ನಾಮಪತ್ರ ಸಲ್ಲಿಕೆಯ ಕೊನೆ ದಿನ ಇದ್ದಕ್ಕಿದ್ದಂತೆ ಒಂದು ಸೆನ್ಸೇಷನ್ ಸೃಷ್ಟಿಯಾಯ್ತು. ಕನಕಪುರ ಕ್ಷೇತ್ರದಿಂದ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿಬಿಟ್ಟರು. ಘೋಷಣೆ ಮಾಡಿಯೇ ಹೋಗಿದ್ದ ಕಾರಣ, ನಿಗೂಢವಾಗಿಯೇನೂ ಇರಲಿಲ್ಲ. ಅಣ್ಣನ ವಿರುದ್ಧ ತಮ್ಮ ಸ್ಪರ್ಧೆ ಎಂದು ಯಾರೂ ಸುದ್ದಿ ಮಾಡಲಿಲ್ಲ. ಶಿವಕುಮಾರ್ ಮಾತನ್ನು ಸುರೇಶ್ ಯಾವ ರೀತಿ ಪಾಲಿಸುತ್ತಾರೆ ಎನ್ನುವುದನ್ನು ನೋಡಿರುವವರಿಗೆ ಆ ಬಗ್ಗೆ ಲವಶೇಷ ಅನುಮಾನವೂ ಬರಲಿಲ್ಲ. ಡಿಕೆ ಸುರೇಶ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುತ್ತಿದ್ದಂತೆಯೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಉದ್ಭವವಾದವು. ಅವುಗಳಲ್ಲಿ ಮೊದಲನನೆ ಭಯ ನಾಮಪತ್ರ ತಿರಸ್ಕøತಗೊಳ್ಳುವ ಭೀತಿ.
ಹೀಗೆಯೇ ಇರಬೇಕು ನಾಮಪತ್ರ :
ನಾಮಪತ್ರ ಸಲ್ಲಿಸುವವರು ತಮ್ಮ ಪೌರತ್ವ ದಾಖಲೆ(ವೋಟರ್ ಐಡಿ), ಜಾತಿ ಪ್ರಮಾಣ ಪತ್ರ, ಆಸ್ತಿ ಲೆಕ್ಕ, ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರಲ್ಲಿ ಇರುವ ಒಟ್ಟಾರೆ ಆಸ್ತಿಯ ವಿವರ, (ಮಕ್ಕಳು ವಯಸ್ಕರಾಗಿ, ಪ್ರತ್ಯೇಕವಾಗಿದ್ದರೆ, ತಂದೆ-ತಾಯಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಅವರ ದಾಖಲೆ ಸಲ್ಲಿಸುವ ಅಗತ್ಯ ಇಲ್ಲ.), ಖರೀದಿಸಿದ ಚಿನ್ನ, ಬೆಳ್ಳಿ, ಮನೆಯಲ್ಲಿರುವ ಐಷಾರಾಮಿ ವಸ್ತುಗಳು, ಕಾರು, ಮನೆ, ಸೈಟು.. ಹೀಗೆ ತಮ್ಮಲ್ಲಿರುವ ಪ್ರತಿಯೊಂದನ್ನೂ ನಮೂದಿಸಬೇಕು. ಪ್ರತಿಯೊಂದಕ್ಕೂ ಕಾಲಂ ಇರುತ್ತವೆ. ಕೆಲವು ಕಾಲಂ ಸಂಬಂಧಪಟ್ಟಿರುವುದಿಲ್ಲ.
ಉದಾಹರಣೆಗೆ : ಮಕ್ಕಳು, ಪತಿ ಅಥವಾ ಪತ್ನಿ ಎಂಬ ಕಾಲಂನಲ್ಲಿ ಅವರು ಮೃತಪಟ್ಟಿದ್ದರೆ ನಮೂದಿಸಬೇಕು. ಇಲ್ಲ ಎಂದಾದರೂ ಬರೆಯಬೇಕು. ಅಕಸ್ಮಾತ್ ಅದು ನನಗೆ ಸಂಬಂಧಪಟ್ಟಿಲ್ಲ ಎಂದು ಹಾಗೆಯೇ ಬಿಟ್ಟರೆ ಅಥವಾ ಇತರೆ ಅರ್ಜಿಗಳಲ್ಲಿ ಮಾಡಿದಂತೆ ಒಂದು ಗೀಟು ಹೊಡೆದು ಮುಂದೆ ಹೋದರೆ ನಾಮಪತ್ರ ತಿರಸ್ಕøತಗೊಳ್ಳಬಹುದು. ಬಿ ಫಾರಂ ಸಲ್ಲಿಸುವಾಗ ಆ ಪಕ್ಷದ ಅಧ್ಯಕ್ಷರಷ್ಟೇ ಅಲ್ಲ, 10 ಸೂಚಕರ ಸಹಿಯೂ ಇರಬೇಕು. ಅವರ ದಾಖಲೆಯೂ ಇರಬೇಕು.
