ಜ್ಯೋತಿಷ್ಯ ಹೇಳುವವರು ಜ್ಯೋತಿಷಿಗಳೇ ಆಗಬೇಕಿಲ್ಲ. ಪಂಚಾಂಗವನ್ನು ಅರೆದು ಕುಡಿದಿರಬೇಕಿಲ್ಲ. ಗ್ರಹಗತಿಗಳನ್ನು ತಾಳೆ ಹಾಕಬೇಕಿಲ್ಲ. ಲೆಕ್ಕದಲ್ಲಿ ಪಂಡಿತರಾಗಬೇಕಿಲ್ಲ. ಕುಂಡಲಿ, ಜನ್ಮ ನಕ್ಷತ್ರ, ಗ್ರಹತಾರೆಗಳ ಬಲ, ಜಾತಕ, ಯೋಗಾಯೋಗಗಳ ಬಗ್ಗೆ ತಿಳಿದುಕೊಂಡಿರಲೂ ಬೇಕಿಲ್ಲ. ಈಗ ಮೀನು, ಆಮೆ, ಮೊಸಳೆ, ಆಕ್ಟೋಪಸ್, ಗಿಳಿಗಳೂ ಭವಿಷ್ಯ ಹೇಳುವ ಕಾಲ. ಹಾಗೆಯೇ ಇಲ್ಲೊಂದು ನಾಯಿಯ ಭವಿಷ್ಯ ಭರ್ಜರಿ ಸುದ್ದಿಯಾಗಿದೆ. ಭವಿಷ್ಯ ಹೇಳಿರುವುದು ಮಂಡ್ಯದ ನಾಯಿ, ಮುಂದಿನ ಮುಖ್ಯಮಂತ್ರಿ ಯಾರು ಆಗಬಹುದು ಎಂದು ಭವಿಷ್ಯ ಹೇಳಿದೆ.
ಮಂಡ್ಯದ ಅಶೋಕನಗರದ ಗೋಪಿ ಮತ್ತು ಕುಟುಂಬ ಕಾಲ ಭೈರವೇಶ್ವರನ ಭಕ್ತರು. ಕಾಲ ಭೈರವೇಶ್ವರನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶ್ವಾನಕ್ಕೂ ಪೂಜೆ ಮಾಡಿದ್ದಾರೆ. ತರುವಾಯ ಶ್ವಾನದ ಮುಂದೆ ಮೂವರು ಮುಖ್ಯಮಂತ್ರಿ ಆಕಾಂಕ್ಷಿಗಳ ಫೋಟೋಗಳನ್ನು ಇಟ್ಟಿದ್ದಾರೆ. ಡಿ.ಕೆ.ಶಿವಕುಮಾರ್, ಬಸವರಾಜ ಬೊಮ್ಮಾಯಿ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಫೋಟೋ ಇಟ್ಟು ಯಾರಾಗಬಹುದು ಮುಂದಿನ ಸಿಎಂ ಎಂದು ಕೇಳಿದ್ದಾರೆ. ದೇವರತ್ತ ಒಂದು ಬಾರಿ ಮುಖ ಮಾಡಿದ ಶ್ವಾನ ಹೆಚ್.ಡಿ.ಕುಮಾರಸ್ವಾಮಿ ಫೋಟೋ ಹಿಡಿದಿದೆ. ಈ ಮೂಲಕ ಮುಂದಿನ ಮುಖ್ಯಮಂತ್ರಿ ಹೆಚ್ ಡಿಕೆ ಎಂದು ಶ್ವಾನ ಭವಿಷ್ಯ ನುಡಿದಿದೆ ಎನ್ನಲಾಗಿದೆ.
ಪ್ರೀತಿಯ ನಾಯಿಗೆ ಗೋಪಿ ಕುಟುಂಬದವರು ಭೈರವ ಎಂದು ಹೆಸರಿಟ್ಟು ದೇವರಂತೆ ಪೂಜಿಸುತ್ತಾರೆ. ಪ್ರತಿವಾರ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ಬಳಿಕ ನಾಯಿಗೂ ಪೂಜೆ ಸಲ್ಲಿಸುತ್ತಾರೆ. ಈ ಹಿಂದೆ ಶ್ವಾನ ನೀಡಿದ ಸೂಚನೆಗಳು ನಿಜವಾಗುತ್ತಾ ಬಂದಿದೆ ಎಂದು ಈ ಕುಟುಂಬ ನಂಬಿದೆ. ತಾಯಿ, ಪುತ್ರ ಅನಾರೋಗ್ಯಕ್ಕೆ ತುತ್ತಾದಾಗಲೂ ಭೈರವನ ಕೃಪೆಯಿಂದ ಪಾರಾಗಿದ್ದರು. ಈ ನಾಯಿಗೆ ವಿಶೇಷ ಶಕ್ತಿ ಇದೆ, ಹಾಗಾಗಿ ಅದು ನೀಡುತ್ತಿರುವ ಸೂಚನೆಗಳು ನಿಜವಾಗ್ತಿದೆ ಅನ್ನುತ್ತಾರೆ ಗೋಪಿ.
ಒಟ್ಟಿನಲ್ಲಿ ಕೆಲವು ಸಮೀಕ್ಷೆಗಳು ರಾಜ್ಯದಲ್ಲಿ ಈ ಬಾರಿಯೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವ ಸೂಚನೆ ನೀಡುತ್ತಿವೆ. ಜ್ಯೋತಿಷಿಗಳ ವಾದದಲ್ಲೂ ಕುಮಾರಸ್ವಾಮಿಗೆ ಸಾಧನಾ ತಾರೆ ಇದೆ ಎಂದು ಹೇಳಿದ್ದಾರೆ. ಈ ಎಲ್ಲವನ್ನೂ ನೋಡಿದರೆ ಕುಮಾರಸ್ವಾಮಿ 3ನೇ ಬಾರಿಗೆ ಸಿಎಂ ಆದರೆ ಅಚ್ಚರಿಯೇನಿಲ್ಲ.



