಕಾಚಾರ. ಸದ್ಯಕ್ಕಂತೂ ಮೋದಿ ಅಕ್ಕಿ ಮತ್ತು ಸಿದ್ದರಾಮಯ್ಯ ದುಡ್ಡು ಗ್ಯಾರಂಟಿ.



