ಲಿಂಗಾಯತರೆಂದರೆ ಭ್ರಷ್ಟರು ಎಂಬ ಸಿದ್ದರಾಮಯ್ಯ ಹೇಳಿಕೆ, ಮೋದಿ ಎಂದರೆ ವಿಷದ ಹಾವು, ನೆಕ್ಕಿದರೆ ಸಾವು ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ.. ಇದ್ದಕ್ಕಿದ್ದಂತೆ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ಕೊಟ್ಟಿದೆ. ಸುಲಲಿತವಾಗಿ ಸಾಗುತ್ತಿದ್ದ ಪ್ರಚಾರ ಕಾರ್ಯಕ್ಕೆ ಪಕ್ಷದ ಮೇರು ನಾಯಕರು ಆಯಾಚಿತವಾಗಿ ನೀಡುವ ಕೆಲ ಹೇಳಿಕೆಗಳೇ ಕಂಟಕವಾಗುತ್ತಿರುವುದು ಕಾಂಗ್ರೆಸ್ ವಲಯದಲ್ಲಿ ತಳಮಳ ಉಂಟುಮಾಡಿದೆ. ಲಿಂಗಾಯತ ಸಿಎಂಗಳು ಭ್ರಷ್ಟಾಚಾರಿಗಳು ಎಂದು ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯ ಪರಿಣಾಮ ನೆನಪಿನಿಂದ ಮರೆಯಾಗುವ ಮುನ್ನವೇ ಪಕ್ಷದ ಮತ್ತೊಬ್ಬ ಮೇರು ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡುವ ಭರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಷದ ಹಾವು ಎಂದು ಹೇಳಿರುವುದು ವಿವಾದ ಹುಟ್ಟು ಹಾಕಿದೆ.
ಸಿದ್ದರಾಮಯ್ಯ ಅವರಿಗೆ ತಾವು ನೀಡಿದ್ದ ಹೇಳಿಕೆ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ ಅವರು, ತಾವು ಲಿಂಗಾಯತ ಸಿಎಂಗಳು ಭ್ರಷ್ಟಾಚಾರಿಗಳು ಎಂದು ಹೇಳಿಕೆ ನೀಡಿಲ್ಲ. ಅದು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಎಂದು ಸ್ಪಷ್ಟನೆ ನೀಡಬೇಕಾಯಿತು. ಹೀಗೆ ಸಿದ್ದರಾಮಯ್ಯ ಹೇಳಿಕೆಯಿಂದ ಕಾಂಗ್ರೆಸ್ ಇನ್ನೂ ಹೊರಬರಲಾಗದ ಸಂದರ್ಭದಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರನ್ನು ವಿಷ ಸರ್ಪ ಎಂದಿದ್ದು ಬಿಜೆಪಿ ತಂತ್ರಗಾರರಿಗೆ ಬಯಸದೇ ಬಂದ ಭಾಗ್ಯವಾಗಿ ಪರಿಣಮಿಸಿದೆ.
ಅಂದಹಾಗೆ ಇದು ಮಲ್ಲಿಕಾರ್ಜುನ ಖರ್ಗೆಯವರೇ ನೀಡಿದ್ದ ಖಡಕ್ ಆದೇಶ. ಖರ್ಗೆಯವರು ಚುನಾವಣೆ ಆರಂಭಕ್ಕೆ ಮೊದಲು ಒಂದು ಸೂಚನೆ ನೀಡಿದ್ದರು. ವಿಶೇಷವಾಗಿ ಸಿದ್ದರಾಮಯ್ಯ ಅವರಿಗೆ ನೀಡಿದ್ದ ಸೂಚನೆ ಅದಾಗಿತ್ತು. ಹೀಗೆಲ್ಲ ಮಾಡಿದ್ರೆ ಚುನಾವಣೆ ಮಡೋಕಾಯ್ತದಾ ಎಂದು ಕೇಳಿದ್ದವರಿಗೆ ಅಕ್ಷರಶಃ ಎಐಸಿಸಿ ಅಧ್ಯಕ್ಷ ಎಂಬ ಹುದ್ದೆಯನ್ನು ಬಳಸಿಯೇ ಬಾಯಿ ಮುಚ್ಚಿಸಿದ್ದರು ಖರ್ಗೆ.
