ಅಸೆಂಬ್ಲಿ ಎಲೆಕ್ಷನ್ ತುಂಬಾ ದಿನಗಳೇನೂ ಇಲ್ಲ. ಕೊನೆಯ ಕ್ಷಣದಲ್ಲಿ ಎಂದಿನಂತೆ ಪಕ್ಷಾಂತರ ಪರ್ವ ಶುರುವಾಗಿದೆ. ಕಳೆದ ಬಾರಿ ನಿಂತಿದ್ದ, ಗೆದ್ದಿದ್ದ ಹಾಗೂ ಸೋತಿದ್ದ ಕೆಲವರು ಈಗ ಆ ಪಕ್ಷದಲ್ಲಿ ಇರಲ್ಲ. ಈ ಎಲೆಕ್ಷನ್ನಿನಲ್ಲಿ ಆ ವಿಚಾರದಲ್ಲಿ ಗೊಂದಲ ಮೂಡಿದರೂ ಇದು ಪ್ರತಿ ಚುನಾವಣೆಯಲ್ಲಿ ಜನ ನೋಡುವ ಹಣೆಬರಹ. ನೋಡಿ.. ನೋಡಿ.. ನಮ್ಮ ಪಕ್ಷಕ್ಕೆ ಯಾರ್ ಯಾರೆಲ್ಲ ಬರ್ತಾರೆ ಎಂದು ಎಲ್ಲ ಪಕ್ಷದ ನಾಯಕರೂ ಹೇಳುತ್ತಿದ್ದಾರೆ. ಎಲ್ಲ ಪಕ್ಷದವರೂ ಒಂದಷ್ಟು ಜನರನ್ನು ಕಳಿಸುತ್ತಾ, ಒಂದಿಷ್ಟು ಜನರನ್ನು ರೆಡ್ ಕಾರ್ಪೆಟ್ ಹಾಸಿ ಬನ್ನಿ..ಬನ್ನಿ.. ನಮ್ಮ ಜೊತೆ ಸೇರಿ.. ನಮ್ಮನ್ನೂ ಗೆಲ್ಲಿಸಿ.. ನಮ್ಮ ಪಕ್ಷವನ್ನೂ ಗೆಲ್ಲಿಸಿ ಎನ್ನುತ್ತಿದ್ದಾರೆ.
ಭಾನುವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮಾಜಿ ಶಾಸಕರು ಸೇರಿದಂತೆ ಹಲವು ಮುಖಂಡರ ಸೇರ್ಪಡೆಯಾಗಿದ್ದು, ಅವರು ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ವಿಧಾನಸಭೆಯ ಮಾಜಿ ಸದಸ್ಯ ವೀರಭದ್ರಪ್ಪ ಹಾಲಹರವಿ, ವಿಧಾನಪರಿಷತ್ತಿನ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಹಾಗೂ ಕೋಲಾರದ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷರೂ ಆಗಿರುವ ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್ಗೌಡ ತಮ್ಮ ಬೆಂಬಲಿಗರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ ಭಾನುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ ಅವರ ಆಪ್ತ ಎಚ್.ಡಿ.ತಮ್ಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಅಲ್ಲದೆ, ಬಿಜೆಪಿಯ ಮಾಜಿ ಶಾಸಕರೂ ಆಗಿರುವ ಆರ್ಎಸ್ಎಸ್ನ ಕಟ್ಟಾಳು ಕೆ.ಎಸ್.ಕಿರಣ್ ಕುಮಾರ್ ಅವರು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎನ್ನಲಾಗಿದೆ.
ಬಿಜೆಪಿಯಲ್ಲಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಮೈಸೂರಿನ ಸಂದೇಶ್ ನಾಗರಾಜ್ ಹಾಗೂ ತುಮಕೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಎಚ್.ನಿಂಗಪ್ಪ ಕೂಡ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ವೀರಭದ್ರಪ್ಪ ಹಾಲಹರವಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರೆ, ಘೋಟ್ನೇಕರ್ ಮತ್ತು ವಡಗೂರು ಹರೀಶ್ಗೌಡ ಅವರು ಕಾಂಗ್ರೆಸ್ ಪಕ್ಷ ತೊರೆದು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾದರು. ಮುಂಬರುವ ಚುನಾವಣೆಯಲ್ಲಿ ಹಾಲಹರವಿ ಅವರು ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿದ್ದರೆ, ಘೋಟ್ನೇಕರ್ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸುವುದು ನಿಚ್ಚಳವಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಚ್.ಕೆ.ತಮ್ಮಣ್ಣ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ಅಖಾಡಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಉಪಾಧ್ಯಕ್ಷ ಬಿ.ಎಲ್.ಶಂಕರ್ ಅವರ ಸಮ್ಮುಖದಲ್ಲಿ ಚಿಕ್ಕಮಗಳೂರು ಪುರಸಭೆಯ ಮಾಜಿ ಅಧ್ಯಕ್ಷ, ಸ್ಥಳೀಯ ಲಿಂಗಾಯತ ಮುಖಂಡರೂ ಆದ ಎಚ್.ಡಿ.ತಮ್ಮಯ್ಯ ತಮ್ಮ ಬೆಂಬಲಿಗರೊಂದಿಗೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಪಕ್ಷದ ಬಾವುಟ ನೀಡಿ ನಾಯಕರು ಅವರನ್ನು ಬರಮಾಡಿಕೊಂಡರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ವೈಎಸ್ವಿ ದತ್ತಾ, ಹರೀಶ್, ಗೋಪಿಕೃಷ್ಣ, ಶಿವಶಂಕರಪ್ಪ ಅವರ ನಂತರ ಈಗ ತಮ್ಮಣ್ಣ ಹೀಗೆ ಒಬ್ಬೊಬ್ಬರಾಗಿ ಪ್ರಮುಖ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ.
