ಫೇಕ್ ಸುದ್ದಿಗಳನ್ನು ಯಾರು ಸೃಷ್ಟಿಸುತ್ತಾರೆ..? ಗೊತ್ತಿರಲ್ಲ. ಅವರು ಪತ್ರಕರ್ತರೂ ಆಗಿರಲ್ಲ. ಆದರೆ ಪತ್ರಿಕೆ, ಟಿವಿ ಚಾನೆಲ್ಲಗಳ ಹೆಸರನ್ನು ಸೃಷ್ಟಿಸಿ ಬಿಡ್ತಾರೆ. ಎಲೆಕ್ಷನ್ ಸಮಯದಲ್ಲಿ ಈ ರೀತಿಯ ಫೇಕ್ ನ್ಯೂಸ್ಗಳು ಸಾಮಾನ್ಯ ಎನ್ನಬಹುದು. ಅದರಲ್ಲೂ ಸೋಷಿಯಲ್ ಮೀಡಿಯಾ ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಸಹಜವಾಗಿಯೇ ಫೇಕ್ ನ್ಯೂಸ್ ಹೆಚ್ಚುವುದು ಸುಲಭವೂ ಹೌದು.
ಈ ಮೊದಲು ಇಂತಹ ಸುಳ್ ಸುದ್ದಿಗಳು ಹೆಚ್ಚಾಗಿ ಸೆಲಬ್ರಿಟಿಗಳ ಬಗ್ಗೆ ಇರುತ್ತಿತ್ತು. ಆಗೆಲ್ಲ ಅವು ಆಡುಮಾತಿನಲ್ಲಿಯೇ ಮುಗಿದೂ ಹೋಗುತ್ತಿತ್ತು. ಆದರೆ ಈಗ ಸೋಷಿಯಲ್ ಮೀಡಿಯಾ ಬಂದ ಮೇಲೆ ಅವು ಹೆಚ್ಚಾಗಿವೆ. ಈ ಹಿಂದೆ ಇಂತಹ ಫೇಕ್ ನ್ಯೂಸ್ಗಳು ಹಬ್ಬಿ, ಅದಕ್ಕೆ ಬಲಿಯಾದವರಲ್ಲಿ ಹೆಚ್ಚು ಡಾ.ರಾಜ್, ವಿಷ್ಣು. ತಮ್ಮ ಬಗ್ಗೆ ಹಬ್ಬಿದ ಎಷ್ಟೋ ಸುಳ್ ಸುದ್ದಿಗಳು ಅವರಿಗೇ ಗೊತ್ತಿಲ್ಲ. ಗೊತ್ತಾಗಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಇತ್ತೀಚೆಗೆ ದ್ವಾರಕೀಶ್, ಶರತ್ ಬಾಬು ನಿಧನದ ಸುದ್ದಿ, ಮೇಘನ ರಾಜ್, ಮೀನಾ ಎರಡನೇ ಮದುವೆ ಸುದ್ದಿ.. ಇಂತಹವು ಸದ್ದು ಮಾಡಿದ್ದವು.
ಈಗ ಎಲೆಕ್ಷನ್ ಟೈಂ. ಸಹಜವಾಗಿಯೇ ಸುಳ್ಳು ಸುದ್ದಿಗಳ ಫ್ಯಾಕ್ಟರಿ ಆಕ್ವಿವ್ ಆಗಿದೆ. ಅಂತಹ ಸುದ್ದಿಗಳ..ಸುಳ್ ಸುದ್ದಿಗಳ ಪಟ್ಟಿ ಇಲ್ಲಿದೆ.
ಫೇಕ್ ನ್ಯೂಸ್ ನಂ.1 : ಸಿಟಿ ರವಿ ಲಿಂಗಾಯತರ ವಿರುದ್ಧ ನೀಡಿದ್ದರೆನ್ನಲಾದ ಹೇಳಿಕೆ
ಬಿಜೆಪಿ ಶಾಸಕ ಸಿ.ಟಿ.ರವಿ ನಮಗೆ ಲಿಂಗಾಯತರ ಮತಗಳು ಬೇಡ ಎಂದು ಹೇಳಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಅಪ್ಪಟ ಕನ್ನಡ ಪ್ರಭದ ಇಮೇಜ್ ಬಳಸಿ ಸುದ್ದಿ ಹರಡಲಾಗಿತ್ತು. ಆದರೆ ಕನ್ನಡ ಪ್ರಭದಲ್ಲಿ ಆ ಸುದ್ದಿ ಇರಲಿಲ್ಲ. ಯಾವ ಪತ್ರಿಕೆಗಳಲ್ಲೂ ಇರಲಿಲ್ಲ. ಕೊನೆಗೆ ಪೊಲೀಸ್ ದೂರು ದಾಖಲಾದಾಗ ಚಿಕ್ಕಮಗಳೂರಿನ, ಸಿ.ಟಿ.ರವಿಯವರ ಕ್ಷೇತ್ರದ ಕಾಂಗ್ರೆಸ್ಸಿಗರು ಅರೆಸ್ಟ್ ಆದರು.
