ರಾಜ್ಯ ರಾಜಕೀಯದಲ್ಲಿ ಕುಮಾರಸ್ವಾಮಿ ಹೇಳಿಕೆಗಳಿಗೆ ಸಿಗುವ ಮಹತ್ವವೇ ಬೇರೆ. ಅದರಲ್ಲೂ ಎದುರಾಳಿ ಪಕ್ಷಗಳ ಒಳಗುಟ್ಟುಗಳು, ತಂತ್ರಗಳು ಅದು ಹೇಗೆ ಕುಮಾರಸ್ವಾಮಿ ತಲುಪುತ್ತವೋ.. ಏನೋ.. ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ.. ಸ್ಯಾಂಟ್ರೋ ರವಿ ವಿವಾದ.. ಸಿಡಿ ಕೇಸ್.. ಬಾಂಬೆ ಬ್ಲೂಬಾಯ್ಸ್.. ಧರ್ಮಸ್ಥಳದಲ್ಲಿ ಶಾಂತಿವನದಲ್ಲಿ ಸಿದ್ದರಾಮಯ್ಯ ಹಾಕಿದ್ದ ಸ್ಕೆಚ್.. ಪಕ್ಷದ ಯಾವ್ಯಾವ ಶಾಸಕರು ಪಕ್ಷ ಬಿಟ್ಟು ಹೋಗಲಿದ್ದಾರೆ ಎಂಬುದು ಹಾಗೂ ಅವರಿಗೆ ಗಾಳ ಹಾಕಿದವರು ಯಾರು.. ಹೀಗೆ ಕುಮಾರಸ್ವಾಮಿ ಅವರು ಎಕ್ಸ್`ಕ್ಲೂಸಿವ್ ಸುದ್ದಿಗಳ ಕಣಜ. ಸುಮಲತಾ ಬಿಜೆಪಿಯವರು ಎಂದು ಹೇಳಿದ್ದರು. ಅದು ನಿಜವಾಗುವ ಸಮಯ ಹತ್ತಿರವಾದಂತೆ ತೋರುತ್ತಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಅಷ್ಟೆ, ಹುಬ್ಲೋಟ್ ವಾಚ್, ರೀಡೂ ಹಗರಣ ಸೇರಿದಂತೆ ಹಲವು ಸುದ್ದಿಸ್ಫೋಟದ ಫಸ್ಟ್ ವರದಿಗಾರರೂ ಅವರೇ. ಅಂತಹ ಕುಮಾರಸ್ವಾಮಿ ಇದೀಗ ಬ್ರಾಹ್ಮಣ ಸಿಎಂ ಸುದ್ದಿಯನ್ನು ಸ್ಫೋಟ ಮಾಡಿದ್ದಾರೆ.
ಕುಮಾರಸ್ವಾಮಿ ಹೇಳಿದ್ದು ಇಷ್ಟೆ : ಮುಂಬರುವ ವಿಧಾನಸಭಾ ಚುನಾವಣೆ ಬಳಿಕ ಪ್ರಹ್ಲಾದ್ ಜೋಶಿಯವರನ್ನು ಸಿಎಂ ಮಾಡುವ ತಂತ್ರ ನಡೆಯುತ್ತಿದೆ. ಇದು ಆರ್.ಎಸ್.ಎಸ್. ಹಾಗೂ ಬಿಜೆಪಿಯೊಳಗಿನ ಹುನ್ನಾರ. ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದವರು ಪ್ರಹ್ಲಾದ್ ಜೋಶಿ. ಶೃಂಗೇರಿ ಮಠ ಹಾಗೂ ದೇವರ ವಿಗ್ರಹ ಒಡೆದ ಪೇಶ್ವೆ ಸಮುದಾಯಕ್ಕೆ ಸೇರಿದವರು. ಇದು ಕುತಂತ್ರ. ಇವರ ಈ ಕುತಂತ್ರಕ್ಕೆ ಒಕ್ಕಲಿಗ, ಲಿಂಗಾಯತ ವೀರಶೈವ, ಹಿಂದುಳಿದ ಹಾಗೂ ದಲಿತ ಸಮುದಾಯದವರು ಮರುಳಾಗಬಾರದು.


