ಹಾನಸ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ಎಚ್ಡಿಕೆ ತೆರೆ ಎಳೆಯುವ ಸಮಯ ಹತ್ತಿರ ಬಂತಾ? ಹೀಗೊಂದು ಪ್ರಶ್ನೆ ಉದ್ಭವವಾಗಿದೆ. ಹಾಸನ ಕ್ಷೇತ್ರದಿಂದ ಎಚ್.ಡಿ ರೇವಣ್ಣ ಸ್ಪರ್ಧೆ ಫಿಕ್ಸ್ ಎನ್ನುತ್ತಿವೆ ಮೂಲಗಳು. ಫೆಬ್ರವರಿ 18ಕ್ಕೆ ಶಿವರಾತ್ರಿ ಹಬ್ಬ ಇದ್ದು, ಆ ದಿನ ಕುಟುಂಬಸ್ಥರ ಜೊತೆ ಸಭೆ ಸೇರಿ ಹಾಸನ ಟಿಕೆಟ್ ಫೈನಲ್ ಮಾಡುವ ಬಗ್ಗೆ ಹಾಗೂ ಭವಾನಿ ರೇವಣ್ಣ ಸ್ಪರ್ಧೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರ್ಧಾರ ಮಾಡಲಾಗಿತ್ತು. ಶಾಸಕ ಪ್ರೀತಂ ಗೌಡ ಸವಾಲು ಸ್ವೀಕರಿಸಿ ರೇವಣ್ಣ ಅಖಾಡಕ್ಕೆ ಇಳಿಯುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎನ್ನುತ್ತಿವೆ ಜೆಡಿಎಸ್ ಮೂಲಗಳು.

ಫೆ.18ಕ್ಕೆ ಹಾಸನ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಒಂದು ಕಡೆ ಪ್ರಚಾರ ನಡೆಸುತ್ತಲೇ ಬೆಂಗಳೂರಿಗೆ ಬಂದಿದ್ದಾರೆ ಹೆಚ್.ಡಿ.ರೇವಣ್ಣ. ಅಷ್ಟೇ ಅಲ್ಲ, ಹಾಸನದಲ್ಲಿ ಸೈಲೆಂಟ್ ಆಗಿದ್ದ ಭವಾನಿ ರೇವಣ್ಣ, ಪತಿಯ ಜೊತೆಯಲ್ಲಿಯೇ ಅಖಾಡಕ್ಕೆ ಇಳಿದಿದ್ದು, ಪ್ರಚಾರ ಸಭೆಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಪಕ್ಷಕ್ಕೆ ಸೇರುವ ಆಸಕ್ತಿಯಿರುವ, ಬೇರೆ ಬೇರೆ ಪಕ್ಷದ ಬೆಂಬಲಿಗರನ್ನು, ಸ್ಥಳೀಯ ನಾಯಕರನ್ನೂ ಭವಾನಿ ರೇವಣ್ಣ ಹಾಗೂ ರೇವಣ್ಣ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಹಾಗಾದರೆ ಸ್ವರೂಪ್ ಸ್ಥಾನ ಏನು?
ಇದು ಕುಮಾರಸ್ವಾಮಿಯವರಿಗೆ ಇಕ್ಕಟ್ಟಿನ ಪ್ರಶ್ನೆಯೂ ಹೌದು. ಪರೋಕ್ಷವಾಗಿ ಸ್ವರೂಪ್ ಅವರನ್ನು ಅಭ್ಯರ್ಥಿ ಎಂದು ಬಿಂಬಿಸಿದ್ದ, ಬಹಿರಂಗವಾಗಿಯೇ ಭವಾನಿ ರೇವಣ್ಣಗೆ ಟಿಕೆಟ್ ಕೊಡಲ್ಲ ಎಂದಿದ್ದ ಕುಮಾರಸ್ವಾಮಿಗೆ ಈಗ ಇಕ್ಕಟ್ಟಿನ ಪ್ರಶ್ನೆ. ಆದರೆ, ಕ್ಷೇತ್ರಕ್ಕಾಗಿ ಕುಟುಂಬವೇ ಬಿರುಕು ಬಿಡುವುದನ್ನು ಕುಮಾರಸ್ವಾಮಿ ಹಾಗೂ ರೇವಣ್ಣ ಬಯಸುತ್ತಿಲ್ಲ.