ಫೇಕ್ ನ್ಯೂಸ್ ನಂ.2 : ಸಿಟಿ ರವಿ ಯಡಿಯೂರಪ್ಪ ವಿರುದ್ಧ ಹೇಳಿದರೆನ್ನಲಾದ ಹೇಳಿಕೆ
ಲಿಂಗಾಯತರ ಮತಗಳು ಬೇಡ ಎಂಬ ಹೇಳಿಕೆ ಸುದ್ದಿ ವೈರಲ್ ಆದ ಸಮಯದಲ್ಲಿಯೆ ಹೊರಬಿದ್ದ ಹೇಳಿಕೆ ಇದು. ವಿಜಯೇಂದ್ರ ಅವರಿಗೆ ಯಡಿಯೂರಪ್ಪ ಟಿಕೆಟ್ ಘೋಷಿಸಿದ್ದಾಗ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಿ.ಟಿ.ರವಿ ನಮ್ಮ ಪಕ್ಷದಲ್ಲಿ ಟಿಕೆಟ್ ಫೈನಲ್ ಅಗುವುದು ಕಿಚನ್ನಲ್ಲಿ ಅಲ್ಲ. ಯಡಿಯೂರಪ್ಪ ಹಿರಿಯ ನಾಯಕರು ಹೌದು. ಆದರೆ ಟಿಕೆಟ್ ಫೈನಲ್ ಮಾಡುವುದು ಪಕ್ಷ ಎಂದಿದ್ದರು. ಅದು ಯಡಿಯೂರಪ್ಪ ಅವರಿಗೆ ಸಿಟಿ ರವಿ ಚಾಲೆಂಜ್ ಎಂಬಂತೆ ಸುದ್ದಿ ಪ್ರಸಾರವಾಗಿತ್ತು. ಸ್ಪಷ್ಟನೆ ಕೊಟ್ಟಿದ್ದಾರಾದರೂ, ವಿವಾದ ಬಗೆಹರಿದಿಲ್ಲ.
ಫೇಕ್ ನ್ಯೂಸ್ ನಂ.3 : ಬಿ.ಎಲ್.ಸಂತೋಷ್ ಲಿಂಗಾಯತರ ವಿರುದ್ಧ ನೀಡಿದ್ದರು ಎನ್ನಲಾದ ಹೇಳಿಕೆ
ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟ ಮೇಲೆ ಟಾರ್ಗೆಟ್ ಆಗಿರುವುದು ಬಿ.ಎಲ್. ಸಂತೋಷ್. ಪಕ್ಷದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸುಳ್ಳು ಸುದ್ದಿಗೆ ಗುರಿಯಾದರು.
ನಾವು ಹಿಂದುತ್ವದಲ್ಲಿ ಮುಂದುವರಿಯುತ್ತೇವೆ, ನಮಗೆ ಲಿಂಗಾಯತರ ಅಗತ್ಯವಿಲ್ಲ: ಬಿಎಲ್ ಸಂತೋಷ್” ಎಂಬ ಶೀರ್ಷಿಕೆಯಡಿ ಪತ್ರಿಕೆಯೊಂದರಲ್ಲಿ ವೈರಲ್ ಆಗಿರುವ ಸುದ್ದಿಯ ತುಣುಕು ವೈರಲ್ ಆಯ್ತು. ಈ ಹಿಂದೆ ಪತ್ರಕರ್ತರೂ ಆಗಿದ್ದ ದಿನೇಶ್ ಅಮಿನ್ ಮಟ್ಟು ಅದನ್ನು ಶೇರ್ ಮಾಡುವುದರೊಂದಿಗೆ ಸುಳ್ಳು ಸುದ್ದಿ, ಅಧಿಕೃತವೂ ಆಯ್ತು. ಕಾಂಗ್ರೆಸ್ ಅಧಿಕೃತ ಖಾತೆಯೂ ಅದನ್ನು ಪ್ರಕಟಿಸಿ, ಬಿಜೆಪಿಗೆ ಟಾಂಟ್ ಕೊಟ್ಟಿತು. ಅದನ್ನು ಸುಳ್ಳು ಎಂದು ಕಾಂಗ್ರೆಸ್ನ್ನು ಟೀಕಿಸಿರುವ ಬಿಜೆಪಿ, ಬಿ.ಎಲ್. ಸಂತೋಷ್ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ.