ಇಷ್ಟಕ್ಕೂ ಅವರು ನೀಡಿದ್ದ ಸೂಚನೆಗಳಿಷ್ಟೆ..
1. ಯಾವುದೇ ಕಾರಣಕ್ಕೂ ವೈಯಕ್ತಿಕ ಮಟ್ಟದ ಟೀಕೆಗಳನ್ನು ಮಾಡಬಾರದು.
2. ಯಾವುದೇ ಸಮುದಾಯಕ್ಕೆ ಬೇಸರವಾಗುವಂತೆ ನಡೆದುಕೊಳ್ಳಬಾರದು
3. ರಾಷ್ಟ್ರೀಯ ವಿಷಯಗಳನ್ನು ಬಿಜೆಪಿ ನಾಯಕರು ಪ್ರಸ್ತಾಪಿಸಿದರೆ ಅದಕ್ಕೆ ಪ್ರತಿಕ್ರಿಯಿಸಬಾರದು
4. ಧರ್ಮದ ವಿಷಯಗಳಲ್ಲಿ ಸೂಚಿಸಿದ ನಾಯಕರನ್ನು ಬಿಟ್ಟು, ಎಲ್ಲರೂ ಮಾತನಾಡುವಂತಿಲ್ಲ
5. ರಾಜ್ಯದ ಬಿಜೆಪಿ ಸರ್ಕಾರದ ಆಡಳಿತ ವೈಖರಿ, ಅದರ ಲೋಪಗಳು ಹಾಗೂ ಭ್ರಷ್ಟಾಚಾರ ಈ ವಿಷಯವನ್ನು ಮಾತ್ರ ಮುಂದಿಟ್ಟುಕೊಂಡು ಪ್ರಚಾರ ಕಾರ್ಯ ನಡೆಸಬೇಕು
ಆದರೆ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಬೊಮ್ಮಾಯಿಯವರನ್ನು ಭ್ರಷ್ಟ ಎಂದು ಟೀಕಿಸಲು ಹೋಗಿ ಲಿಂಗಾಯತರೆಲ್ಲರೂ ಭ್ರಷ್ಟರೇ ಎಂದುಬಿಟ್ಟರು. ಈಗಲೂ ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲಿ.. ಅದಕ್ಕೆ ಸಮರ್ಥನೆ ಕೊಡುತ್ತಿದ್ದಾರೆ. ವೈಯಕ್ತಿಕವಾಗಿ ಲಿಂಗಾಯತರು ಹೇಳುತ್ತಿರುವುದಿಷ್ಟೇ, ನಿಮ್ಮ ನಿಮ್ಮ ರಾಜಕೀಯ ಹೋರಾಟಕ್ಕಾಗಿ ನಮ್ಮ ಸಮುದಾಯವನ್ನೇ ಭ್ರಷ್ಟರು ಎನ್ನಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಕ್ಷಮೆ ಕೇಳಲೇಬೇಕು ಎನ್ನುವ ಪಟ್ಟು ಹಿಡಿದಾಗಿದೆ. ಈಗ ವಿಷದ ಹಾವು ಹೇಳಿಕೆ.
ಅಖಂಡ ಶ್ರೀನಿವಾಸ ಮೂತಿಗೆ ಟಿಕೆಟ್ ಕೊಡದಿದ್ದರೂ ದಲಿತ ಸಂಘಟನೆ, ಹೋರಾಟಗಾರರು ಸುಮ್ಮನಿದ್ದರು. ಮೀಸಲಾತಿ ನಷ್ಟವಾದರೂ ಮುಸ್ಲಿಮರೂ ಸುಮ್ಮನಿದ್ದರು. ಆದರೆ ಲಿಂಗಾಯತರು ಹಾಗಲ್ಲ. ಮೋದಿ ಬೆಂಬಲಿಗರೂ ಹಾಗಲ್ಲ. ಕಾಂಗ್ರೆಸ್ಸಿಗೆ ಅದರಲ್ಲಿಯೂ ಡಿಕೆ ಶಿವಕುಮಾರ್ ಅವರಿಗೆ ಟೆನ್ಷನ್ ತಂದುಕೊಟ್ಟಿರುವುದೇ ಅದು.



