ಸಿದ್ದರಾಮಯ್ಯ (Siddaramaiah) ಸರ್ಕಾರ ಎದುರಿಸುತ್ತಿರುವ ಮೊದಲ ಅಧಿವೇಶನ ಇದು. ಗ್ಯಾರಂಟಿ ಭಾಗ್ಯಗಳನ್ನು ಜಾರಿ ಮಾಡುತ್ತಿದ್ದರೂ ಗೊಂದಲಗಳಿವೆ. ಅನ್ನಭಾಗ್ಯ (AnnaBhagya) ಅಕ್ಕಿ ವಿತರಣೆ ಜಾರಿ ಸುಲಭವಾಗಿಲ್ಲ. ಒಂದು ಕಡೆ ವಿತರಕರು ಪಟ್ಟು ಹಿಡಿದಿದ್ದಾರೆ. ಇನ್ನೊಂದು ಕಡೆ ರಾಜ್ಯ ಸರ್ಕಾರ ಕೊಡುತ್ತಿರುವುದು ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಮಾತ್ರ, ಉಳಿದ 5 ಕೆಜಿಯದ್ದು ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ. ಮತ್ತೊಂದೆಡೆ ಗೃಹ ಜ್ಯೋತಿ (GruhaJyothi) ನೋಂದಣಿ ಜೋರಾಗಿದೆ. ಆದರೆ ಗೊಂದಲಗಳು ಮುಗಿದಿಲ್ಲ. ಗೃಹಲಕ್ಷ್ಮಿ (GruhaLakshmi) ಶುರುವಾಗಿಲ್ಲ. ಯುವನಿಧಿ ಘೋಷಣೆಗಷ್ಟೇ ಸೀಮಿತವಾಗಿದೆ. ಇದರ ನಡುವೆ ರಾಜ್ಯ ಸರ್ಕಾರದ ವಿರುದ್ಧ ವೈಎಸ್‍ಟಿ ಟ್ಯಾಕ್ಸ್ ಮತ್ತು ಸಿಎಂ ಕಚೇರಿ ವಿರುದ್ಧ 30 ಲಕ್ಷ ರೂಪಾಯಿ ವರ್ಗಾವಣೆ ಲಂಚದ ಆರೋಪ ಸಿಡಿಸಿದ್ದಾರೆ ಕುಮಾರಸ್ವಾಮಿ. ಹೌದು..ಹೌದೂ.. ಎನ್ನುತ್ತಿದೆ ಬಿಜೆಪಿ.
ಮಾತನಾಡ್ತಿರೋ ಕುಮಾರಸ್ವಾಮಿಗೆ (HDKumaraswamy) ದಾಖಲೆ ಕೊಟ್ಟು ಮಾತನಾಡಿ ಎಂದಿತು ಕಾಂಗ್ರೆಸ್. ನನ್ನ ಆರೋಪಕ್ಕೆ ದಾಖಲೆ ಕೇಳ್ತಿದ್ದಾರೆ ಕಾಂಗ್ರೆಸ್ ನಾಯಕರು. ಅವರ ಕನಸು ನಾನು ಈಡೇರಿಸುತ್ತೇನೆ. ನಾನು ದಾಖಲೆ ಕೊಟ್ಟರೆ ಯಾವ ಮಂತ್ರಿಯ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಆ ಮಂತ್ರಿಯನ್ನು ವಜಾ ಮಾಡ್ತಿರಾ? ಆ ಮಂತ್ರಿಯನ್ನು ವಜಾ ಮಾಡುವ ತಾಕತ್ ಇವರಿಗೆ ಇದೆಯಾ? ನಾನು ನನ್ನ ಬಳಿ ಇರುವ ದಾಖಲೆಯನ್ನು ಸದನದಲ್ಲಿಯೇ ಇಡುತ್ತೇನೆ. ನಾನು ದಾಖಲೆ ಕೊಟ್ಟರೆ ಈ ಸರ್ಕಾರ ಎಲ್ಲಿರುತ್ತೊ ಗೊತ್ತಿಲ್ಲ. ಸುಮ್ಮನೆ ಸ್ವಲ್ಪ ದಿನ ಈ ಸರಕಾರ ನೆಮ್ಮದಿಯಾಗಿರಲಿ ಎಂದು ಬಿಟ್ಟಿದೀನಿ. ಸರಕಾರ ತಿದ್ದಿಕೊಂಡರೆ ಒಳ್ಳೆಯದು ಎಂದು ಬಿಟ್ಟಿದೀನಿ ಅಷ್ಟೇ ಎಂದು ಸವಾಲು ಹಾಕಿದ್ದಾರೆ ಕುಮಾರಸ್ವಾಮಿ. ಇದು ಸದನದ ಒಳಗೆ.
