ಚನ್ನಪಟ್ಟಣದಲ್ಲಿ ಅಧಿಕಾರಿಗಳ ಜೊತೆ ಸಭೆ ಮತ್ತು ಬೆನ್ನು ಬೆನ್ನಿಗೆ ಒಂದೇ ದಿನ 14 ದೇವಸ್ಥಾನಗಳ ಪ್ರದಕ್ಷಿಣೆ, ಪೂಜೆ.. ಇನ್ಮುಂದೆ ಪ್ರತಿ ಪಂಚಾಯ್ತಿಗೂ ಭೇಟಿ ನೀಡುತ್ತೇನೆ ಎಂಬ ಹೇಳಿಕೆ.. ಒಂದು ದಿನಕ್ಕೆ ಮೂರು ಪಂಚಾಯ್ತಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತೇವೆ. ಕ್ಷೇತ್ರದ ಪ್ರತಿ ಮನೆ ಬಾಗಿಲಿಗೂ ಸರ್ಕಾರದ ಯೋಜನೆ ತಲುಪಿಸುತ್ತೇನೆ ಎಂಬ ಮಾತುಗಳು.. ಇವೆಲ್ಲವೂ ಡಿಸಿಎಂ ಡಿಕೆ ಶಿವಕುಮಾರ್ ಈ ಬಾರಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ಸುಳಿವು ನೀಡುತ್ತಿವೆ.
ಡಿಕೆ ಶಿವಕುಮಾರ್, ಈಗಲೂ ಶಾಸಕರೇ. ಕಳೆದ ವರ್ಷ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಕನಕಪುರದಲ್ಲಿ ಗೆದ್ದಿದ್ದವರು. ಅಂತಹವರು ಚನ್ನಪಟ್ಟಣ ಬೈ ಎಲೆಕ್ಷನ್ ಅಭ್ಯರ್ಥಿಯಾಗುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಇರೋದು ಜ್ಯೋತಿಷ್ಯ, ಅದೃಷ್ಟ ಹಾಗೂ ದೇವಮೂಲೆ ಎಂಬ ಕಾರಣದಲ್ಲಿ.
ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ಕುರಿತಂತೆ.. ʻಹಿಂದಿನದ್ದು ಮುಗಿದ ಅಧ್ಯಾಯ. ಈಗ ಹೊಸ ಅಧ್ಯಾಯ.ಯಾರು ಸ್ಪರ್ಧಿಸಬೇಕು ಎಂಬುದು ಅದು ಜನರ ತೀರ್ಪು, ಪಕ್ಷದ ತೀರ್ಪು. ಮುಂದೆ ಪಕ್ಷ ಹಾಗೂ ಕ್ಷೇತ್ರದ ಜನ ಯಾವ ತೀರ್ಮಾನ ಮಾಡ್ತಾರೋ ಅದನ್ನ ಪಾಲಿಸುತ್ತೇನೆ. ನಮ್ಮ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ. ಆ ಬಗ್ಗೆ ಯಾರಿಗೂ ಅನುಮಾನ ಬೇಡ. ಈ ಕ್ಷೇತ್ರದ ಋಣ ನಮ್ಮ ಮೇಲಿದೆ ಅದನ್ನ ತೀರಿಸುವ ಕೆಲಸ ಮಾಡುತ್ತೇವೆ ಎಂದು ಉತ್ತರ ಕೊಟ್ಟಿದ್ದಾರೆ ಡಿಕೆ.
ಕನಕಪುರ ಯಾವ ರೀತಿ ಅಭಿವೃದ್ಧಿ ಮಾಡಿದ್ದೇನೋ ಅದಕ್ಕಿಂತ ಹೆಚ್ಚಿನ ಅಭಿವೃದ್ಧಿಗೆ ಅವಕಾಶವಿದೆ. ಹೀಗಾಗಿ ಈ ಕ್ಷೇತ್ರದ ಮೇಲೆ ನನಗೆ ವಿಶೇಷವಾದ ಕಾಳಜಿ ಇದೆ. ಚನ್ನಪಟ್ಟಣ ಅಭಿವೃದ್ಧಿ ಹಾಗು ಬದಲಾವಣೆಗೆ ನಾನು ಬದ್ಧವಾಗಿದ್ದೇನೆ. ಹೀಗಾಗಿ ಇಂದು ಅಲ್ಲಿನ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಮತದಾರರು ಹಾಗು ನಾಯಕರ ಜತೆ ಮಾತನಾಡುತ್ತೇನೆ. ಅಲ್ಲಿನ ಜನ ಏನು ಹೇಳುತ್ತಾರೆ ಎಂದು ತಿಳಿದು ನಂತರ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಚನ್ನಪಟ್ಟಣದ ಇತಿಹಾಸ :
ಜೆಡಿಎಸ್ ಭದ್ರಕೋಟೆ ಚನ್ನಪಟ್ಟಣದಲ್ಲಿ ಡಿಕೆಶಿ ಗೆಲುವು ಅಷ್ಟೋಂದು ಸುಲಭ ಇಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭದ್ರನೆಲೆ ಇಲ್ಲ. 1989 ರಲ್ಲಿ ಸಾದತ್ ಅಲಿ ಖಾನ್ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರೆ, 2004 ಹಾಗೂ 2008 ರಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್‌ನಿಂದ ನಿಂತು ಗೆದ್ದಿದ್ದರು. ಈ ಬಳಿಕ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಸಿಪಿ ಯೋಗೇಶ್ವರ್ ಬಿಜೆಪಿ ಸೇರ್ಪಡೆಗೊಂಡು ಒಮ್ಮೆ ಇಲ್ಲಿ ಗೆಲುವು ಸಾಧಿಸಿದರೆ, ಸಮಾಜವಾದಿ ಪಕ್ಷದಿಂದಲೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗಾಗಿ ಅದು ಸಿಪಿ ಯೋಗೀಶ್ವರ್ ಗೆಲುವಾಗಿತ್ತೇ ಹೊರತು, ಕಾಂಗ್ರೆಸ್ ಗೆಲುವಾಗಿರಲಿಲ್ಲ.
