ಸುಮಾರು ಒಂದೂವರೆ ದಶಕದಿಂದ ಶುರುವಾದ ಕಥೆ ಇದು. ಲಿಂಗಾಯತರೇ ಪ್ರತಿ ಬಾರಿಯ ಚುನಾವಣೆಯಲ್ಲಿ ಚರ್ಚೆಯ ವಸ್ತುವಾಗುತ್ತಿದ್ದಾರೆ. ಇಷ್ಯೂ ಆಗುತ್ತಿದ್ದಾರೆ. ನಿರ್ಣಾಯಕರೂ ಆಗುತ್ತಿದ್ದಾರೆ. ಅದೇ ರೀತಿಯ ಒಗ್ಗಟ್ಟು ನಿಜವಾಗಿಯೂ ಲಿಂಗಾಯತರಲ್ಲಿದೆಯಾ..? ಆ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಆದರೆ ಎಲ್ಲರಿಗೂ ಲಿಂಗಾಯತರು ಬೇಕು. ಲಿಂಗಾಯತರ ಮತಗಳು ಬೇಕು.
ಸುಮ್ಮನೆ ಫ್ಲಾಶ್ ಬ್ಯಾಕ್ ಗಮನಿಸಿ ನೋಡಿ. 20-20 ಸರ್ಕಾರ ಇದ್ದಾಗ ಕುಮಾರಸ್ವಾಮಿ, ಯಡಿಯೂರಪ್ಪನವರಿಗೆ ಸಿಎಂ ಪಟ್ಟ ತಪ್ಪಿಸಿದ್ದು ನೆನಪಾಯ್ತಾ..? ಅದೂವರೆಗೆ ರೈತ ನಾಯಕ, ಹೋರಾಟಗಾರ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಯಡಿಯೂರಪ್ಪ, ಏಕಾಏಕಿ ಲಿಂಗಾಯತ ನಾಯಕರಾಗಿಬಿಟ್ಟರು. ಅಲ್ಲಿಂಧ ಶುರುವಾದ ಕಥೆ ಇದು. ಆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರವನ್ನೂ ಹಿಡಿಯಿತು. ಲಿಂಗಾಯತರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಡೆದಾಡಿದ್ದಷ್ಟೇ ಬಂತು.
ಅದಾದ ನಂತರ ಯಡಿಯೂರಪ್ಪ, ಶ್ರೀರಾಮುಲು ಇಬ್ಬರೂ ಬಿಜೆಪಿ ಬಿಟ್ಟರು. ಹೊಸ ಪಕ್ಷ ಕಟ್ಟಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದೇ ಆಗ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ಗೆದ್ದಿದ್ದಕ್ಕಿಂತಲೂ ಹೆಚ್ಚಾಗಿ ಕೆಜೆಪಿಯಿಂದ ಗೆದ್ದಿದ್ದೇ ಹೆಚ್ಚು. ಅರ್ಥಾತ್, 36 ಕ್ಷೇತ್ರಗಳಲ್ಲಿ ನಂ.2 ಆಗಿದ್ದುದುದು ಕೆಜೆಪಿ. 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವನ್ನು ಕೆಜೆಪಿ ಪಡೆದ ಮತಗಳು ನಿರ್ಧಾರ ಮಾಡಿದ್ದವು. ಸಿದ್ದರಾಮಯ್ಯ ಎಚ್ಚೆತ್ತುಕೊಂಡರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಲೋಕಸಭೆ ಚುನಾವಣೆಯೂ ನಡೆದು, ಯಡಿಯೂರಪ್ಪ ಬಿಜೆಪಿಗೆ ವಾಪಸ್ ಬಂದು, ಬಿಜೆಪಿಯ ಮತಗಳಿಕೆ ಹೆಚ್ಚಾಯಿತು. ಕಾಂಗ್ರೆಸ್ ಕಣ್ಣು ಕುಕ್ಕಿತು. ಆಗ ಲಿಂಗಾಯತರ ಮನವೊಲಿಕೆಯ ಬದಲು ಲಿಂಗಾಯತರೇ ಬೇರೆ.. ವೀರಶೈವರೇ ಬೇರೆ.. ಎಂಬ ಹುಚ್ಚುವಾದಕ್ಕೆ ಸಿದ್ದರಾಮಯ್ಯ ಶುರುವಿಟ್ಟುಕೊಂಡರು. ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಕಾಶಪ್ಪನವರ್.. ಮೊದಲಾದವರು ಲೀಡರ್`ಶಿಪ್ ತೆಗೆದುಕೊಂಡರು. ಕೆಲವು ಸ್ವಾಮೀಜಿಗಳೂ ಮುಂದೆ ಬಂದು ಹೂಂಕರಿಸಿದರು. ಅವರು ಕಾಂಗ್ರೆಸ್ ಸ್ವಾಮೀಜಿಗಳೋ.. ಲಿಂಗಾಯತ ಸ್ವಾಮೀಜಿಗಳೋ ಎಂಬ ಚರ್ಚೆ ಬೇರೆಯದೇ ವಿಷಯ. ಅಧಿಕಾರ ಮುಗಿಯವ ಹೊತ್ತಿಗೆ ಕಮಿಟಿ ರಚಿಸಿ, ಹದಿನೈದೇ ದಿನಗಳಲ್ಲಿ ಆ ಕಮಿಟಿ ಅಧ್ಯಯನ ಮಾಡಿ ರಿಪೋರ್ಟ್ ಕೊಡುವಂತೆ ಮಾಡಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸೂ ಮಾಡಿಬಿಟ್ಟರು ಸಿದ್ದರಾಮಯ್ಯ. ಅದು ಉಲ್ಟಾ ಹೊಡೆದುಬಿಟ್ಟಿತು. ಇದು ವಾಸ್ತವ.
