ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗಲಿದೆ. ಮೇ ತಿಂಗಳ ಹೊತ್ತಿಗೆ ಹೊಸ ಸರ್ಕಾರ ಅಸ್ಥಿತ್ವದಲ್ಲಿರಬೇಕು. ಈ ಬಾರಿ ಯಾರು ಗೆಲ್ಲಬಹುದು? ಈ ಪ್ರಶ್ನೆಗಳು ಎಲ್ಲರಿಗೂ ಕಾಡುತ್ತಿವೆ. ಕಾಂಗ್ರೆಸ್ 150 ಸ್ಥನಗಳಲ್ಲಿ ಗೆಲ್ಲುತ್ತೇವೆ ಎನ್ನುತ್ತಿದ್ದರೆ, ಬಿಜೆಪಿ 140 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದೆ. ಡಿಕೆ ಶಿವಕುಮಾರ್ ಮಾತ್ರ 136 ಸ್ಥಾನ ಗೆಲ್ಲುತ್ತೇವೆ ಎಂದು ಕರಾರುವಾಕ್ ನಂಬರ್ ಹೇಳುತ್ತಿದ್ದಾರಂತೆ. ಜೆಡಿಎಸ್ ಕೂಡಾ ಈ ಬಾರಿ 120ಕ್ಕೂ ಹೆಚ್ಚು ಸ್ಥಾನ ಗೆದ್ದು ಸ್ವತಂತ್ರವಾಗಿ ಅಧಿಕಾರ ಹಿಡಿಯುತ್ತೇವೆ ಎನ್ನುತ್ತಿದೆ.
ಸಮೀಕ್ಷೆಗಳ ಪ್ರಕಾರ : ಇದೂವರೆಗೆ ಹಲವು ಬಾರಿ ಸಮೀಕ್ಷೆಗಳು ನಡೆದಿವೆ. ಪಕ್ಷಗಳ ಅಂತರಿಕ ವರದಿಯ ಅಂಶಗಳನ್ನೇ ನೆಚ್ಚಿಕೊಳ್ಳುವುದಾದರೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಪಕ್ಷವಾಗಿ ಕಾಂಗ್ರೆಸ್ ಕಾಣುತ್ತಿದೆ. ಹಾಗಂತ ಮ್ಯಾಜಿಕ್ ನಂಬರ್ ಆಗಿರುವ 113ನ್ನು ಕಾಂಗ್ರೆಸ್ ಏಕಾಂಗಿಯಾಗಿ ದಾಟುತ್ತಾ..? ಅವಕಾಶಗಳಿವೆ. ಆದರೆ ಅದು ಅಷ್ಟು ಸುಲಭವಲ್ಲ. ಬಿಜೆಪಿಗೂ ಕೂಡಾ ಚಾನ್ಸ್ ಇದೆ ಎನ್ನುತ್ತಿವೆ ರಿಪೋರ್ಟುಗಳು. ಇದುವರೆಗೆ ಬಿಜೆಪಿ ಎರಡು ಬಾರಿ ಸರ್ಕಾರ ಮಾಡಿದ್ದರೂ, ಎರಡೂ ಬಾರಿ ಮ್ಯಾಜಿಕ್ ನಂಬರ್ 113 ದಾಟಿಲ್ಲ. ಆಪರೇಷನ್ ಮಾಡಿ 113 ತಲುಪಿತ್ತು. ಈ ಬಾರಿಯೂ ಅಷ್ಟೆ, ಮ್ಯಾಜಿಕ್ ನಂಬರ್ ಕಷ್ಟ ಎನ್ನಲಾಗುತ್ತಿದೆ. 3ನೇ ಸ್ಥಾನದಲ್ಲಿ ಜೆಡಿಎಸ್ ಇದೆ. ಮೂಲಗಳ ಪ್ರಕಾರ ಜೆಡಿಎಸ್ ಸೀಟುಗಳಿಗೆ ಕಳೆದ ಬಾರಿಗಿಂತ ಹೆಚ್ಚಾಗಲಿದ್ದು, 40-50 ಸ್ಥಾನ ಗೆಲ್ಲಬಹುದು ಎನ್ನಲಾಗುತ್ತಿದೆ. ಅಲ್ಲಿಗೆ ಸದ್ಯದ ಮಟ್ಟಿಗೆ ಎಲ್ಲ ಸಮೀಕ್ಷೆಗಳೂ ಸಮ್ಮಿಶ್ರ ಸರ್ಕಾರದತ್ತಲೇ ಬೊಟ್ಟು ಮಾಡುತ್ತಿವೆ. ಹೀಗಿರುವಾಗಲೇ ಹರಿದ್ವಾರದ ಸಂತರೊಬ್ಬರ ವಿಡಿಯೋ ವೈರಲ್ ಆಗಿದೆ.