ಬಳಿಕ ಈ ಕ್ಷೇತ್ರದಲ್ಲಿ 2018 ಹಾಗೂ 2023 ರಲ್ಲಿ ಹಾಲಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ.
ಈ ಕ್ಷೇತ್ರದಲ್ಲಿ ಡಿಕೆ ಸುರೇಶ್ ಸ್ಪರ್ಧೆ ಮಾಡುತ್ತಾರೆ ಎಂದೇ ಆರಂಭದಲ್ಲಿ ಹೇಳಲಾಗುತ್ತಿತ್ತು. ಆದರೆ ಡಿಕೆ ಸುರೇಶ್ ಬದಲಾಗಿ ಇದೀಗ ಡಿಕೆ ಶಿವಕುಮಾರ್ ಅವರೇ ಅಖಾಡಕ್ಕಿಳಿಯುವ ಸುಳಿವು ನೀಡಿದ್ದಾರೆ. ಡಿಕೆ ಸುರೇಶ್ ಸ್ಪರ್ಧೆಗಿಂತಲೂ ಡಿಕೆ ಶಿವಕುಮಾರ್ ಈ ಕ್ಷೇತ್ರದಲ್ಲಿ ನಿಂತರೆ ಗೆಲುವು ಸುಲಭ ಎಂಬ ಲೆಕ್ಕಾಚಾರವೂ ಇದೆ.
ಲೋಕಸಭೆ ಚುನಾವಣೆಯಲ್ಲಿ ಬೇರೆ ವಿಧಾನಸಭೆ ಕ್ಷೇತ್ರಗಳ ಮತ ಚಲಾವಣೆಯನ್ನು ಗಮನಿಸಿದರೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯೇನೂ ಆಗಿಲ್ಲ. ಸುಮಾರು 85 ಸಾವಿರ ಮತಗಳು ಈ ಕ್ಷೇತ್ರದಲ್ಲಿ ದೊರಕಿದೆ. ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಮೊದಲ ಸ್ಥಾನದಲ್ಲಿದ್ದರೆ, ಮುಸ್ಲಿಂ ಮತದಾರರ ಸಂಖ್ಯೆ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ದಲಿತ ಮತದಾರರಿದ್ದಾರೆ. ಈ ಎಲ್ಲಾ ಲೆಕ್ಕಾಚಾರದಿಂದಲೇ ಡಿಕೆ ಶಿವಕುಮಾರ್ ಚನ್ನಪಟ್ಟಣದಿಂದ ಅಖಾಡಕ್ಕಿಳಿಯುವ ಚಿಂತನೆಯಲ್ಲಿದ್ದಾರೆ. ಚನ್ನಪಟ್ಟಣದಲ್ಲಿ ಡಿಕೆಶಿ ಗೆದ್ದರೆ, ಕನಕಪುರ ಕ್ಷೇತ್ರದಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿ, ಅದನ್ನೂ ಗೆಲ್ಲುವ ಇರಾದೆ ಡಿಕೆಶಿ ಅವರದ್ದು.
ಜ್ಯೋತಿಷ್ಯ ದೇವಮೂಲೆ ಕಥೆ : ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದಿಂದ ಗೆಲುವು ಸಾಧಿಸಿದರೆ, ಸಿಎಂ ಆಗಬಹುದು ಎಂಬ ನಂಬಿಕೆ ಡಿಕೆಶಿ ಅವರದ್ದು. ಈ ಕ್ಷೇತ್ರ ದೇವಮೂಲೆಯಲ್ಲಿರುವುದರಿಂದ ಇಲ್ಲಿನ ಗೆಲುವು ಅದೃಷ್ಟದ ಸಂಕೇತ ಎನ್ನುವುದು ವಾಡಿಕೆ. ಜ್ಯೋತಿಷಿಯೊಬ್ಬರು ಚನ್ನಪಟ್ಟಣದಿಂದ ಗೆಲುವು ಸಾಧಿಸಿದರೆ ಸಿಎಂ ಯೋಗ ಇದೆ ಎಂದು ಡಿಕೆಶಿಗೆ ಹೇಳಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಇಲ್ಲಿಂದ ಗೆದ್ದ ಕುಮಾರಸ್ವಾಮಿ ಹಾಗೂ ಕೆಂಗಲ್ ಹನುಮಂತಯ್ಯ ಸಿಎಂ ಆಗಿದ್ದ ಇತಿಹಾಸವೂ ಇದೆ.