ಬಿಜೆಪಿಗೆ ಬಂದವರ ಲಿಸ್ಟು ತುಸು ಸಣ್ಣದೇ ಇದೆ ಎನ್ನಬೇಕು. ತುಮಕೂರು ಜಿಲ್ಲೆಯಲ್ಲಿ ಮುದ್ದಹನುಮೇಗೌಡ, ಮಂಡ್ಯದಲ್ಲಿ ಸಚ್ಚಿದಾನಂದ, ಕೋಲಾರದಲ್ಲಿ ವರ್ತೂರು ಪ್ರಕಾಶ್ ಬಿಜೆಪಿ ಸೇರಿದ್ದಾರೆ. ಜೆಡಿಎಸ್`ಗೆ ಪಕ್ಷದ ರಾಜ್ಯಾಧ್ಯಕ್ಷರೇ ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್ಸಿನಿಂದ ವಾಪಸ್ ಆದವರು. ಮೊದಲು ದೇವೇಗೌಡರ ಜೊತೆಯಲ್ಲೇ ಇದ್ದವರು. ಕಾಂಗ್ರೆಸ್ಸಿನಲ್ಲಿ ಬೇರೆ ಪಕ್ಷದವರನ್ನು ಕರೆತರುವ ಪ್ರಯತ್ನ ಜೋರಾಗಿಯೇ ನಡೆಯುತ್ತಿದೆ.
ಜೆಡಿಎಸ್ ಗಾಳ ಹಾಕಿರುವುದು : ಶಿವಾಜಿನಗರ ಕ್ಷೇತ್ರದ ರೋಷನ್ ಬೇಗ್ ಪುತ್ರ ಹಾಗೂ ಮೈಸೂರಿನ ತನ್ವೀರ್ ಸೇಠ್ ಅವರಿಗೆ ಪ್ರಪೋಸಲ್ ಇಟ್ಟಿದ್ದಾರೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ, ಪರಮೇಶ್ವರ್ ಸೇರಿದಂತೆ ಕೆಲವು ನಾಯಕರನ್ನು ಸಂಪರ್ಕ ಮಾಡಿದ್ದಾರಾದರೂ, ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ.
ಬಿಜೆಪಿಯಲ್ಲಿ ಆಪರೇಷನ್ : ಬೇರೆ ಪಕ್ಷದಿಂದ ಕೆಲವು ನಾಯಕರನ್ನ ಪಕ್ಷಕ್ಕೆ ಕರೆತನ್ನಿ ಎಂದು ಬಸವರಾಜ ಬೊಮ್ಮಾಯಿಯವರಿಗೆ ಹೈಕಮಾಂಡ್ ಅದರಲ್ಲೂ ಹೆಚ್ಚಾಗಿ ಅಮಿತ್ ಶಾ ಹೇಳಿದ್ದರು. ಆದರೆ ಬೊಮ್ಮಾಯಿಯವರಿಗೆ ಅದು ಸಾಧ್ಯವಾಗದೆ ಕೊನೆಗೆ ಯಡಿಯೂರಪ್ಪ ಅವರಿಗೇ ಈ ಆಫರ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಜೊತೆ ಹಲವರು ಮಾತನಾಡುತ್ತಿದ್ದರೆ. ಯಾರೂ ಕೂಡಾ ಯಡಿಯೂರಪ್ಪ ಅವರೊಂದಿಗೆ ಮಾತನಾಡದೆ ಹೋಗುತ್ತಿಲ್ಲ. ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ನಿಮಗೇ ಪಕ್ಷದಲ್ಲಿ ಸ್ಥಾನಮಾನ ಹೆಚ್ಚು ಕಮ್ಮಿ ಆಗಿರುವಾಗ ಯಾರನ್ನು ನಂಬಿ ಪಕ್ಷಕ್ಕೆ ಬರೋಣ ಹೇಳಿ ಎನ್ನುವುದು ಅವರ ಒಂದೇ ಮಾತು. ಮಾತು ಮುಗಿಸಿದ ಮೇಲೆ ಯಡಿಯೂರಪ್ಪನವರೇ ನನ್ನ ಗೆಲುವಿಗೆ ನಿಮ್ಮ ಆಶೀರ್ವಾದ ಬೇಕು ಎಂದು ಕಾಲು ಮುಗಿಯುತ್ತಿದ್ದಾರೆ. ವಿಧಿಯಿಲ್ಲದೆ ಆಶೀರ್ವದಿಸಿ ಕಳಿಸುತ್ತಿದ್ದಾರೆ ಯಡಿಯೂರಪ್ಪ.
ಕಾಂಗ್ರೆಸ್‍ನಲ್ಲಿ : ಹಾಗೆ ನೋಡಿದರೆ ಈ ಚುನಾವಣೆಯಲ್ಲಿ ಅತೀ ಹೆಚ್ಚು ಜನರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಕಾಂಗ್ರೆಸ್. ಹಾಸನದಲ್ಲಿ ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ, ಹಾವೇದಿಯಲ್ಲಿ ಯು.ಬಿ.ಬಣಕಾರ್, ತುಮಕೂರಿನಿಂದ ಕಿರಣ್.. ಹೀಗೆ ಹಲವರು ಟಿಕೆಟ್`ಗೆ ಯಸ್ ಎಂದಮೇಲೆಯೇ ಕಾಂಗ್ರೆಸ್ ಸೇರಿದ್ದಾರೆ.