ಚುನಾವಣೆಯಲ್ಲಿಯೇ 120 ಸ್ಥಾನ ಗೆದ್ದಿದ್ದ ಕಾಂಗ್ರೆಸ್ಸಿಗೆ, ಚುನಾವಣೆಗೆ ಹೋಗುವ ಹೊತ್ತಿಗೆ ಬೇರೆ ಪಕ್ಷಗಳಿಂದ ಬಂದು ಸೇರಿಕೊಂಡ ಶಾಸಕರ ಬಲವೂ ಸೇರಿ 135ರ ಗಡಿ ದಾಟಿತ್ತು. ಆದರೆ 2018ರ ಚುನಾವಣೆ ನಡೆದಾಗ ಸಿಕ್ಕ ಸೀಟುಗಳನ್ನು ನೋಡಿಯೇ ನಾವು ತಪ್ಪು ಮಾಡಿಬಿಟ್ಟೆವು ಎಂದು ಅರ್ಥ ಮಾಡಿಕೊಂಡಿತ್ತು ಕಾಂಗ್ರೆಸ್. ಏಕಾಏಕಿ ಇಡೀ ವಿವಾದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಸಿದ್ದರಾಮಯ್ಯ ನುಣುಚಿಕೊಂಡರೆ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಕಾಶಪ್ಪನವರ್.. ಮೊದಲಾದವರೆಲ್ಲ ಗಪ್ ಚುಪ್ ಆಗಿಬಿಟ್ಟರು. ಆದರೆ ಹೋರಾಟ ನಿಂತಿತಾ..?
ನಿಲ್ಲಲಿಲ್ಲ. ಏಕೆಂದರೆ ಬಿಜೆಪಿಯಲ್ಲಿ ಯಡಿಯೂರಪ್ಪ ಇರುವವರೆಗೆ ಅದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿಗೆ ಅರಿವಾಗಿ ಹೋಗಿತ್ತು. ಆಗ ಇನ್ನೊಂದು ದಾಳ ಬಂತು. ಪಂಚಮಸಾಲಿ ಮೀಸಲಾತಿ ದಾಳ. ಅಂದಹಾಗೆ ಈ ಪಂಚಮಸಾಲಿ ಮೀಸಲಾತಿ ಮಸಲತ್ತಿನ ಹಿಂದೆ ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿಗಳ ಕೈವಾಡವೂ ಇರುವುದು ರಾಜಕೀಯ ವರದಿಗಾರರಿಗಷ್ಟೇ ಗೊತ್ತಿರುವ ಗುಟ್ಟು. ಯಡಿಯೂರಪ್ಪ ರಾಜೀನಾಮೆ ನೀಡಿದರು. ಕೊನೆಗೆ ಬಸವ ರಾಜ ಬೊಮ್ಮಾಯಿ ಮೀಸಲಾತಿಯನ್ನೂ ಹೆಚ್ಚಿಸಿದರು. ಹೋರಾಟದಲ್ಲಿ ಕುಳಿತಿದ್ದ ಸ್ವಾಮೀಜಿಗಳು ಮತ್ತು ಕಾಂಗ್ರೆಸ್ ನಾಯಕರಿಗೆ ಒಪ್ಪಲಾಗದ.. ಅತ್ತ ಸರಿಯಿಲ್ಲ ಎಂದು ದೂರ ತಳ್ಳಲೂ ಆಗದ ಸ್ಥಿತಿ. ಕಾಶಪ್ಪನವರ್ ಅವರಂತೂ ಬಹಿರಂಗವಾಗಿಯೇ ಧ್ವನಿಯೆತ್ತಿ, ಈ ಹೋರಾಟದ ಹಿಂದೆ ಕಾಂಗ್ರೆಸ್ ಇತ್ತು ಅನ್ನೋದಕ್ಕೆ ಸಾಕ್ಷಿ ಕೊಟ್ಟರು. ಕೊನೆಗೆ ಟಿಕೆಟ್ ಹಂಚಿಕೆ ವೇಳೆ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಕಾಂಗ್ರೆಸ್ಸಿಗೆ ಬರುವುದರೊಂದಿಗೆ ಕೊನೆಗೂ ಕಾಂಗ್ರೆಸ್ಸಿಗೆ ಲಿಂಗಾಯತ ಮತಗಳು ತಮಗೇ ಬರುತ್ತವೆ ಎಂಬ ಸಿಗ್ನಲ್ ಸಿಕ್ಕಿತು. ಈ ನಡುವೆ ಸಿದ್ದರಾಮಯ್ಯ ಲಿಂಗಾಯತರೆಲ್ಲ ಭ್ರಷ್ಟರು ಎಂಬ ಅರ್ಥ ಬರುವಂತೆ ಹೇಳಿರುವ ಮಾತು ಲಿಂಗಾಯತರನ್ನು ಸಿಡಿದೇಳುವಂತೆ ಮಾಡಿದೆ.
