ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರಿದ್ದು, ಶಿವಣ್ಣ ಕಾಂಗ್ರೆಸ್ ಸದಸ್ಯರಲ್ಲೇ ಇದ್ದರೂ, ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದು ಮಧು ಬಂಗಾರಪ್ಪ ಅವರಿಂದಾಗಿಯೇ. ಬಂಗಾರಪ್ಪ ಕುಟುಂಬದ ಕೆಲವು ಒಳಗುಟ್ಟುಗಳು ಏನಾಗಿವೆಯೋ ಗೊತ್ತಿಲ್ಲ. ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ಗೀತಾ ಮತ್ತು ಶಿವಣ್ಣ ನಿಂತಿರುವುದು ಮಧು ಪರ. ಬಂಗಾರಪ್ಪ ಅವರ ಅಂತ್ಯಕ್ರಿಯೆಯಲ್ಲೂ ದೊಡ್ಡ ರಣರಂಪವೇ ನಡೆದು ಹೋಗಿತ್ತು. ಈಗ ರಾಜಕೀಯ.
ಈ ಬಾರಿ ನಡೆದ ಎಲೆಕ್ಷನ್ನಿನಲ್ಲಿ ಗೀತಾ ಮತ್ತು ಶಿವರಾಜ್ ಕುಮಾರ್ ಇಬ್ಬರೂ ಮಧು ಬಂಗಾರಪ್ಪ ಪರ ಪ್ರಚಾರ ಮಾಡಿದ್ದರು. ಕೇವಲ ಸೊರಬದಲ್ಲಷ್ಟೇ ಅಲ್ಲ, ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದರು. ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲೂ ಅಷ್ಟೆ, ನಿರಂತರ ಪ್ರಚಾರ ಮಾಡಿದ್ದರು. ವಿಶೇಷವೆಂದರೆ ಶಿವಣ್ಣ ಪ್ರಚಾರ ಮಾಡಿದ್ದ ಬಹುತೇಕ ಕ್ಷೇತ್ರಗಳಲ್ಲಿ ಸಕ್ಸಸ್ ಸಿಕ್ಕಿತ್ತು. ಸಿದ್ದರಾಮಯ್ಯನವರೂ ಗೆದ್ದರು. ಸಿಎಂ ಆದರು. ಮಧು ಬಂಗಾರಪ್ಪ ಕೂಡಾ ಗೆದ್ದರು. ಈಗ ಮಿನಿಸ್ಟರ್. ಇಷ್ಟಕ್ಕೂ ಮಧು ಬಂಗಾರಪ್ಪ ಮಿನಿಸ್ಟರ್ ಆಗಿದ್ದರ ಹಿಂದೆ ಇರೋದು ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಅವರಾ..? ಡಿಕೆ ಶಿವಕುಮಾರ್ ಅವರಾ..? ಸಿದ್ದರಾಮಯ್ಯನವರಾ..? ಮೂರೂ ಕೂಡಾ ಹೌದು.
ಡಿಕೆ ಶಿವಕುಮಾರ್ ಋಣದ ಮಾತು
ಡಿಕೆ ಶಿವಕುಮಾರ್ ಅವರಿಗೆ ಮಧು ಅವರನ್ನು ಮಿನಿಸ್ಟರ್ ಮಾಡುವ ಹುಮ್ಮಸ್ಸಿತ್ತು. ಡಿಕೆ ಶಿವಕುಮಾರ್ ಅವರನ್ನು ಪಕ್ಷದಲ್ಲಿ ಬೆಳೆಸಿದ್ದು ಬಂಗಾರಪ್ಪನವರು. ಡಿಕೆ ಮೊದಲಿ ಬಾರಿಗೆ ಮಿನಿಸ್ಟರ್ ಆಗಿದ್ದೇ ಬಂಗಾರಪ್ಪ ಕ್ಯಾಬಿನೆಟ್ಟಿನಲ್ಲಿ. ಜೊತೆಗೆ ಬೆನ್ನು ತಟ್ಟಿ ಬೆಳೆಸಿದ ಬಂಗಾರಪ್ಪ ನನ್ನ ಗುರು ಎಂದು ಹಲವು ವೇದಿಕೆಗಳಲ್ಲಿ ಡಿಕೆ ಹೇಳಿಕೊಂಡಿದ್ದಾರೆ. ಡಿಕೆ ಅವರನ್ನು ಮಂತ್ರಿ ಮಾಡಬೇಕು ಎಂದು ಡಿಕೆ ಪ್ರಯತ್ನ ಪಟ್ಟಿದ್ದರು.