ತಿರಸ್ಕøತ ಮಾಡುವ ಅಧಿಕಾರ ಅಯೋಗಕ್ಕೆ ಇದೆಯೇ..?
ಖಂಡಿತಾ ಇದೆ. ಯಾವುದೇ ಅಧಿಕಾರಿ ಅಭ್ಯರ್ಥಿ ಸಲ್ಲಿಸಿರುವ ದಾಖಲೆ ಸೂಕ್ತವಾಗಿಲ್ಲ ಎಂದು ಎನಿಸಿದರೆ ಅರ್ಜಿಯನ್ನು ತಿರಸ್ಕøತಗೊಳಿಸಬಹುದು. ಆದರೆ ಸ್ವಯಂ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಅರ್ಜಿಯಲ್ಲಿ ನೀಡಿದ ಮಾಹಿತಿಯನ್ನು ಸರಿಯಾಗಿ ತುಂಬಿದ್ದಾರೆಯೇ ಇಲ್ಲವೇ ಎಂಬುದನ್ನಷ್ಟೇ ನೋಡುವುದು ಆಯೋಗದ ಅಧಿಕಾರಿಯ ಕೆಲಸ. ಅಲ್ಲಿ ಅಭ್ಯರ್ಥಿ ಅರ್ಜಿಯನ್ನು ಸೂಕ್ತವಾಗಿ ಭರ್ತಿ ಮಾಡದೇ ಇದ್ದರೆ ತಿರಸ್ಕøತಗೊಳಿಸಬಹುದು. ಅದರ ಹೊರತಾಗಿ ನೀವು ಕೊಟ್ಟಿರುವ ಮಾಹಿತಿ ತಪ್ಪಾಗಿದೆ ಎಂದು ತಿರಸ್ಕಾರ ಮಾಡುವ ಅಧಿಕಾರ ಆಯೋಗದ ಅಧಿಕಾರಿಗೆ ಇಲ್ಲ. ಆದರೆ ನಾಮಪತ್ರ ಪರಿಶೀಲನೆ ವೇಳೆ ಪ್ರತಿಸ್ಪರ್ಧಿಗಳು ಸೂಕ್ತ ದಾಖಲೆ ತೊರಿಸಿ, ಅಭ್ಯರ್ಥಿ ನೀಡಿರುವ ದಾಖಲೆ ಸಮರ್ಪಕವಾಗಿಲ್ಲ ಎಂದು ದೂರು ಕೊಟ್ಟರೆ, ಅದು ಸಮಾಧಾನಕರವಾಗಿದ್ದರೆ ಆಗ ಅರ್ಜಿ ತಿರಸ್ಕøತಗೊಳ್ಳುವ ಅಪಾಯ ಇರುತ್ತದೆ. ಆದರೆ ಅದನ್ನು ತನಿಖೆಗೆ ವಹಿಸಿ ಅರ್ಜಿ ಸ್ವೀಕಾರ ಮಾಡಿದ ಹಲವಾರು ಪ್ರಕರಣಗಳಿವೆ. ಅರ್ಜಿ ತಿರಸ್ಕಾರ ಮಾಡಿಲ್ಲ.
ಡಿಕೆಶಿ ಮತ್ತು ಡಿಕೆಸು ಆತಂಕವೇನು..?
