ಫೆಬ್ರವರಿ 4 ಮತ್ತು ಫೆಬ್ರವರಿ 12. ಸ್ವತಃ ಕುಮಾರಸ್ವಾಮಿಯವರೇ ಘೋಷಿಸಿದ್ದ ಎರಡೂ ಡೆಡ್‍ಲೈನ್ ಮುಕ್ತಾಯವಾಗಿದ್ದು, ಎರಡೂ ಡೆಡ್`ಲೈನ್‍ನ್ನು ಕುಮಾರಸ್ವಾಮಿ ಮರೆತು ಹೋಗಿರುವಂತೆ ಕಾಣುತ್ತಿದೆ. ಹಾಸನದ ಟಿಕೆಟ್ ರಣರಂಗವಾಗತೊಡಗಿದೆ.
ಮೊದಲನೆಯದಾಗಿ ಅದು ಶುರುವಾಗಿದ್ದು ರಾಮನಗರದಿಂದ ಎಂದರೆ ಅಚ್ಚರಿಯೇನಲ್ಲ. ದಿಢೀರನೆ ಅನಿತಾ ಕುಮಾರಸ್ವಾಮಿ ರಾಮನಗರ ಕ್ಷೇತ್ರದಲ್ಲಿ ತಾವು ನಿಲ್ಲುವುದಿಲ್ಲ. ಮಗ ನಿಖಿಲ್ ಅವರಿಗೆ ಬಿಟ್ಟು ಕೊಡುತ್ತಿದ್ದೇನೆ ಎಂದು ಘೋಷಣೆಯಾಯಿತೋ.. ಆಗಿನಿಂದಲೇ ಹಾಸನ ರಣರಂಗವಾಗುವುದಕ್ಕೆ ಶುರುವಾಯಿತು ಎಂದು ಮಾತನಾಡುತ್ತಾರೆ ಹಾಸನದ ಹೆಸರು ಹೇಳಲಿಚ್ಚಿಸದ ಜೆಡಿಎಸ್ ಕಾರ್ಯಕರ್ತರು. ಅದಾದ ಮೇಲೆ ಭವಾನಿ ರೇವಣ್ಣ ಹಾಸನಕ್ಕೆ ನಾನೇ ಕ್ಯಾಂಡಿಡೇಟ್ ಎಂದ ಕೂಡಲೇ ನೋನೋ ಎಂದು ತಲೆ ಅಲ್ಲಾಡಿಸಿದರು ಕುಮಾರಸ್ವಾಮಿ. ಜೆಡಿಎಸ್ ರಾಜ್ಯಾಧ್ಯಕ್ಷರು ಮಾತನಾಡುವ ಮೊದಲೇ ಸ್ವರೂಪ್ ಪರ ಬ್ಯಾಟಿಂಗ್ ಮಾಡಿದರು. ಅತ್ತಿಗೆಯನ್ನು ಗೊಂದಲಕ್ಕೆ ದೂಡಿದರು. ಅದಾದ ಮೇಲೆ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಬಹಿರಂಗವಾಗಿ ತಿರುಗಿಬಿದ್ದರೆ, ಭವಾನಿ ರೇವಣ್ಣ ಮೌನಕ್ಕೆ ಶರಣಾದರು. ಕೊನೆಗೆ ಚಿಕ್ಕಪ್ಪ-ಮಕ್ಕಳ ಮಾತಿನ ಸಮರ ಶಮನ ಮಾಡಿದ್ದು ದೊಡ್ಡಪ್ಪ ಹೆಚ್.ಡಿ.ರೇವಣ್ಣ. ಈ ವೇಳೆ ಹಾಸನದಲ್ಲಿ ಟಿಕೆಟ್ ಘೋಷಣೆ ಮತ್ತೊಂದು ತಿರುವು ಪಡೆಯಿತು.