ಸಿದ್ದರಾಮಯ್ಯ ಲೆಕ್ಕಾಚಾರದ ಮಾತು
ಸಂಪುಟಕ್ಕೆ ಸೇರಿಸಿಕೊಳ್ಳೋ ವಿಚಾರದಲ್ಲಿ ಈಡಿಗರ ಕೋಟಾದಲ್ಲಿ ಬಿ.ಕೆ.ಹರಿಪ್ರಸಾದ್ ಅವರ ಹೆಸರೂ ಇತ್ತು. ವಿಧಾನಪರಿಷತ್ ನಾಯಕರೂ ಆಗಿರುವ ಹರಿಪ್ರಸಾದ್ ಅವರು ಸೀನಿಯರ್ ಕೂಡಾ ಹೌದು. ಆದರೆ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಬೇರೆಯೇ ಇತ್ತು. ಶಿವಮೊಗ್ಗ ಯಡಿಯೂರಪ್ಪನವರ ಜಿಲ್ಲೆ. ಅಲ್ಲಿ ಪ್ರಬಲವಾಗಿ ಪಕ್ಷ ಕಟ್ಟಬೇಕು. ಮಧು ಅವರಿನ್ನೂ ಯಂಗ್ ಇದ್ದಾರೆ. ಬಂಗಾರಪ್ಪನವರ ಮಗ. ಈಡಿಗ ಸಮುದಾಯದಲ್ಲಿಯೂ ಅವರಿಗೆ ಒಳ್ಳೆಯ ಹೆಸರಿದೆ. ಅಲ್ಲದೆ ಅವರ ಸೋದರಿ ಗೀತಾ ಮತ್ತು ಬಾವ ಶಿವರಾಜ್ ಕುಮಾರ್ ಪಕ್ಷದ ಪರ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದಾರೆ. ಮಧು ಅವರಿಂದ ಪಕ್ಷಕ್ಕೆ ಇಡೀ ಜಿಲ್ಲೆಯಲ್ಲಿ ಅನೂಕೂಲ ಎಂದು ವಾದಿಸಿದರು. ಇದೆಲ್ಲದರ ಜೊತೆಗೆ ಹರಿಪ್ರಸಾದ್ ಅವರಿಗೆ ಮಿನಿಸ್ಟರ್ ಪೋಸ್ಟ್ ಕೊಡುವುದಕ್ಕೆ ಸಿದ್ದರಾಮಯ್ಯಗೆ ಇಷ್ಟ ಇರಲಿಲ್ಲ ಎನ್ನಲಾಗಿದೆ. ಇದೆಲ್ಲದರ ಎಫೆಕ್ಟ್ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾರೆ.
ಶಿವಣ್ಣ-ಗೀತಾ ಶಿವರಾಜ್ ಕುಮಾರ್ ಲಾಬಿ
ಈ ಬಾರಿ ಶಿವಣ್ಣ, ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದು ಬಹುತೇಕರಿಗೆ ಇಷ್ಟ ಇರಲಿಲ್ಲ. ರಾಜ್ ಮಗನಾಗಿ ಪಕ್ಷದ ಪ್ರಚಾರಕ್ಕೆ ಬರಬಾರದಿತ್ತು ಎಂದಿದ್ದವರೆಷ್ಟೋ ಜನ. ಆದರೆ ನನ್ನ ನಿಲುವೇ ಬೇರೆ ಎಂದು ಹೊರಟ ಶಿವಣ್ಣ, ಪ್ರಚಾರವನ್ನೂ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದೂ ಆಯಿತು. ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಕೂಡಾ. ಅದಾದ ಮೇಲೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮಧು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದರು.
ವರ್ಕೌಟ್ ಆಗಿದ್ದು ಮೂರೂ ಸೂತ್ರ
ಮಧು ಬಂಗಾರಪ್ಪ ಅವರಿಗೆ ಮೂರಕ್ಕೆ ಮೂರೂ ವರ್ಕೌಟ್ ಆಗಿವೆ. ಒಂದು ಕಡೆ ಬಂಗಾರಪ್ಪ ಮಗ, ಈಡಿಗ ಸಮುದಾಯದ ಬಲ ಕೆಲಸ ಮಾಡಿದೆ. ಡಿಕೆ ಶಿವಕುಮಾರ್ ಅವರಿಗೆ ಮಧು ಬಂಗಾರಪ್ಪ ಅವರ ಮೇಲೆ ವಿಶೇಷ ಪ್ರೀತಿ. ಹರಿಪ್ರಸಾದ್ ಮತ್ತು ಮಧು ಬಗ್ಗೆ ತಕ್ಕಡಿ ಹಾಕಿದರೆ, ಡಿಕೆಶಿ ತಕ್ಕಡಿಯಲ್ಲಿ ಮಧು ಅವರ ತೂಕ ಸ್ವಲ್ಪ ಹೆಚ್ಚೇ ತೂಗುತ್ತದೆ. ಡಿಕೆಶಿಯವರಿಗೆ ಅದು ಋಣದ ಮಾತು. ಇನ್ನು ಮುಖ್ಯಮಂತ್ರಿಯೇ ಆಗಿರುವ ಸಿದ್ದರಾಮಯ್ಯ ಅವರಿಗೆ ಮಧು ಬಂಗಾರಪ್ಪ ಮೇಲೆ ಹಾಗೂ ಶಿವಣ್ಣ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ. ಎಲ್ಲವೂ ಏಕಕಾಲಕ್ಕೆ ನಡೆದು, ಈಗ ಮಧು ಬಂಗಾರಪ್ಪ ಮಂತ್ರಿ.