ಪ್ರಹ್ಲಾದ್ ಜೋಶಿ ರಿಯಾಕ್ಷನ್ ಇದೂವರೆಗೆ ಬಂದಿಲ್ಲವಾದರೂ, ಕುಮಾರಸ್ವಾಮಿ ಹೇಳಿಕೆ ಸಂಚಲನವನ್ನೇ ಸೃಷ್ಟಿಸಿದೆ. ಬಿಜೆಪಿ ರಾಷ್ಟ್ರೀಯ ನಾಯಕ ಸಿ.ಟಿ. ರವಿ ಕುಮಾರಸ್ವಾಮಿ ಹತಾಶೆಯಿಂದ ಬ್ರಾಹ್ಮಣ ಮತ್ತು ಜೋಶಿ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ. ಹಿಂದೂಗಳನ್ನು ಒಡೆದಾಳುವ ಕುಟಿಲ ನೀತಿಗಾಗಿ, ತಾವು ಮಿತಿ ಮೀರಿಸುವ ಹೇಳಿಕೆ ನೀಡುತ್ತಿದ್ದಾರೆ. ಬೇರೆ ಪಕ್ಷದ ಗೊಡವೆಗಳು ಅವರಿಗ್ಯಾಕೆ ಬೇಕು. ಅವರು ಅಧಿಕಾರಕ್ಕೆ ಬಂದರೆ ಮುಸ್ಲಿಂಮರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕಾಗಿ ಮೈಸೂರು ಭಾಗದಲ್ಲಿ ಒಕ್ಕಲಿಗರು ಕುಮಾರಸ್ವಾಮಿ ಸಿಎಂ ಆಗಲ್ಲವೆಂದು ನಿರ್ಧಾರ ಮಾಡಿದ್ದಾರೆ. ಹಾಗಾಗಿ ಜೆಡಿಎಸ್ ಬಿಟ್ಟು ಬೇರೆ ಹಿಂದೂ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ ಎಂದಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಮಾರಸ್ವಾಮಿ ನಮ್ಮ ಪಕ್ಷದ ಬಗ್ಗೆ ಚಿಂತನೆ ಮಾಡುವ ಅಗತ್ಯ ಇಲ್ಲ. ಅವರ ಪಕ್ಷವನ್ನು ಅವರು ಸರಿ ಮಾಡಿಕೊಳ್ಳಲಿ. ಕಷ್ಟ ಪಟ್ಟು ಓಡಾಡಿತ್ತಿದ್ದಾರೆ ಪಕ್ಷ ಸರಿ ಮಾಡಿಕೊಳ್ಳಲಿ. ಅವರು ಪ್ರಸ್ತುತ ಹಾಗೂ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾತನಾಡಬೇಕು. ಆದರೆ, ವೈಯಕ್ತಿಕವಾಗಿ ಆರೋಪ ಮಾಡಿದರೆ ಜನರು ತಲೆಕೆಸಿಕೊಳ್ಳಲ್ಲ. ಕುಮಾರಣ್ಣ ಮಾಹಿತಿ ಎಲ್ಲಿಂದ ಬರುತ್ತೆ ಗೊತ್ತಿಲ್ಲ. ಇನ್ನು ಸಿಡಿ ದೂರಿನ ಬಗ್ಗೆ ಮಾಹಿತಿ ಇಲ್ಲ. ಎಲ್ಲ ವಿವರಗಳು ಇದ್ದರೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗೆ ಆಗುತ್ತದ ಎಂದು ತಿರುಗೇಟು ಕೊಟ್ಟಿದ್ದಾರೆ.