ಹರಿದ್ವಾರದ ಸಂತರು ಹೇಳಿದ್ದೇನು?
ವಿಡಿಯೋದಲ್ಲಿ ಸಂತರಂತೆ ಕಾಣುವ ವ್ಯಕ್ತಿಯೊಬ್ಬರು ಈ ಬಾರಿಯೂ ದೇವೇಗೌಡರ ಸುಪುತ್ರ ಕರ್ನಾಟಕದ ಮುಖ್ಯಮಂತ್ರಿಯಾಗುತ್ತಾರೆ. 3ನೇ ಬಾರಿಗೆ ಸಿಎಂ ಆಗಲಿದ್ದಾರೆ ಎಂದು ಹೇಳುತ್ತಾರೆ. ಆ ಸಂತ ಯಾರು? ವಿಡಿಯೋ ತೆಗೆದಿದ್ದು ಯಾರು? ಗೊತ್ತಿಲ್ಲ. ವಿಡಿಯೋ ಮೂಲಗಳು ಸಿಗುತ್ತಿಲ್ಲ. ಇಷ್ಟಕ್ಕೂ ಅದು ಹರಿದ್ವಾರದ ವಿಡಿಯೋನಾ? ವಿಡಿಯೋದಲ್ಲಿ ಗೊತ್ತಾಗುತ್ತಿಲ್ಲ. ಹಳೆಯ ವಿಡಿಯೋ ಇರಬಹುದಾ ಎಂಬ ಗೊಂದಲವೂ ಇದೆ.
ಏನಾಗಬಹುದು?
ಸಮೀಕ್ಷೆಗಳು ಹೇಳುತ್ತಿರುವುದು ಅತಂತ್ರ ಫಲಿತಾಂಶ. ಇದೇ ರೀತಿ ಮುಂದುವರಿದು ಅತಂತ್ರ ಪರಿಸ್ಥಿತಿ ಉದ್ಭವವಾದರೆ ಆಗ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಮಾಡಬೇಕಾಗಿ ಬರಬಹುದು. ಕಳೆದ ಬಾರಿಯೂ ಸಮ್ಮಿಶ್ರ ಸರ್ಕಾರವೇ ಬಂದಿತ್ತು. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಯಾವ ಕುಮಾರಸ್ವಾಮಿಯವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದರೋ, ಪ್ರಚಾರ ಮಾಡಿದ್ದರೋ.. ಅವರ ಮನೆ ಬಾಗಿಲಿಗೆ ಮೊದಲು ಹೋಗಿದ್ದು ಕಾಂಗ್ರೆಸ್. ನಂತರ ಬಿಜೆಪಿ. ಲಕ್ಕು ಕಾಂಗ್ರೆಸ್ಸಿಗೆ ಸಿಕ್ಕಿತ್ತು. ಕುಮಾರಸ್ವಾಮಿ ಸಿಎಂ ಆಗಿದ್ದರು. ಈಗಲೂ ಪರಿಸ್ಥಿತಿ ಹಾಗೆಯೇ ಇದೆ. ಕಾಂಗ್ರೆಸ್ ಹಾಗೂ ಬಿಜೆಪಿ ನೇರವಾಗಿ ಟಾರ್ಗೆಟ್ ಮಾಡುತ್ತಿರುವುದು ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷವನ್ನು. ಈ ಬಾರಿಯೂ ಅಂತಹುದೇ ಅತಂತ್ರ ರಿಸಲ್ಟ್ ಸಿಗುತ್ತಾ? ಈಗಲೇ ಹೇಳುವುದು ತಪ್ಪಾಗಬಹುದು. ಮತದಾನಕ್ಕೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಕನಿಷ್ಠ ಒಂದು ತಿಂಗಳಿಗಿಂತ ಹೆಚ್ಚು ಸಮಯ ಇದೆ. ಏನ್ ಬೇಕಾದ್ರೂ ಆಗಬಹುದು.