ನೂರು ಮಂದಿ ಬಿಜೆಪಿಯವರು ನನ್ನ ಆಸ್ತಿ ಘೋಷಣೆ ಪ್ರಮಾಣಪತ್ರ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಏನೇನು ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿರುವುದರಿಂದ ಡಿ.ಕೆ. ಸುರೇಶ್ ಅವರಿಂದ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಿಸಿದ್ದೇವೆ. ನಮಗೆ ನಮ್ಮದೇ ಆದ ತಂತ್ರಗಾರಿಕೆ ಇದೆ ಅನ್ನೋದು ಡಿಕೆ ಶಿವಕುಮಾರ್ ಹೇಳಿಕೆ. ಬಿಜೆಪಿಯವರು ನನ್ನ ಆಸ್ತಿ ಪ್ರಮಾಣಪತ್ರ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅವರು ಏನೇನು ಮಾಡುತ್ತಿದ್ದಾರೆ ಎಂಬುದೆಲ್ಲವೂ ನನ್ನ ಗಮನಕ್ಕೆ ಬಂದಿದೆ. ಅವರು ಮಾಡುವ ತಂತ್ರಕ್ಕೆ ನಾವು ಪ್ರತಿ ತಂತ್ರ ಮಾಡುತ್ತಿದ್ದೇವೆ. ಡಿ.ಕೆ. ಸುರೇಶ್ ಯಾಕೆ ನಾಮಪತ್ರ ಸಲ್ಲಿಸಿದ್ದಾರೆ ಎಂಬುದು ನಿಮಗೆ ಶನಿವಾರ ತಿಳಿದುಬರಲಿದೆ ಎಂದು ಹೇಳಿದ್ದಾರೆ.
ಡಿಕೆ ಸುರೇಶ್ ಹೇಳುತ್ತಿರುವುದೂ ಇದನ್ನೇ. ಅಂದಹಾಗೆ ಈ ರೀತಿ ಇಬ್ಬಿಬ್ಬರು ಅರ್ಜಿ ಸಲ್ಲಿಸುವುದು ಹೊಸದೇನಲ್ಲ. ಈಗಾಗಲೇ
ಗೋಪಾಲಯ್ಯ ಹಾಗೂ ಅವರ ಪತ್ನಿ, ಜಾರ್ಜ್ ಹಾಗೂ ಅವರ ಪುತ್ರ, ಡಾ.ರಂಗನಾಥ್ ಹಾಗೂ ಅವರ ಪತ್ನಿ, ಸಚಿವ ಸುಧಾಕರ್ ಹಾಗೂ ಅವರ ಪತ್ನಿ, ಮೇಲುಕೋಟೆಯಲ್ಲಿ ಸುದರ್ಶನ್ ಪುಟ್ಟಣ್ಣಯ್ಯ ಹಾಗೂ ಅವರ ತಾಯಿ ಸುನೀತಾ ಪುಟ್ಟಣ್ಣಯ್ಯ.. ಹೀಗೆ ಹಲವರು ಎರಡೆರಡು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರ ಕುಟುಂಬದಲ್ಲಿ ಈ ರೀತಿಯ ಪ್ರಕರಣ ಇದೇ ಮೊದಲನೆಯದ್ದು.
ಡಿಕೆಶಿ ರಿಟನ್ರ್ಸ್ ತಪ್ಪಾಗಿದೆಯಾ..?
ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಅವರು ಐಟಿ ಅಧಿಕಾರಿಗಳಿಗೆ ನೀಡಿರುವ ಐಟಿ ರಿಟನ್ರ್ಸ್ ಹಾಗೂ ಆಯೋಗಕ್ಕೆ ನೀಡಿರುವ ಐಟಿ ರಿಟನ್ರ್ಸ್ ಎರಡಕ್ಕೂ ಭಾರಿ ವ್ಯತ್ಯಾಸವಿದೆ. ಹೀಗಾಗಿಯೇ ಡಿಕೆಶಿ ನಾಮಪತ್ರ ತಿರಸ್ಕಾರ ಆಗುವ ಆತಂಕವಿದೆ. ಒಂದು ವೇಳೆ ಡಿಕೆಶಿ ನಾಮಪತ್ರ ತಿರಸ್ಕಾರವಾದರೆ ಕಣದಲ್ಲಿ ‘ಕೈ’ ಅಭ್ಯರ್ಥಿಯೇ ಇಲ್ಲದಂತಾಗುತ್ತೆ. ಹೀಗಾಗಿ ಡಿಕೆ ಶಿವಕುಮಾರ್ ನಾಮಪತ್ರ ತಿರಸ್ಕೃತವಾದರೂ ಸಹೋದರ ಇರಲಿ. ಕ್ಷೇತ್ರದಲ್ಲಿ ನಮ್ಮದೇ ಕುಟುಂಬದ ಹಿಡಿತವಿರಲಿ ಎನ್ನುವುದು ಡಿಕೆ ಶಿವಕುಮಾರ್ ಅವರ ಲೆಕ್ಕಾಚಾರ.