ಸಿಟಿ ರವಿ ಅವರಂತೂ ನಮ್ಮ ಪಕ್ಷದಲ್ಲಿ ಯೋಗ್ಯ ಮತ್ತು ಅರ್ಹ ಅಭ್ಯರ್ಥಿಗಳಿದ್ದಾರೆ. ಪ್ರತಿ ಬಾರಿ ಸಿಎಂ ಚರ್ಚೆ ನಡೆದಾಗಲೂ ಪ್ರಹ್ಲಾದ್ ಜೋಶಿ ಹೆಸರು ಚರ್ಚೆಗೆ ಬರುತ್ತದೆ. ಕುಮಾರಸ್ವಾಮಿ ಲಕ್ಕಿಮ್ಯಾನ್. ಅವರ ಹಾಗೆ ಸಿಎಂ ಆಗುವ ಯೋಗ ಎಲ್ಲರಿಗೂ ಬರಲ್ಲ. ದೇವೇಗೌಡರ ಮಗನಾಗಿ ತೂಕದ ಮಾತನಾಡಬೇಕು ಎಂದಿದ್ದಾರೆ. ಆರ್. ಅಶೋಕ್, ರವಿಕುಮಾರ್, ಸಂಸದ ಮುನಿಸ್ವಾಮಿ ಸೇರಿದಂತೆ ಹಲವರು ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ರೀತಿಯ ಕೀಳು ಮಟ್ಟದ ಜಾತಿ ಟಾರ್ಗೆಟ್ ಮಾಡಿ ಮಾತನಾಡುವ ಭಾಷೆ ಮಾಜಿ ಸಿಎಂ ಆಗಿರುವವರಿಗೆ ಶೋಭೆ ತರುವಂತದ್ದಲ್ಲ. ಕುಮಾರಸ್ವಾಮಿ ಮೊದಲು ತಮ್ಮ ಮನೆಯಲ್ಲಿರುವ ಬೆಂಕಿ ಆರಿಸಿಕೊಳ್ಳಲಿ ಎಂದಿದ್ದಾರೆ. ಸದ್ಯಕ್ಕೆ ಜೆಡಿಎಸ್‍ನಲ್ಲಿ ಹಾಸನದ ಟಿಕೆಟ್ ಯಾರಿಗೆ ನೀಡಬೇಕು ಎಂಬುದು ತೀವ್ರ ಚರ್ಚೆಯಲ್ಲಿದೆ. 4ನೇ ತಾರೀಕು ಘೋಷಿಸುತ್ತೇವೆ ಎಂದು ಖುದ್ದು ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಹಿರಂಗ ಹೇಳಿಕೆ ನೀಡಿದ್ದರು. ಸಭೆ ನಡೆಯಿತು. ಭವನಿಯವರದ್ದು ಮೌನ. ಕುಮಾರಸ್ವಾಮಿ ಮಾತಿಲ್ಲ, ಕಥೆಯಿಲ್ಲ. ಹೀಗಾಗಿಯೇ ವಿಷಯಾಂತರ ಮಾಡಲು ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ ಎಂಬ ಮಾತೂ ಚಾಲ್ತಿಯಲ್ಲಿದೆ.


ನನ್ನ ಹೇಳಿಕೆಗೆ ನಾನು ಬದ್ಧ : ಹೀಗೆ ಎಲ್ಲ ಕಡೆಯಿಂದ ಟೀಕೆ ಬರುತ್ತಿದ್ದರೂ, ನಾನು ನನ್ನ ಹೇಳಿಕೆಗೆ ಬದ್ಧ. ಹೇಳಿಕೆ ಹಿಂಪಡೆಯುವ ಮಾತೇ ಇಲ್ಲ. ಬ್ರಾಹ್ಮಣರನ್ನು ಸಿಎಂ ಮಾಡಲು ಹುನ್ನಾರ ನಡೆಯುತ್ತಿರುವುದು ನಿಜ ಎಂದಿದ್ದಾರೆ.



