ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಆಗಿರಬಹುದು. ಜೆಡಿಎಸ್ ಪ್ರಭಾವಿ ನಾಯಕರಾಗಿರಬಹುದು. ಆದರೆ ಅವರ ಹೇಳಿಕೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಭಯ ಹುಟ್ಟಿಸುವ ಶಕ್ತಿ ಇದೆ. ಹಾಗೆ ನೋಡಿದರೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದದ್ದು ಲಿಂಗಾಯತ ಸಿಎಂ ವರ್ಸಸ್ ಬ್ರಾಹ್ಮಣ/ಪೇಶ್ವೆ ಸಿಎಂ ವಿವಾದ. ಈ ವಿವಾದ ಎಷ್ಟರಮಟ್ಟಿಗೆ ತಾರಕಕ್ಕೆ ಹೋಯಿತೆಂದರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಕರ್ನಾಟಕಕ್ಕೆ ಓಡೋಡಿ ಬಂದು ನನಗೆ ರಾಜ್ಯ ರಾಜಕೀಯ ಆಸಕ್ತಿ ಇಲ್ಲ. ನಾನು ಸಿಎಂ ಆಗಲ್ಲ ಎಂದು ಹೇಳಿಕೆ ಕೊಡುವಂತಾಯ್ತು. ಬಿಜೆಪಿಯ ನಾಯಕರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಬಾರಿಯೂ ಲಿಂಗಾಯತರೇ ಸಿಎಂ ಎಂದು ಹೇಳಿಕೆ ಕೊಟ್ಟುಬಿಟ್ಟರು.
ಈಗ ಕುಮಾರಸ್ವಾಮಿ ಮತ್ತೊಂದು ಬಾಂಬ್ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡೋದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಈಗ ನಡೆಯುತ್ತಿರುವುದು ಬ್ರಾಹ್ಮಣ ಸಿಎಂ ಆಳ್ವಿಕೆಯೇ ಎನ್ನುವ ಮೂಲಕ ಮತ್ತೊಮ್ಮೆ ಬಿ.ಎಲ್.ಸಂತೋಷ್ ಅವರನ್ನು ತಿವಿದಿದ್ದಾರೆ. ಬಿಜೆಪಿ, ಕರ್ನಾಟಕದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಸಿಎಂ ಪಟ್ಟಕಟ್ಟುತ್ತದೆ ಎಂಬುದನ್ನು ನಾನು ಈ ಮೊದಲೇ ಊಹೆ ಮಾಡಿದ್ದೆ. ಆ ಪಕ್ಷದ ಆಂತರ್ಯದಲ್ಲಿ ಅಂತೆಯೇ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎನ್ನುವುದು ಕುಮಾರಸ್ವಾಮಿ ವಾದ.
ಕುಮಾರಸ್ವಾಮಿ ಮತ್ತವರ ಜೆಡಿಎಸ್ ಎಷ್ಟು ಸೀಟು ಗೆಲ್ಲುತ್ತೆ ಅನ್ನೋದು ಬೇರೆ ವಿಷಯ. ಆದರೆ ಕುಮಾರಸ್ವಾಮಿ ಕೊಡೋ ಹೇಳಿಕೆಗಳು, ಭೇದಿಸುವ ರಹಸ್ಯಗಳಿವೆಯಲ್ಲ, ಅವುಗಳನ್ನು ಯಾವ ರಾಜಕೀಯ ನಾಯಕನೂ ಸುಳ್ಳು ಅನ್ನೋದಿಲ್ಲ. ದಟ್ ಈಸ್ ಕುಮಾರಸ್ವಾಮಿ ಸೋರ್ಸ್ ಸೀಕ್ರೆಟ್.



