ರಾಜ್ಯ ರಾಜಕೀಯ ರಂಗೇರುತ್ತಿದ್ದಂತೆಯೇ ವಲಸೆಯೂ ಶುರುವಾಗಿದೆ. ಅಲ್ಲಿಂದ ಇಲ್ಲಿಗೆ.. ಇಲ್ಲಿಂದ ಅಲ್ಲಿಗೆ ಹಾರುವವರ ಸಂಖ್ಯೆಗೇನೂ ಕೊರತೆ ಇಲ್ಲ. ರಾಜ್ಯದ ಎಲ್ಲ ಕಡೆಯೂ ನಡೆಯುತ್ತಿದೆ. ಇತ್ತೀಚೆಗೆ ಬಿಜೆಪಿಗೆ ಆಮ್ ಆದ್ಮಿ ಪಕ್ಷದಿಂದ ಭಾಸ್ಕರ್ ರಾವ್ ಬಿಜೆಪಿಗೆ ಸೇರ್ಪಡೆಯಾದರು. ಅಷ್ಟೇ ಅಲ್ಲ, ಪಕ್ಷೇತರರಾಗಿ ನಿಂತು ಗೆದ್ದಿದ್ದ ಸುಮಲತಾ ಅಂಬರೀಷ್ ಕೂಡಾ ಬಿಜೆಪಿ ಕದ ತಟ್ಟುತ್ತಿರೋ ಸೂಚನೆಗಳಿವೆ. ಬಹಿರಂಗವಾಗಿಯೇ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಅತ್ತ ಜೆಡಿಎಸ್‍ನ ಶಿವಲಿಂಗೇ ಗೌಡ, ಎ.ಟಿ.ರಾಮಸ್ವಾಮಿ ಕಾಂಗ್ರೆಸ್ ಕದ ತಟ್ಟಿದ್ದಾಗಿದೆ. ಕಾಂಗ್ರೆಸ್ ನಾಯಕರು ಅವರಿಗೆ ರತ್ನ ಗಂಬಳಿ ಸ್ವಾಗತ ಹಾಕಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್‍ನಿಂದ ಬಿಜೆಪಿಗೆ ಆಪರೇಷನ್ ಆಗಿ ಬಂದು ಗೆದ್ದಿದ್ದ, ಮಂತ್ರಿಯೂ ಆಗಿದ್ದ ನಾರಾಯಣ ಗೌಡ ಈಗಾಗಲೇ ಕಾಂಗ್ರೆಸ್ ಬಾಬಾ ಅಂತಿದೆ ಎಂದು ಹೇಳಿದ್ದಾರೆ. ಜಂಪಿಂಗ್ ಸ್ಟಾರ್ಸ್ ಲಿಸ್ಟ್ ದೊಡ್ಡದಾಗುತ್ತಲೇ ಇದೆ.
ತುಮಕೂರು ಜಿಲ್ಲೆಯಲ್ಲಿ.. :
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಗುಡ್ಡೇನಹಳ್ಳಿ, ಸೂಳೇಕೆರೆ, ಗೊಟ್ಟೀಕೆರೆ, ಮೊರಸರಕೊಟ್ಟಿಗೆಯ ಹಲವು ಮುಖಂಡರು ಜೆಡಿಎಸ್ ತ್ಯಜಿಸಿ ಶಾಸಕ ಮಸಾಲಾ ಜಯರಾಮ್ ಮತ್ತು ತಾಲೂಕು ಬಿಜೆಪಿ ಅಧ್ಯಕ್ಷ ಕಲ್ಕೆರೆ ಮೃತ್ಯುಂಜಯರವರ ಸಮ್ಮುಖ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಎಪಿಎಂಸಿಯ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ತಾಲೂಕು ಬಿಜೆಪಿಯ ಮಾಜಿ ಅಧ್ಯಕ್ಷ ದುಂಡ ರೇಣುಕಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಡೊಂಕಿಹಳ್ಳಿ ಪ್ರಕಾಶ್, ವಿ.ಬಿ.ಸುರೇಶ್, ಕಾಳಂಜೀಹಳ್ಳಿ ಸೋಮಣ್ಣ, ವಕೀಲ ಮುದ್ದೇಗೌಡ, ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ನಾಗಲಾಪುರ ಮಂಜಣ್ಣ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಕಲ್ಬುರ್ಗಿಯಲ್ಲಿ..:
ಕಲ್ಬುರ್ಗಿಯಲ್ಲಿ ಜೇವರ್ಗಿ ಮತಕ್ಷೇತ್ರದಲ್ಲಿ ಶಾಸಕ ಡಾ. ಅಜಯ್ ಸಿಂಗ್ ಅವರೊಂದಿಗೆ ಯುವ ಮುಖಂಡರುಗಳಾದ ದಾವುದ್ ಡಿಕೆ, ನಝೀರ್ ಪಟೇಲ್ ಸಿರಸಗಿ, ಸುನಿಲ ರಾಜಾಹುಲಿ ಜಗ್ಗಪ್ಪ ಸರಡಗಿ, ಭೀರಲಿಂಗ, ಸಿದ್ದು ಯಕ್ಕಂಚಿ, ಮುದಕಪ್ಪ ಹಿರಿಪೂಜಾರಿ, ಶರಣು, ಮಾಂತು ಮಡಿವಾಳ್, ಶಿವು ಇಟಗಿ, ಧನರಾಜ್ ಸರಗಡಗಿ, ವಿಶ್ವರಾಧ್ಯ, ನಿಂಗು, ಮಲ್ಲು, ಭೀಮಾ ಶಂಕರ, ರೇವು, ಪ್ರಜ್ವಲ್, ಶಾಂತಪ್ಪ, ಶಿವರಾಜ, ಭಾಗೇಶ, ಮಾನಪ್ಪ, ಶೇಖರ, ಅಂಬರೀಶ, ಶರಣಪ್ಪ, ವಿನೋದ, ಮಹೇಶ, ಪರಶುರಾಮ, ಮೌನೇಶ ಸೇರಿದಂತೆ ಅನೇಕ ಯುವಕರು ಕಾಂಗ್ರೆಸ್ ಸೇರ್ಪಡೆಯಾದರು.
ಸುಮಲತಾ ಅವರಿಗೆ ಬೇರೆ ಆಯ್ಕೆಯೇ ಇಲ್ಲವಾ..?
ಸುಮಲತಾ ಅವರು ಯಾವ ಪಕ್ಷಕ್ಕೆ ಸೇರಬೇಕು ಎಂಬ ವಿಚಾರದಲ್ಲಿ ಅಭಿಮಾನಿಗಳ ಅಭಿಪ್ರಾಯ ಸಂಗ್ರಹ ಮಾಡುತ್ತಿರಬಹುದು. ಆದರೆ ಸುಮಲತಾ ಅವರಿಗೆ ಉಳಿದಿರುವುದು ಬಿಜೆಪಿ ಮಾತ್ರ ಎನ್ನುವುದು ಓಪನ್ ಸೀಕ್ರೆಟ್. ಒಂದೋ ಸುಮಲತಾ ಅವರು ಬಿಜೆಪಿ ಸೇರಬೇಕು. ಇಲ್ಲವೇ ಇದುವರೆಗೆ ಇದ್ದಂತೆಯೇ ಪಕ್ಷೇತರರಾಗಿಯೇ ಉಳಿಯಬೇಕು. ಏಕೆಂದರೆ ಸುಮಲತಾ ಗೆದ್ದಿದ್ದು ಜೆಡಿಎಸ್‍ನ ವರಿಷ್ಠ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ. ಸುಮಲತಾ ಮೇಲಿನ ವಾಗ್ದಾಳಿಯನ್ನು ಕುಮಾರಸ್ವಾಮಿ ಇವತ್ತಿಗೂ ನಿಲ್ಲಿಸಿಲ್ಲ. ಇನ್ನು ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಜೊತೆಗಿದ್ದರಾದರೂ ಈಗ ಅಸೆಂಬ್ಲಿ ಎಲೆಕ್ಷನ್ ಎದುರಿಸಬೇಕು. ಡಿಕೆ ಶಿವಕುಮಾರ್ ವಿರುದ್ಧ ಈಗಾಗಲೇ ಸುಮಲತಾ ಮಾತನಾಡಿದ್ದಾರೆ. ಹೀಗಾಗಿ ಸುಮಲತಾಗೆ ಕಾಂಗ್ರೆಸ್ ಡೋರ್ ಕ್ಲೋಸ್. ಈಗ ಅವರು ಬಿಜೆಪಿ ಸೇರಬೇಕು. ಅಥವಾ ಪಕ್ಷೇತರರಾಗಿ ಉಳಿಯಬೇಕು. ಮೂರನೇ ಆಯ್ಕೆ ಆಮ್ ಆದ್ಮಿ ಪಕ್ಷವೂ ಇದೆ ಎನ್ನುವ ತರಲೆ ಸುದ್ದಿಗೇನೂ ಕಡಿಮೆ ಇಲ್ಲ.



