ನಾವೇ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಬಿಜೆಪಿಯೂ ನಮ್ಮದೇ ಸರ್ಕಾರ ಎನ್ನುತ್ತಿದೆ. ಜೆಡಿಎಸ್ ಕೂಡಾ ಸರಳ ಬಹುಮತ ನಮಗೇ ಸಿಗಲಿದೆ ಎಂದು ಸಾರಿ ಸಾರಿ ಹೇಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ತಿರುತಿರುಗಿ ಬರುತ್ತಿದ್ದಾರೆ. ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಧರ್ಮೇಂದ್ರ ಪ್ರದಾನ್ ಎಲ್ಲರೂ ಪದೇ ಪದೇ ಕರ್ನಾಟಕಕ್ಕೆ ಎಡತಾಕುತ್ತಿದ್ದಾರೆ. ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ವಿಜಯೇಂದ್ರ, ಸಿಟಿ ರವಿ, ಈಶ್ವರಪ್ಪ, ಬಿಎಲ್ ಸಂತೋಷ್ ಎಲ್ಲರೂ ಬ್ಯುಸಿ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಾಲಿಗೆ ಚಕ್ರಕಟ್ಟಿಕೊಂಡು ತಿರುಗುತ್ತಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಎಲೆಕ್ಷನ್ ತಾರಕಕ್ಕೇರುತ್ತಿದ್ದಂತೆ ಮತ್ತೆ ಬರಲಿದ್ದಾರೆ. ಜೆಡಿಎಸ್ನಲ್ಲಿ ಕುಮಾರಸ್ವಾಮಿ ರಾಜ್ಯವನ್ನೆಲ್ಲ ಸುತ್ತುತ್ತಿದ್ದರೆ, ರೇವಣ್ಣ ಕುಟುಂಬ ಹಾಸನಕ್ಕೆ ಸೀಮಿತವಾಗಿದೆ. ಇದೆಲ್ಲದರ ಮಧ್ಯೆ ಒಂದೊಂದು ಸಮೀಕ್ಷೆಗಳೂ ಒಂದೊಂದು ಫಲಿತಾಂಶ ನೀಡುತ್ತಿವೆ. ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿಗೆ ದೊಡ್ಡ ಪಕ್ಷದ ಸ್ಥಾನ ಸಿಕ್ಕಿದ್ದರೆ, ಇನ್ನೂ ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ನಂ.1. ಜೆಡಿಎಸ್ಗೆ 3ನೇ ಸ್ಥಾನ ನೀಡಲಾಗಿದೆ. ಇದರ ನಡುವೆಯೇ ಕಾಂಗ್ರೆಸ್ ನಡೆಸಿರುವ ಆಂತರಿಕ ಸಮೀಕ್ಷೆ ಬಯಲಾಗಿದೆ.


ಹಳೇ ಮೈಸೂರು ಕರ್ನಾಟಕ
ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ 10 ರಿಂದ 13 ಸ್ಥಾನಗಳು ಸಿಕ್ಕರೆ, ಕಾಂಗ್ರೆಸ್‌ಗೆ 21-24 ಹಾಗೂ ಜೆಡಿಎಸ್ಗೆ 14- 17 ಸ್ಥಾನಗಳು ಸಿಗಬಹುದು ಎಂದಿದೆ ಸಮೀಕ್ಷೆ. ಬೆಂಗಳೂರಿನಲ್ಲಿ ಬಿಜೆಪಿಗೆ 11 ರಿಂದ 14, ಕಾಂಗ್ರೆಸ್ಗೆ 19-23 ಹಾಗೂ ಜೆಡಿಎಸ್ಗೆ 1 – 4 ಸ್ಥಾನಗಳು ಸಿಗಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಕಲ್ಯಾಣ ಕರ್ನಾಟಕ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ 9- 13, ಕಾಂಗ್ರೆಸ್ಗೆ 24- 27 ಹಾಗೂ ಜೆಡಿಎಸ್ಗೆ 2 ಸ್ಥಾನಗಳು ದೊರಕಬಹುದು ಎಂದು ಅಂದಾಜಿಸಿದೆ. ಅದೇ ರೀತಿಯಲ್ಲಿ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ 27- 30, ಕಾಂಗ್ರೆಸ್ಗೆ 19- 22 ಹಾಗೂ ಜೆಡಿಎಸ್ಗೆ 1 ಸ್ಥಾನ ಸಿಗಬಹುದು ಎನ್ನುವುದು ಕುನ್ನಿಗೋಲು ಸಮೀಕ್ಷೆಯ ಅಂದಾಜು.

ಕರಾವಳಿ ಕರ್ನಾಟಕ
ಕರಾವಳಿ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ 14- 17, ಕಾಂಗ್ರೆಸ್ಗೆ 7- 10 ಹಾಗೂ ಜೆಡಿಎಸ್ಗೆ 1 ಸ್ಥಾನ ದೊರಕಬಹುದು ಎಂದಿದೆ. ಹಾಗೂ ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ 10 ರಿಂದ 13, ಕಾಂಗ್ರೆಸ್ಗೆ 7- 10 ಹಾಗೂ ಜೆಡಿಎಸ್ಗೆ 1 ಸ್ಥಾನ ಸಿಗಲಿದೆ ಎಂದು ಅಂದಾಜಿಸಿದೆ.

ಚುನಾವಣೆಯಲ್ಲಿ ಬಿಜೆಪಿಗೆ ಶೇ 33 ರಿಂದ 36 ರಷ್ಟು ಮತಗಳು ಚಲಾವಣೆ ಆದರೆ ಕಾಂಗ್ರೆಸ್ಗೆ ಶೇ 39 ರಿಂದ 42 ರಷ್ಟು ಪ್ರಮಾಣದಲ್ಲಿ ಮತ ಸಿಗಬಹುದು. ಇನ್ನು ಜೆಡಿಎಸ್ಗೆ ಶೇ 15 ರಿಂದ 18 ರಷ್ಟು ಮತ ಸಿಕ್ಕರೆ ಹೆಚ್ಚು. ಈ ಸಮೀಕ್ಷೆ ಪ್ರಕಾರ 2023ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸುಲಭವಾಗಿ ಮ್ಯಾಜಿಕ್ ನಂಬರ್ 113 ತಲುಪಲಿದ್ದು, ಬಿಜೆಪಿ ಪ್ರತಿಪಕ್ಷ ಸ್ಥಾನಕ್ಕೆ ಹೋಗಲಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ನಾವು 139ರಿಂದ 140 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಜೆಡಿಎಸ್ 20ಕ್ಕೂ ಕಡಿಮೆ ಸ್ಥಾನ ಗಳಿಸಬಹುದು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇನ್ನೂ ಸಮೀಕ್ಷೆಗಳು ಹೊರಬೀಳಲಿವೆ. ಕುನ್ನಗೋಲು ಸಮಿತಿ ವರದಿಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಲೋಪದೋಷಗಳನ್ನು ಸರಿಪಡಿಸಿಕೊಂಡು ಎಲೆಕ್ಷನ್ ಗೆಲ್ಲಲು ಸಿದ್ಧತೆ ನಡೆಸಿದೆ.