ಸದನದ ಹೊರಗೆ ಯಡಿಯೂರಪ್ಪ (BSYeddyurappa) ಹೆಚ್ಡಿ ಕುಮಾರಸ್ವಾಮಿ (HDKumaraswamy) ಹೇಳಿದ್ದೆಲ್ಲ ಸತ್ಯ ಮತ್ತು ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಮುಂದೆಯೂ ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಮುಂದೆಯೂ ಒಗ್ಗಟ್ಟಾಗಿ ಹೋರಾಡುತ್ತೇವೆ ಎಂಬ ಯಡಿಯೂರಪ್ಪನವರ (BSYeddyurappa) ಹೇಳಿಕೆ ಇದ್ದಕ್ಕಿದ್ದಂತೆ ಮಹತ್ವ ಪಡೆದುಕೊಂಡುಬಿಟ್ಟಿದೆ. ಏಕೆಂದರೆ ಕುಮಾರಸ್ವಾಮಿ ಒಗ್ಗಟ್ಟಿನ ಹೋರಾಟದ ಮಾತಿನ ಹಿಂದೆ ಏನಿದೆ ಎಂದು ಹೇಳಿಲ್ಲ. ಸುದ್ದಿಯನ್ನು ನಿರಾಕರಿಸಿಲ್ಲ. ಸದ್ಯದಲ್ಲೇ ಲೋಕಸಭೆ ಇದೆ. ನೋಡೋಣ ಎಂದಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ತಮ್ಮ ಮಾತಿನಿಂದ ಆಗುವ ಪರಿಣಾಮವನ್ನು ಅರ್ಥ ಮಾಡಿಕೊಂಡು ಇದು ರಾಜ್ಯ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಮಾತ್ರ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಹೊಸ ಸರ್ಕಾರ ಬಂದಿದ್ದಷ್ಟೇ ಅಲ್ಲ, ಅದರೊಂದಿಗೆ ಬಿಜೆಪಿ ಮತ್ತು ಜೆಡಿಎಸ್`ನ್ನೂ ಮಕಾಡೆ ಮಲಗಿಸಿಬಿಟ್ಟಿತು. ಇದೀಗ ಮತ್ತೆ ಪಕ್ಷವನ್ನು ಸಂಘಟನೆ ಮಾಡುವುದರ ಜೊತೆಗೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ ಜೆಡಿಎಸ್ ಮತ್ತು ಬಿಜೆಪಿ. ಇತ್ತೀಚೆಗೆ ಬಿಜೆಪಿಯೇತರ 19 ಪಕ್ಷಗಳು ಬಹಿಷ್ಕರಿಸಿದ್ದ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಬಿಜೆಪಿಗೆ ಹತ್ತಿರವಾಗುವ ಮೊದಲ ಸುಳಿವನ್ನು ಕುಮಾರಸ್ವಾಮಿ ಅವರ ತಂದೆ ಮತ್ತು ಪಕ್ಷದ ವರಿಷ್ಠ ಹೆಚ್ಡಿ ದೇವೇಗೌಡ ನೀಡಿದ್ದರು. ಜೊತೆಗೆ ಇದೀಗ ನಡೆಯುತ್ತಿರುವ ನಿತೀಶ್ ಕುಮಾರ್ ನೇತೃತ್ವದ ಸಂಘಟನೆಯಲ್ಲೂ ಕುಮಾರಸ್ವಾಮಿ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಸಂಥಿಂಗ್ ಈಸ್ ಚೇಂಜ್ ಎಂಬಂತೆ ಕುಮಾರಸ್ವಾಮಿ ಟೀಕೆಗಳ ಪ್ರಹಾರ ಬದಲಾಗಿದೆ.