ಶಿವರಾತ್ರಿ ನಂತರವೇ ಅಧಿಕೃತ : ಕುಟುಂಬದೊಳಗೆ ತೀರ್ಮಾನವಾಗಿದ್ದರೂ ಅಧಿಕೃತವಾಗಿ ಶಿವರಾತ್ರಿಯ ದಿನವೇ ಘೋಷಿಸಲಿದ್ದು, ಆ ನಂತರವೇ ಅಣ್ಣನಿಗೆ ಪ್ರಚಾರ ಆರಂಭಿಸುವಂತೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ ಎನ್ನುತ್ತಿವೆ ಮೂಲಗಳು.

ಶಿವರಾತ್ರಿಯೇ ಮುಹೂರ್ತ : ದಳಪತಿಗಳಿಗೆ ಕಗ್ಗಂಟಾಗಿರುವುದು ಭವಾನಿ ರೇವಣ್ಣ ಸ್ಪರ್ಧೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ರೇವಣ್ಣ 2018ರಲ್ಲಿ ಕುಮಾರಸ್ವಾಮಿ ಫಾಲೋ ಮಾಡಿದ್ದ 2018ರ ರಾಮನಗರ ಸೂತ್ರ ಅನುಸರಿಸಲು ತೀರ್ಮಾನಿಸಿದ್ದಾರೆಂಬ ಮಾಹಿತಿಯೂ ಇದೆ. ಅಂದರೆ ಎರಡು ಕಡೆ ಸ್ಪರ್ಧೆ ಮಾಡುವುದು. ಅಂದು ಎರಡು ಕಡೆ ಸ್ಪರ್ಧಿಸಿ, ನಂತರ ರಾಮನಗರವನ್ನು ಅನಿತಾ ಅವರಿಗೆ ಬಿಟ್ಟುಕೊಟ್ಟಂತೆಯೇ, ತಾವೂ ಎರಡು ಕಡೆ ಸ್ಪರ್ಧಿಸಿ, ಗೆದ್ದ ನಂತರ ಒಂದು ಕ್ಷೇತ್ರವನ್ನು ಭವಾನಿಯವರಿಗೆ ಬಿಟ್ಟು ಕೊಡುವುದು ರೇವಣ್ಣ ಪ್ಲಾನ್. ಈ ಬಗ್ಗೆ ಅಣ್ಣ-ತಮ್ಮ ಇಬ್ಬರೂ ಚರ್ಚಿಸಿದ್ದು, ಏನಿದ್ದರೂ ಶಿವರಾತ್ರಿ ನಂತರವೇ ಅಧಿಕೃತ ಘೋಷಣೆ ಎನ್ನುತ್ತಿವೆ ಮೂಲಗಳು.
ಈಗಾಗಲೇ ಎರಡು ಬಾರಿ ಫೆಬ್ರವರಿ 4 ಮತ್ತು 12ರ ಡೆಡ್ ಲೈನ್ ಫ್ಲಾಪ್ ಅಗಿದ್ದು, ಈ ಬಾರಿಯೂ ಹಾಗೆಯೇ ಆಗುತ್ತಾ? ಗೊತ್ತಿಲ್ಲ. ಜೆಡಿಎಸ್ ನಿರ್ಧಾರಗಳನ್ನು ಬೇರೆ ಪಕ್ಷಗಳಂತೆ ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಶಿವರಾತ್ರಿಯ ಮುಹೂರ್ತಕ್ಕೆ ಕಾಯಲೇಬೇಕು.