ಫೇಕ್ ನ್ಯೂಸ್ ನಂ.4 : ಸುತ್ತೂರು ಶ್ರೀಗಳು ಬಿಜೆಪಿ ವಿರುದ್ಧ ನೀಡಿದ್ದಾರೆ ಎನ್ನಲಾದ ಹೇಳಿಕೆ
ಇನ್ನೊಂದು ಸುದ್ದಿ ಸುತ್ತೂರು ಶ್ರೀಗಳಿಗೆ ಸಂಬಂಧಿಸಿದ್ದು. ಸುತ್ತೂರು ಶ್ರೀಗಳಿಗೆ ಬಿಜೆಪಿಯಲ್ಲಿ ಅವಮಾನವಾಗಿದೆ ಎಂಬ ಸುದ್ದಿಯೂ ಇದೀಗ ವೈರಲ್ ಆಗುತ್ತಿದೆ. ಆದರೆ ಯಾವ ಪತ್ರಿಕೆ ಎಂದು ನೋಡಿದರೆ ಉತ್ತರ ಸಿಗುತ್ತಿಲ್ಲ. ಅದು ಸುಳ್ಳು ಸುದ್ದಿ ಎಂಬುದರಲ್ಲಿ ಅನುಮಾನವೇನಿಲ್ಲ.
ಫೇಕ್ ನ್ಯೂಸ್ ನಂ. 5 : ಚಕ್ರವರ್ತಿ ಸೂಲಿಬೆಲೆಗೆ ಸಂಬಂಧಿಸಿದ್ದು
ಮೋದಿ ರ್ಯಾಲಿ ಮಾಡುತ್ತಿರುವಾಗ ಟ್ರಾಫಿಕ್ ಪ್ರಾಬ್ಲಂ ಮತ್ತಿತರ ನೆಪ ಹೇಳುವವರು ದೇಶದ್ರೋಹಿಗಳು ಎಂಬ ಅರ್ಥದ ಹೇಳಿಕೆ, ಸುವರ್ಣ ನ್ಯೂಸ್ ಹೆಸರಲ್ಲಿ ವರದಿಯಾಯ್ತು. ಅದನ್ನು ನೋಡಿ ಸ್ವತಃ ಚಕ್ರವರ್ತಿ ಸೂಲಿಬೆಲೆ ಬೆಚ್ಚಿಬಿದ್ದಿದ್ದರು. ಸುವರ್ಣ ನ್ಯೂಸ್ ಮೂಲಕವೇ ಸ್ಪಷ್ಟನೆಯನ್ನೂ ಕೊಟ್ಟರು.
ಫೇಕ್ ನ್ಯೂಸ್ ನಂ. 6 : ಬಿಜೆಪಿ ಮೊದಲ ಪಟ್ಟಿ
ಆಗಿನ್ನೂ ಬಿಜೆಪಿ ಟಿಕೆಟ್ ಘೋಷಣೆ ಮಾಡಿರಲಿಲ್ಲ.. ಆದರೆ ಫೇಕ್ ಪಟ್ಟಿ ಎಷ್ಟು ವೈರಲ್ ಆಯಿತೆಂದರೆ, ಸ್ವತಃ ಬಿಜೆಪಿಯವರೇ ಬೆಚ್ಚಿ ಬೀಳುವಂತೆ ನಕಲಿ ಪಟ್ಟಿ ಸೃಷ್ಟಿಸಿದ್ದರು. ಕೊನೆಗೆ ಬಿಜೆಪಿಯೇ ಸ್ಪಷ್ಟನೆ ಕೊಡಬೇಕಾಯ್ತು.
ಫೇಕ್ ನ್ಯೂಸ್ ನಂ. 7 : ಅಮಿತ್ ಶಾಗೂ ತಟ್ಟಿತು ಫೇಕ್ ನ್ಯೂಸ್ ಬಿಸಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರಕ್ಕೆ ಬಂದಿದ್ದಾಗ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಚಾಮುಂಡೇಶ್ವರಿ ಆಶೀರ್ವಾದ ಪಡೆದು ಹೊರಬಂದಾಗ ಫೋಟೋದಲ್ಲಿ ಶೂ ಧರಿಸಿದ್ದಂತೆ ಫೋಟೋ ಎಡಿಟ್ ಮಾಡಿ, ಶೂ ಹಾಕಿಕೊಂಡು ದೇವಸ್ಥಾನಕ್ಕೆ ಹೋಗಿದ್ದಾರೆ ಅಮಿತ್ ಶಾ ಎಂದು ಸುದ್ದಿ ಮಾಡಲಾಗಿತ್ತು.
ಒಟ್ಟಿನಲ್ಲಿ ಫೇಕ್ ನ್ಯೂಸುಗಳ ಆರ್ಭಟ ಹೆಚ್ಚಾಗಿದೆ. ನಿಜ ಸುಳ್ಳು ಕಂಡು ಹಿಡಿಯೋದೇ ಕಷ್ಟವಾಗಿದೆ.