ಅರಕಲಗೂಡು ಕ್ಷೇತ್ರಕ್ಕೆ ದಿಢೀರ್ ಎಂದು ಎ.ಮಂಜು ಅವರ ಹೆಸರನ್ನು ಘೋಷಣೆ ಮಾಡಿದ ಕುಮಾರಸ್ವಾಮಿ, ಎ.ಟಿ.ರಾಮಸ್ವಾಮಿಯವರಿಗೆ ಟಿಕೆಟ್ ಇಲ್ಲ ಎಂದು ಘೋಷಿಸಿಯೇಬಿಟ್ಟರು. ರಾಮಸ್ವಾಮಿ ಜೆಡಿಎಸ್‍ನಲ್ಲಿಯೇ ಇದ್ದರೂ, ಪಕ್ಷದ ಜೊತೆ ಒಂದು ಅಂತರ ಕಾಯ್ದುಕೊಂಡಿದ್ದವರು. ಕಾಂಗ್ರೆಸ್ ಟಿಕೆಟ್ ಕೊಡುತ್ತದೆ ಎಂದು ಕಾಯುತ್ತಿದ್ದವರು. ಜೆಡಿಎಸ್ ಘೋಷಣೆ ಮಾಡುವ ಹೊತ್ತಿಗೆ ಕಾಂಗ್ರೆಸ್ ಕೂಡಾ ಟಿಕೆಟ್ ಇಲ್ಲ ಎಂದಾಗಿತ್ತು. ಅತ್ತ ರಾಮಸ್ವಾಮಿ ಕನಲಿದರೂ, ಕುಮಾರಸ್ವಾಮಿ ಎ.ಮಂಜು ಜೊತೆ ಒಂದು ಹೆಜ್ಜೆ ಮುಂದಿಟ್ಟಾಗಿತ್ತು. 

ಫೆಬ್ರವರಿ 4ರಂದು ಏನಾಯ್ತು?
ಮೊದಲನೆಯಾಗಿ ಕುಮಾರಸ್ವಾಮಿ ಘೋಷಿಸಿದ್ದ ದಿನಾಂಕ ಫೆಬ್ರವರಿ 4. ಆ ದಿನ ಮನೆಯಲ್ಲಿ ಒಂದು ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಸ್ವತಃ ಕುಮಾರಸ್ವಾಮಿ ಘೋಷಿಸಿದರು. ಅದರ ಬೆನ್ನಲ್ಲೇ ಕಾರ್ಯಕರ್ತರಲ್ಲಿ ಉತ್ಸಾಹ ಗರಿಗೆದರಿತು. ಖುದ್ದು ದೇವೇಗೌಡರೇ ಫೈನಲ್ ಮಾಡ್ತಾರೆ ಎಂಬ ಮಾತು ಕೇಳಿಬಂತು. ಆದರೆ ಮೂಲಗಳ ಪ್ರಕಾರ ರೇವಣ್ಣ ಅವರ ಇಡೀ ಕುಟುಂಬ ಕುಮಾರಸ್ವಾಮಿಯವರ ಮನೆಗೆ ಹೋಗಿದ್ದು ನಿಜ.

ಫೆಬ್ರವರಿ 12ರ ಡೆಡ್`ಲೈನ್ ಏನಾಯ್ತು?
ಫೆಬ್ರವರಿ 4ರ ಡೆಡ್`ಲೈನ್ ಮುಗಿದರೂ ಫೆಬ್ರವರಿ 12ರ ನಿರೀಕ್ಷೆ ಬೇರೆಯೇ ಇತ್ತು. ಫೆಬ್ರವರಿ 12ಕ್ಕೆ ಪಂಚರತ್ನ ಯಾತ್ರೆ ಹಾಸನಕ್ಕೆ ಎಂಟ್ರಿಯಾಗುತ್ತಿತ್ತು. ಆಗ ನಿರ್ಧಾರ ಮಾಡುತ್ತೇವೆ ಎಂದು ಸ್ವತಃ ಪ್ರಜ್ವಲ್. ಸೂರಜ್, ರೇವಣ್ಣ ಅಷ್ಟೇ ಯಾಕೆ ಕುಮಾರಸ್ವಾಮಿಯವರೂ ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಇಡೀ ದಿನ ಮಾತನ್ನೇ ಆಡದೆ ಮೌನಕ್ಕೆ ಶರಣಾದರು. ಅಲ್ಲಿಗೆ ಫೆಬ್ರವರಿ 12ರ ಡೆಡ್‍ಲೈನ್ ಕೂಡಾ ಸೈಡಿಗೆ ಹೋಯ್ತು.