ನಾನು ಹಾಗೆ ಹೇಳಿಲ್ಲ. ತಿರುಚಿದ್ದಾರೆ ಎನ್ನುತ್ತಿದ್ದಾರೆ ಸಿದ್ದರಾಮಯ್ಯ. ಆದರೆ ವಿಡಿಯೋ ಹೇಳಿಕೆ ಇರುವ ಕಾರಣ ಆಗಲೇ ಲಿಂಗಾಯತರ ಆಕ್ರೋಶ ಎದುರಿಸುವಂತಾಗಿದೆ. ಅಂದಹಾಗೆ ಇಷ್ಟಕ್ಕೂ ಇವರಿಗೆ ಲಿಂಗಾಯತ ಮತಗಳ ಮೇಲೇ ಏಕೆ ಕಣ್ಣು ಎಂದರೆ ಉತ್ತರ ಸರಳ ಮತ್ತು ಸ್ಪಷ್ಟ.
224 ಕ್ಷೇತ್ರಗಳಲ್ಲಿ ಸರಿ ಸುಮಾರು 100 ಕ್ಷೇತ್ರಗಳಲ್ಲಿ ಲಿಂಗಾಯತರಿದ್ದಾರೆ. ಅವುಗಳಲ್ಲಿ ಸುಮಾರು 80 ಕ್ಷೇತ್ರಗಳಲ್ಲಿ ಲಿಂಗಾಯತರೇ ಇಲ್ಲ. ಇನ್ನುಳಿದ ಸುಮಾರು 20+ ಕ್ಷೇತ್ರಗಳಲ್ಲಿ ಯಾರು ಗೆಲ್ಲಬೇಕು ಎಂದು ನಿರ್ಧಾರ ಮಾಡುವುದು ಲಿಂಗಾಯತರು. ಲಿಂಗಾಯತರ ಬೆಲ್ಟ್`ನಲ್ಲಿ ಒಂದು ಹಂತಕ್ಕೆ ಕಾಂಗ್ರೆಸ್ ಮತಗಳಿಸುತ್ತಿದ್ದರೂ. ದೊಡ್ಡ ಮಟ್ಟದಲ್ಲಿ ಅಲ್ಲ. ಬಿಜೆಪಿಯ ಎದುರು ಕಾಂಗ್ರೆಸ್`ಗೆ ನಂ.2 ಸ್ಥಾನ. ಅತ್ತ ಒಕ್ಕಲಿಗರ ಕೋಟೆಯಲ್ಲಿಯೂ ಅಷ್ಟೆ, ಜೆಡಿಎಸ್ ನಂ.1 ಸ್ಥಾನದಲ್ಲಿದ್ದರೆ, ಅಲ್ಲಿಯೂ ಕಾಂಗ್ರೆಸ್ ನಂ.2. ರಾಜ್ಯದ ಎರಡು ಪ್ರಬಲ ಸಮುದಾಯಗಳಲ್ಲಿಯೂ ನಂ.2 ಆಯ್ಕೆಯಾಗಿರುವ ಕಾಂಗ್ರೆಸ್, ಹೇಗಾದರೂ ಮಾಡಿ ಲಿಂಗಾಯತರ ಹೃದಯ ಸಿಂಹಾಸವನ್ನೇರಲು ಪಯತ್ನಿಸುತ್ತಿರುವುದು ನಿಜ. ಆದರೆ ಈ ಮಧ್ಯೆ ಲಿಂಗಾಯತರು ಎಂದರೆ ಭ್ರಷ್ಟರು ಎಂಬ ಅರ್ಥದ ಸಿದ್ದರಾಮಯ್ಯ ಹೇಳಿಕೆಯನ್ನು ಎಷ್ಟು ನಿರಾಕರಿಸಿದರೂ ಬಿಜೆಪಿಗೆ ಪ್ಲಸ್ ಆಗುತ್ತಿರುವುದು ಈಗಿನ ಬೆಳವಣಿಗೆ.



